ರಾಜಕೀಯ

ಪ್ರಜ್ವಲ್ ಗೆ ಹಾಸನ ಬಿಟ್ಟು ಕೊಟ್ಟ ಎಚ್.ಡಿ.ದೇವೇಗೌಡ: ವೇದಿಕೆಯಲ್ಲೇ ಅಪ್ಪ ಮಗ ಮೊಮ್ಮಗನ ಕಣ್ಣೀರು

ಹಾಸನ: ನಾನು ಈ ಬಾರಿ ಹಾಸನ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸದಿರಲು ನಿರ್ಧರಿಸಿದ್ದೇನೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಬುಧವಾರ ಅಧಿಕೃತವಾಗಿ ಘೋಷಿಸುವ ಮೂಲಕ ಮೊಮ್ಮಗ ಪ್ರಜ್ವಲ್ ರೇವಣ್ಣಗೆ ತಮ್ಮ ಕ್ಷೇತ್ರವನ್ನು ಬಿಟ್ಟು ಕೊಟ್ಟಿದ್ದಾರೆ. ಹೊಳೆನರಸೀಪುರದ ಮೂಡಲಹಿಪ್ಪೆ ಗ್ರಾಮದಿಂದ ಜೆಡಿಎಸ್ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ ಅವರು ಮೂಡಲಹಿಪ್ಪೆ ಗ್ರಾಮದಲ್ಲಿರುವ ಚನ್ನಕೇಶವ ದೇವಾಲಯಕ್ಕೆ ಮೊಮ್ಮಗ ಪ್ರಜ್ವಲ್ ರೇವಣ್ಣ, ಪುತ್ರ ರೇವಣ್ಣ, ಸೊಸೆ ಭವಾನಿ ರೇವಣ್ಣ, ಪಕ್ಷದ ಶಾಸಕರ ಜೊತೆ ಆಗಮಿಸಿ ನಾಮಪತ್ರವನ್ನು ಇಟ್ಟು ಪೂಜೆ ಸಲ್ಲಿಸಿದರು. ಮೂಡಲಹಿಪ್ಪೆಯ ಚನ್ನಕೇಶವ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ತೆರದ ವಾಹನದಲ್ಲಿ ಮಾಜಿ ಪ್ರಧಾನಿ ದೇವೇಗೌಡ, ಅಭ್ಯರ್ಥಿ ಪ್ರಜ್ವಲ್, ಸಚಿವ ರೇವಣ್ಣ ದಂಪತಿ ಪ್ರಚಾರ ನಡೆಸಿದರು. ಬಳಿಕ ಮೂಡಲಹಿಪ್ಪೆಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ದೇವೇಗೌಡರು, ಮೊಮ್ಮಗನನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ. ಗೆಲ್ಲಿಸುವ ಜವಾಬ್ದಾರಿ ನಿಮ್ಮದೇ ಎಂದು ಹೇಳಿದರು. ಈ ವೇಳೆ ದೇವೇಗೌಡ, ಶಾಸಕ ಬಾಲಕೃಷ್ಣ, ಸಚಿವ ಎಚ್.ಡಿ. ರೇವಣ್ಣ ಅವರು ಭಾವೋದ್ವೇಗಕ್ಕೆ ಒಳಗಾಗಿ ಗದ್ಗದಿತರಾಗಿ ಕಣ್ಣೀರು ಹಾಕಿದರು. ಭಾವನಾತ್ಮಕ ಭಾಷಣ ಮಾಡಿದ ಗೌಡರು, ತಮ್ಮನ್ನು ಪುತ್ರ ವ್ಯಾಮೋಹಿ ಎನ್ನುತ್ತಾರೆ. ಮಕ್ಕಳು ಮತ್ತು ಕುಟುಂಬಕ್ಕಾಗಿ ಕೆಲಸ ಮಾಡುವುದಾಗಿ ಆರೋಪಿಸುತ್ತಾರೆ. ಆದರೆ ನಾನು ಯಾರಿಗೆ ಮೋಸ ಮಾಡಿದ್ದೇನೆ ನೀವೆ ಹೇಳಿ ಎಂದು ಪ್ರಶ್ನಿಸಿ ಕಣ್ಣೀರು ಹಾಕಿದರು. ಆಗ ಪ್ರಜ್ವಲ್ ರೇವಣ್ಣ ಅವರ ಕಣ್ಣಲ್ಲೂ ಕಣ್ಣೀರು ಜಿನುಗಿತು. ಪ್ರಜ್ವಲ್ ರೇವಣ್ಣ ಅವರನ್ನು ಅಭ್ಯರ್ಥಿ ಮಾಡುವ ತೀರ್ಮಾನ ತಮ್ಮದಲ್ಲ. ಕ್ಷೇತ್ರದ ಕಾರ್ಯಕರ್ತರು ಮತ್ತು ನಾಯಕರ ಒತ್ತಾಸೆಯ ಮೇರೆಗೆ ಅಭ್ಯರ್ಥಿಯಾಗಿ ಪ್ರಕಟಿಸಲಾಗಿದೆ. ನಿಮ್ಮ ಅಪೇಕ್ಷೆಯಂತೆ ನನ್ನ ಮೊಮ್ಮಗನನ್ನು ಕಣಕ್ಕಿಳಿಸಿದ್ದೇನೆ. ಇದರಲ್ಲಿ ಯಾವ ಸ್ವಾರ್ಥವಿದೆ ಎಂದರು. ಪ್ರಜ್ವಲ್ ಅಭ್ಯರ್ಥಿಯಾದರೆ ನಮ್ಮವರು ಬೇರೆ ಪಕ್ಷಕ್ಕೆ ಹೋಗುತ್ತೇವೆ ಎಂದು ಬೆದರಕೆ ಹಾಕುತ್ತಾರೆ. ಆದರೆ ನಿಮ್ಮೆಲ್ಲರ ಆಶಯದಂತೆ ನನ್ನ ಮೊಮ್ಮಗನನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ. ಆಶಿರ್ವಾದ ಮಾಡಿ ಎಂದರು. ಇದಕ್ಕೂ ಮುನ್ನ ಶಾಸಕ ಬಾಲಕೃಷ್ಣ ಮಾತನಾಡಿ, ಇದು ತಮ್ಮ ಕೊನೆಯ ಲೋಕಸಭಾ ಚುನಾವಣೆ ಎಂದು ದೇವೇಗೌಡರು ನೀಡಿರುವ ಹೇಳಿಕೆಯನ್ನು ನೆನೆದು ಕಣ್ಣೀರು ಸುರಿಸಿದರು. ಇದನ್ನು ನೋಡಿ ರೇವಣ್ಣ ಅವರು ಟವೆಲ್ ನಿಂದ ಕಣ್ಣೀರು ಒರೆಸಿಕೊಂಡರು.

About the author

ಕನ್ನಡ ಟುಡೆ

Leave a Comment