ಸುದ್ದಿ

ಪೈಲಟ್ ಮೊದಲ ಸಂಬಳ ಗೋ ಶಾಲೆಗೆ

ವಿಜಯಪುರ: ವಿಜಯಪುರದ ದಿಟ್ಟ ಯುವತಿ ಪ್ರೀತಿ ಇಂಡಿಗೋ ಏರ್​ಲೈನ್ಸ್​ನಲ್ಲಿ ಸೇವೆಗೆ ಸೇರುವ ಮೂಲಕ ಜಿಲ್ಲೆಯ ಮೊದಲ ಪೈಲಟ್ ಎಂಬ ಇತಿಹಾಸ ಬರೆದಿದ್ದಾರೆ. ತನ್ನ ಮೊದಲ ಸಂಬಳವನ್ನು ಗೋಶಾಲೆಗೆ ಮೀಸ ಲಿಟ್ಟಿರುವುದು ಈಕೆಯ ಸಾಧನೆ ಜತೆಗಿನ ಮತ್ತೊಂದು ಹೆಗ್ಗಳಿಕೆ.

ನಗರದ ಔಷಧ ವ್ಯಾಪಾರಸ್ಥ ಸುಧೀರ ಬಿರಾದಾರ ಪುತ್ರಿ ಪ್ರೀತಿ ಬಿರಾದಾರ ಎರಡು ತಿಂಗಳ ಹಿಂದೆಯೇ ಗಗನ ಸೇವೆಗೆ ಸೇರ್ಪಡೆಯಾಗಿದ್ದಾರೆ. ಮೂಲತಃ ವಿಜಯಪುರದವರೇ ಆದ ಪ್ರೀತಿ ಸೈನಿಕ ಶಾಲೆ ಶಿಶುನಿಕೇತನ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ಕೇಂದ್ರೀಯ ವಿದ್ಯಾಲಯದಲ್ಲಿ ಪ್ರೌಢ ಶಿಕ್ಷಣ ಮುಗಿಸಿದ್ದರು.

ನಂತರ ಪಿಡಿಜೆ ಮತ್ತು ಸಿಕ್ಯಾಬ್ ಕಾಲೇಜಿನಿಂದ ಪಿಯು ಶಿಕ್ಷಣ ಪಡೆದಿದ್ದಾರೆ. ನಂತರ ಹುಬ್ಬಳ್ಳಿಯ ಬಿ.ವಿ. ಭೂಮರಡ್ಡಿ ಕಾಲೇಜಿನಿಂದ ಇಂಜಿನಿಯರಿಂಗ್(ಇಸಿ) ಪದವಿ ಪಡೆದು ಎನ್​ಎಫ್​ಟಿಎ (ನ್ಯಾಷನಲ್ ಫ್ಲೈಯಿಂಗ್ ಟ್ರೇನಿಂಗ್ ಅಕಾಡೆಮಿ)ಗೆ ಆಯ್ಕೆಯಾದರು. ಮಹಾರಾಷ್ಟ್ರದಲ್ಲಿರುವ ಈ ಅಕಾಡೆಮಿಯಲ್ಲಿ ತರಬೇತಿ ಪಡೆದ ಪ್ರೀತಿ ಎರಡು ತಿಂಗಳ ಮಟ್ಟಿಗೆ ದುಬೈನಲ್ಲಿ ಹೆಚ್ಚುವರಿ ತರಬೇತಿ ಪಡೆದಿದ್ದಾರೆ. ಸದ್ಯ ಒಪ್ಪಂದದ ಮೇರೆಗೆ ಇಂಡಿಗೋ ಏರ್​ಲೆನ್ಸ್​ನಲ್ಲಿ ಸೇವೆಗೆ ಹಾಜರಾಗಿದ್ದಾರೆ.

ಪೈಲಟ್ ಆಗುವ ಕನಸು ನನಸಾದರೆ ಮೊದಲ ತಿಂಗಳ ಸಂಬಳವನ್ನು ಗೋಶಾಲೆಗೆ ಮೀಸಲಿಡುವುದಾಗಿ ತಂದೆ , ಮಗಳು ಮೊದಲೇ ನಿರ್ಧರಿಸಿದ್ದರು. ಅದರಂತೆ ಮೊದಲ ಸಂಬಳ ಬರುತ್ತಿದ್ದಂತೆ ಜಿಲ್ಲೆಗಾಗಮಿಸಿದ ಪ್ರೀತಿ ತಂದೆಯೊಡಗೂಡಿ ಕಗ್ಗೋಡ ಗೋಶಾಲೆಗೆ ಚೆಕ್ ವಿತರಿಸಿದರು. ಕಗ್ಗೋಡ ಗೋಶಾಲೆ ಹಾಗೂ ಸಿದ್ಧೇಶ್ವರ ಸಂಸ್ಥೆಯಿಂದ ಪ್ರೀತಿ ಕುಟುಂಬಕ್ಕೆ ಜಿಲ್ಲೆ ಪರವಾಗಿ ಪುರಸ್ಕರಿಸಲಾಯಿತು.

About the author

ಕನ್ನಡ ಟುಡೆ

Leave a Comment