ರಾಜ್ಯ ಸುದ್ದಿ

ಪ್ರಸಿದ್ಧ ಹಾಸನಾಂಬ ಜಾತ್ರೆ ಇಂದು ಆರಂಭ

ಹಾಸನ: ಜಿಲ್ಲೆಯ ಪ್ರಸಿದ್ಧ ಹಾಸನಾಂಬ ದೇಗುಲದ ಬಾಗಿಲು ಗುರುವಾರ ಮಧ್ಯಾಹ್ನ ತೆರೆಯಲಿದೆ. ಇಂದಿನಿಂದ 9ರವರೆಗೆ ದೇಗುಲದ ಬಾಗಿಲು ತೆರೆದಿರುತ್ತಿದೆ. ಆದರೆ ಇಂದು ಮತ್ತು ಕಡೆಯ ದಿನ ಸಾರ್ವಜನಿಕ ದರ್ಶನಕ್ಕೆ ಅವಕಾಶವಿರುವುದಿಲ್ಲ. ಉಳಿದ 7 ದಿನಗಳು ದೇವರಿಗೆ ನೈವೇದ್ಯ ನೀಡುವ ಸಮಯ ಹೊರತುಪಡಿಸಿ ದಿನದ 24 ಗಂಟೆಯೂ ಹಾಸನಾಂಬ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲು ಜಿಲ್ಲಾಡಳಿತ ನಿರ್ಧರಿಸಿದೆ.ಆಶ್ವಿ‌ಜ ಮಾಸದ ಹುಣ್ಣಿಮೆಯ ನಂತರ ಬರುವ ಗುರುವಾರ ಬಾಗಿಲು ತೆರೆದು, ಬಲಿಪಾಡ್ಯಮಿಯ ಮರುದಿನ ಬಾಗಿಲು ಮುಚ್ಚುವ ಸಂಪ್ರದಾಯದಂತೆ ಇಂದು ಮಧ್ಯಾಹ್ನ ತೆರೆಯಲಾಗುತ್ತದೆ.

ನ.9ರಂದು ದೇವಾಲಯದ ಬಾಗಿಲನ್ನು ಮುಚ್ಚಲಾಗುವುದು. ದೇವಿಯ ಗರ್ಭಗುಡಿಯ ಬಾಗಿಲು ತೆರೆಯುವ ಮುನ್ನ ದೇಗುಲದ ಆವರಣದಲ್ಲಿ ತಳವಾರ ಸಮುದಾಯದವರು ಸೇರುತ್ತಾರೆ.ಅವರು ಗರ್ಭಗುಡಿಯ ಎದುರು ದೇಗುಲದ ಆವರಣದಲ್ಲಿ ಬನ್ನಿ ಮುಡಿದ ಬಾಳೆ ಕಂದು ನೆಡುತ್ತಾರೆ. ದೇವಾಲಯದ ಗರ್ಭಗುಡಿಯ ಬಾಗಿಲು ತೆಗೆಯುವ ಶುಭ ಮುಹೂರ್ತ ಆರಂಭವಾಗುವ ಕ್ಷಣದಲ್ಲಿ ತಳವಾರ ಸಮುದಾಯದ ನಂಜರಾಜೇ ಅರಸ್‌ ಅವರು ಬನ್ನಿ ಪತ್ರೆ ಮುಡಿದ ಬಾಳೆಕಂದನ್ನು ಕಡಿದುರುಳಿಸುತ್ತಾರೆ. ತಕ್ಷಣ ಮಂಗಳವಾದ್ಯಗಳ ಘೋಷದೊಂದಿಗೆ ದೇವಿಯ ಗರ್ಭಗುಡಿಯ ಬಾಗಿಲು ತೆರೆಯುತ್ತದೆ.ಇದರೊಟ್ಟಿಗೆ ಜಾತ್ರಾ ಮಹೋತ್ಸವ ಆರಂಭವಾಗುತ್ತದೆ. ವರ್ಷಕ್ಕೊಮ್ಮೆ ಮಾತ್ರ ದೇವಾಲಯದ ಬಾಗಿಲು ತೆರೆಯುವುದು ಇಲ್ಲಿನ ವಿಶೇಷ. ಬಾಗಿಲು ಮುಚ್ಚುವಾಗ ಹಚ್ಚಿದ ಹಣತೆ ಮುಂದಿನ ವರ್ಷ ಬಾಗಿಲು ತೆರೆಯುವವರೆಗೂ ಉರಿಯುತ್ತಿರುತ್ತದೆ. ದೇವರಿಗೆ ಮುಡಿಸಿದ್ದ ಹೂವು ಬಾಡದೆ ಹೊಸತಾಗಿರುತ್ತದೆ. ನೈವೇದ್ಯ ಹಳಸದೆ ವರ್ಷ ಪೂರ್ತಿ ಹಸನಾಗಿರುತ್ತದೆ ಎಂಬ ವಿಶೇಷ ಈ ಹಾಸನಾಂಬೆ ದೇವಾಲಯದ್ದು.

About the author

ಕನ್ನಡ ಟುಡೆ

Leave a Comment