ರಾಷ್ಟ್ರ ಸುದ್ದಿ

ಪ್ರಜಾಪ್ರಭುತ್ವಕ್ಕಿಂತ ಯಾರೂ ದೊಡ್ಡವರಲ್ಲ, ಎಲ್ಲರೂ ಸಮಾನರು: ತೀರ್ಪು ಕುರಿತು ಮಮತಾ ಬ್ಯಾನರ್ಜಿ

ಕೋಲ್ಕತ್ತಾ: ಕೊಲ್ಕತ್ತಾ  ಪೊಲೀಸ್ ಕಮೀಷನರ್  ರಾಜೀವ್ ಕುಮಾರ್ ಅವರನ್ನು ಬಂಧಿಸದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿಗೆ ನಾವು ಬದ್ಧರಾಗಿದ್ದು. ಇಂತಹ ತೀರ್ಪು ಅಧಿಕಾರಿಗಳಲ್ಲಿ ನೈತಿಕ ಬಲವನ್ನು ಹೆಚ್ಚಿಸುತ್ತದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಕೇಂದ್ರ ಸರ್ಕಾರದ ವಿರುದ್ಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡೆಸುತ್ತಿರುವ ಸಂವಿಧಾನ ಉಳಿಸಿ ಧರಣಿ 3ನೇ ದಿನಕ್ಕೆ ಕಾಲಿಟ್ಟಿದ್ದು, ಸಿಬಿಐ ಮುಂದೆ ಹಾಜರಾಗುವಂತೆ ಕೊಲ್ಕತ್ತಾ  ಪೊಲೀಸ್ ಕಮೀಷನರ್  ರಾಜೀವ್ ಕುಮಾರ್ ಅವರಿಗೆ ಸುಪ್ರೀಂಕೋರ್ಟ್ ನಿರ್ದೇಶಿಸಿದೆ. ಅಲ್ಲದೇ ಸಿಬಿಐಗೆ ಸಹಕಾರ ನೀಡುವಂತೆಯೂ ಸೂಚಿಸಿದೆ. ಆದರೆ ಅವರನ್ನು ಬಂಧಿಸದಂತೆ ಸಿಬಿಐ ಅಧಿಕಾರಿಗಳಿಗೆ ಸೂಚಿಸಿದೆ.

ಸುಪ್ರೀಂ ಕೋರ್ಟ್ ತೀರ್ಪು ಬಂದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ ಇದು ನೈತಿಕತೆಗೆ ಸಿಕ್ಕ ಸಾಂವಿಧಾನಿಕ ಗೆಲುವು ಎಂದು ಬಣ್ಣಿಸಿದ್ದಾರೆ. ಕೋಲ್ಕತ್ತಾ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರು ತಾವು ಲಭ್ಯರಾಗುವುದಿಲ್ಲ ಎಂದು ಎಂದೂ ಹೇಳಿಲ್ಲ. ಏನೇ ಸಂಶಯಗಳಿದ್ದರೂ ನಿಗದಿತ ಸ್ಥಳದಲ್ಲಿ ಭೇಟಿ ಮಾಡಿ ಚರ್ಚೆ ಮಾಡಿ ಬಗೆಹರಿಸಿಕೊಳ್ಳೋಣ ಎಂದು ಹೇಳಿದ್ದರು.

ಆದರೆ ಸಿಬಿಐ ಅಧಿಕಾರಿಗಳು ರಾಜೀವ್ ಕುಮಾರ್ ಅವರನ್ನು ಬಂಧಿಸಲು ನೋಡಿದರು. ರಹಸ್ಯ ಕಾರ್ಯಾಚರಣೆಯಲ್ಲಿ ಕಳೆದ ಭಾನುವಾರ ನೊಟೀಸ್ ನೀಡದೆಯೇ ಅವರ ನಿವಾಸಕ್ಕೆ ಹೋದರು ಎಂದು ಮಮತಾ ಬ್ಯಾನರ್ಜಿ ಟೀಕಿಸಿದರು. ಈ ದೇಶದಲ್ಲಿ ಪ್ರಜಾಪ್ರಭುತ್ವಕ್ಕಿಂತ ಯಾರೂ ದೊಡ್ಡವರಲ್ಲ ಪ್ರತಿಯೊಬ್ಬರೂ ಸಮಾನರು. ಯಾರಾದರೊಬ್ಬರನ್ನು ಕರೆದು ಬಂಧಿಸಿದ ತಕ್ಷಣ ಅವರು ಕೋರ್ಟ್ ಗೆ ಹೋಗುವುದಿಲ್ಲ. ಸಿಬಿಐಗೆ ಅದರದ್ದೇ ಆದ ನ್ಯಾಯಾಲಯವಿದೆ. ಇಂತಹ ವರ್ತನೆ ಮಾಡಿದರೆ ಜನರಿಗೆ ನ್ಯಾಯ ಸಿಗುವುದು ಹೇಗೆ. ನಾನು ಕೇವಲ ರಾಜೀವ್ ಕುಮಾರ್ ಪರ ಮಾತ್ರ ಹೋರಾಡುತ್ತಿಲ್ಲ. ಲಕ್ಷಾಂತರ ಜನರ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದೇನೆ ಎಂದು ಮಮತಾ ಸಮರ್ಥಿಸಿಕೊಂಡರು. ಸಿಬಿಐ ಮತ್ತು ಕೋಲ್ಕತ್ತಾ ಪೊಲೀಸರ ನಡುವಿನ ಜಗಳ ಕೇವಲ ರಾಜಕೀಯ ಉದ್ದೇಶದಿಂದ ಕೂಡಿದೆ ಎಂದು ಸಹ ಟೀಕಿಸಿದರು.ತಮ್ಮ ಧರಣಿಯನ್ನು ಮುಂದುವರಿಸುತ್ತೀರಾ ಎಂದು ಕೇಳಿದ್ದಕ್ಕೆ, ನಾನು ಆತುರದಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಇಂದು ಹಲವು ವಿರೋಧ ಪಕ್ಷದ ನಾಯಕರು ಇಲ್ಲಿಗೆ ಬರುತ್ತಿದ್ದಾರೆ. ಇಲ್ಲಿ ನಾನೊಬ್ಬಳೇ ಹೋರಾಟ ನಡೆಸುತ್ತಿಲ್ಲ. ನನ್ನ ಜೊತೆ ಜನರಿದ್ದಾರೆ. ಅವರ ಜೊತೆ ಮಾತನಾಡಿ ಚರ್ಚಿಸಿ ಹೇಳುತ್ತೇನೆ ಎಂದರು. ಸುಪ್ರೀಂ ಕೋರ್ಟ್ ತೀರ್ಪಿಗೆ ಪ್ರತಿಕ್ರಿಯಿಸಿದ ದೀದಿ, ಇದು ಕೇವಲ ನನ್ನೊಬ್ಬಳ ಗೆಲುವಲ್ಲ. ಸಂವಿಧಾನದ ಗೆಲುವು, ಭಾರತದ ಉಳಿವಿನ ಗೆಲುವು, ನಮ್ಮ ಚಳವಳಿ ಯಾವತ್ತಿಗೂ ಜನತೆಯ ಪರವಾಗಿ. ನಮಗೆ ಆಗುತ್ತಿರುವ ಅನ್ಯಾಯವನ್ನು ಅನೇಕ ವರ್ಷಗಳಿಂದ ನೋಡಿ ಸಹಿಸಿಕೊಂಡು ಬಂದಿದ್ದೇನೆ. ಅನ್ಯಾಯವನ್ನು ನೋಡಿದಾಗಲೆಲ್ಲ ನನ್ನ ಮನ ಕರಗುತ್ತಿತ್ತು ಎಂದರು.

About the author

ಕನ್ನಡ ಟುಡೆ

Leave a Comment