ರಾಜಕೀಯ

ಪ್ರಧಾನಿ ಹುದ್ದೆಯನ್ನೇ ಬಿಟ್ಟ ಕುಟುಂಬ ನಮ್ಮದು, ಸಿಎಂ ಸ್ಥಾನಕ್ಕೆ ಅಂಟಿ ಕೂರುತ್ತೇವಾ: ಎಚ್‌ಡಿಕೆ

ಬೆಂಗಳೂರು: ಪ್ರಧಾನಿ ಹುದ್ದೆಯನ್ನೇ ತ್ಯಾಗ ಮಾಡಿದ ಕುಟುಂಬ ನಮ್ಮದು. ಇನ್ನು ಕೇವಲ ಮುಖ್ಯಮಂತ್ರಿ ಸ್ಥಾನಕ್ಕೆ ಅಂಟಿ ಕೂರುತ್ತೇವಾ? ಜನರಿಗೆ ಮೋಸ ಮಾಡಿ ನಾನು ಸಿಎಂ ಸ್ಥಾನದಲ್ಲಿ ಇರುತ್ತೇನಾ? ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಬುಧವಾರ ಪ್ರಶ್ನಿಸಿದ್ದಾರೆ.
ಇಂದು ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಜೆಡಿಎಸ್ ರಾಷ್ಟ್ರೀಯ ಅಧಿವೇಶನದಲ್ಲಿ ಮಾತನಾಡಿದ ಸಿಎಂ ಕುಮಾರಸ್ವಾಮಿ, ಮುಖ್ಯಮಂತ್ರಿ ಸ್ಥಾನಕ್ಕೆ ನಾನು ರಾಜೀನಾಮೆ ನೀಡುತ್ತೇನೆ ಅಂತ ಹೇಳಿದ್ದು ನಿಜ. ಮಿತ್ರ ಪಕ್ಷದವರು ನನ್ನ ಮೇಲೆ ತೀವ್ರ ಒತ್ತಡ ಹೇರಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ನನಗೆ ಉಸಿರಾಡಲು ಪುರುಸೊತ್ತಿಲ್ಲದಂತೆ ಕೆಲಸ ಮಾಡುತ್ತಿದ್ದೇನೆ. ಎಷ್ಟು ಅಂತ ಕಾಂಗ್ರೆಸ್ ಶಾಸಕರ ಕಾಟ ತೆಡೆದುಕೊಳ್ಳಲು ಸಾಧ್ಯ ಎಂದಿದ್ದಾರೆ. ಅವತ್ತು ಕೇಂದ್ರದಲ್ಲಿ ಪ್ರಧಾನಿಯಾಗಲು ಯಾರೂ ಸಿದ್ಧರಿರಲಿಲ್ಲ. ದೇವೇಗೌಡರನ್ನು ಬಲವಂತದಿಂದ ಕರೆದುಕೊಂಡು ಹೋಗಿ ಕೂರಿಸಿದರು. ಆ ಸ್ಥಾನ ಬಿಡಬೇಕಾದರೆ ಗೌಡರು ತ್ಯಾಗ ಮಾಡಿ ಬಂದರು. ಅಂತಹ ಕುಟುಂಬ ನಮ್ಮದು ಎಂದರು.
ಸಾಲಮನ್ನಾ ಬಗ್ಗೆ ಇನ್ನೂ ಅನುಮಾನವೇ? ಜನವರಿ 25ರವರೆಗೆ 2.5 ಲಕ್ಷ ರೈತ ಕುಟುಂಬಗಳಿಗೆ ಸಾಲಮನ್ನಾ ಆದೇಶ ಹೋಗಿದೆ. ಸಿದ್ದರಾಮಯ್ಯ ಅವರು ಮಾಡಿದ್ದ ಸಾಲಮನ್ನಾದ ಹಣ ಬಾಕಿ ಇತ್ತು. ಅದನ್ನು ನಾವು ತೀರಿಸಿದ್ದೇವೆ ಎಂದರು. ಸಾಲಮನ್ನಾ ಮಾಡಿದರೂ ಕೂಡ ನನ್ನ ಮೇಲೆ ಅನುಮಾನ ಪಡುತ್ತಿದ್ದಾರೆ. ನರೇಂದ್ರ ಮೋದಿ ಅವರ ಕೈಯಲ್ಲೂ ಸಾಲಮನ್ನಾವನ್ನು ಲಾಲಿಪಪ್ ಎಂದು ಹೇಳಿಸುತ್ತಿದ್ದಾರೆ. ಸಿದ್ದರಾಮಯ್ಯ ಕಾಲದ ಸಾಲಮನ್ನಾದ 3,800 ಕೋಟಿ ಬಾಕಿ ಉಳಿದಿತ್ತು. ಅದನ್ನು ನಮ್ಮ ಸರ್ಕಾರದಲ್ಲಿ ಕೊಟ್ಟಿದ್ದೇನೆ. ಫೆ.8 ರಂದು ಬಜೆಟ್‌ನಲ್ಲಿ 44 ಲಕ್ಷ ರೈತರ ಸಾಲಮನ್ನಾ ಆಗುತ್ತದೆ ಎಂದರು.
ಪಕ್ಷದ ಕಚೇರಿಯಲ್ಲಿ ಮಾತನಾಡಬೇಕಾದರೆ ನಾನು ಕಣ್ಣೀರಾಕಿದೆ. ಇಂದು ಕೂಡ ನನ್ನ ಮನಸ್ಸಿನಲ್ಲಿ ನೋವಿದೆ. ಆ ನೋವನ್ನು ಮರೆತು ಜನತೆಯ ಕಷ್ಟ ನಿವಾರಿಸಲು ಕೆಲಸ ಮಾಡುತ್ತಿದ್ದೇನೆ. ನಾನು ತುಂಬಾ ಸೂಕ್ಷ್ಮ ವ್ಯಕ್ತಿ. ನಾನು ಯಾರನ್ನು ಭೇಟಿ ಮಾಡುತ್ತಿಲ್ಲ, ನಾನು ಮುಖಂಡರಿಗೆ ಸಿಗುತ್ತಿಲ್ಲ, ವರ್ಗಾವಣೆ ಮಾಡಿಕೊಡುತ್ತಿಲ್ಲ, ನಾನು ಯಾರಿಗೂ ಸಿಗುತ್ತಿಲ್ಲ ಎಂದು ವಾಟ್ಸಾಪ್‌ನಲ್ಲಿ ಸಂದೇಶ ಹರಿಬಿಡುತ್ತಿದ್ದಾರೆ. ನಾನು ವರ್ಗಾವಣೆ ದಂಧೆ ಮಾಡಿಕೊಂಡು ಕೂರಲಾ ಎಂದು ಕೇಳಿದರು.

About the author

ಕನ್ನಡ ಟುಡೆ

Leave a Comment