ಕ್ರೀಡೆ

ಪುಲ್ವಾಮ ಉಗ್ರ ದಾಳಿ: ಪಾಕ್‌ ಕ್ರಿಕೆಟಿಗರ ಚಿತ್ರ ತೆಗೆದು ಹಾಕಿದ ಕರ್ನಾಟಕ ಕ್ರಿಕೆಟ್ ಸಂಸ್ಥೆ

ಬೆಂಗಳೂರು: ಕಾಶ್ಮೀರದ ಪುಲ್ವಾಮಾದಲ್ಲಿ ಸೇನೆಯ ಮೇಲೆ ನಡೆದ ಭಯೋತ್ಪಾದನೆ ದಾಳಿಯನ್ನು ಖಂಡಿಸಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು (ಕೆಎಸ್‌ಸಿಎ) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿದ್ದ ಪಾಕಿಸ್ತಾನ ಆಟಗಾರರ ಭಾವಚಿತ್ರಗಳನ್ನು ತೆರವುಗೊಳಿಸಿದೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಕರ್ನಾಟಕ ಕ್ರಿಕೆಟ್ ಸಂಸ್ಥೆಯ ಹಂಗಾಮಿ ಕಾರ್ಯದರ್ಶಿ ಸುಧಾಕರ್ ರಾವ್ ಅವರು, ಪುಲ್ವಾಮದಲ್ಲಿ ಸೈನಿಕರ ಮೇಲೆ ನಡೆದ ದಾಳಿ ನಿಜಕ್ಕೂ ಖಂಡನೀಯ. ಪಾಕಿಸ್ತಾನ ಮೂಲದ ಉಗ್ರರ ಕೃತ್ಯಕ್ಕೆ ಕರ್ನಾಟಕ ಕ್ರಿಕೆಟ್ ಸಂಸ್ಥೆ ಖಂಡನೆ ವ್ಯಕ್ತಪಡಿಸುತ್ತದೆ. ಹೀಗಾಗಿ ಕ್ರೀಡಾಂಗಣದಲ್ಲಿದ್ದ ಎಲ್ಲ ಪಾಕ್ ಕ್ರಿಕೆಟಿಗರ ಭಾವಚಿತ್ರಗಳನ್ನು ತೆರವು ಮಾಡಲಾಗಿದೆ. ಮಾಜಿ ಕ್ರಿಕೆಟಿಗ ಹಾಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಪಾಕಿಸ್ತಾನ ಕ್ರಿಕೆಟ್ ದಂತಕಥೆಗಳಾದ ವಾಸೀಂ ಅಕ್ರಂ ಮತ್ತು ಇಂಜಮಾಮ್ ಉಲ್ ಹಕ್ ಸೇರಿದಂತೆ ಎಲ್ಲ ಪಾಕ್ ಆಟಗಾರರ ಚಿತ್ರಗಳನ್ನು ಎರಡು ದಿನಗಳ ಹಿಂದೆ ತೆರವುಗೊಳಿಸಿದ್ದೇವೆ ಎಂದು ಹೇಳಿದರು. ಅಂತೆಯೇ ದೇಶದ ಪ್ರತಿಯೊಬ್ಬ ನಾಗರೀಕನಿಗೂ ದೇಶವೇ ಮೊದಲು. ಆಬಳಿಕವೇ ಉಳಿದದ್ದು. ನಮಗೂ ಕೂಡ ದೇಶ ಮೊದಲು. ಕೆಎಸ್‌ಸಿಎ ಮಾತ್ರವಲ್ಲ. ದೇಶದ ಬೇರೆ ಬೇರೆ ರಾಜ್ಯ ಕ್ರಿಕೆಟ್‌ ಸಂಸ್ಥೆಗಳಲ್ಲಿ ಇದೇ ರೀತಿಯ ಪ್ರತಿಭಟನೆಗಳು ವ್ಯಕ್ತವಾಗಿವೆ ಎಂದೂ ರಾವ್ ಹೇಳಿದರು.
ಫೆಬ್ರುವರಿ 14ರಂದು ದಾಳಿಯಾದ ಎರಡು ದಿನಗಳ ನಂತರ ಮುಂಬೈನ ಕ್ರಿಕೆಟ್ ಕ್ಲಬ್‌ ಆಫ್‌ ಇಂಡಿಯಾ (ಸಿಸಿಐ) ತನ್ನ ರೆಸ್ಟೋರೆಂಟ್‌ನಲ್ಲಿದ್ದ ಪಾಕಿಸ್ತಾನದ ಈಗಿನ ಪ್ರಧಾನಿ ಮತ್ತು ಕ್ರಿಕೆಟಿಗ ಇಮ್ರಾನ್ ಖಾನ್ ಅವರ ಭಾವಚಿತ್ರಕ್ಕೆ ಹೊದಿಕೆ ಹಾಕಿ ಮುಚ್ಚಿತ್ತು. ಅದರ ನಂತರ ಮೊಹಾಲಿ, ರಾಜಸ್ಥಾನ ಮತ್ತಿತರ ಕಡೆಗಳಲ್ಲಿ ಪಾಕ್ ಕ್ರಿಕೆಟ್‌ ಆಟಗಾರರ ಚಿತ್ರಗಳನ್ನು ತೆರವುಗೊಳಿಸಲಾಗಿತ್ತು. ಇದೀಗ ಕರ್ನಾಟಕ ಕ್ರಿಕೆಟ್ ಸಂಸ್ಛೆ ಕೂಡ ತನ್ನ ಕಚೇರಿಯಲ್ಲಿದ್ದ ಪಾಕ್ ಕ್ರಿಕೆಟಿಗರ ಭಾವಚಿತ್ರಗಳನ್ನು ತೆರವುಗೊಳಿಸಿದೆ.
 

About the author

ಕನ್ನಡ ಟುಡೆ

Leave a Comment