ರಾಜ್ಯ ಸುದ್ದಿ

ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ವರ್ಗಾವಣೆಗೆ ಚುನಾವಣಾ ಆಯೋಗ ಹಸಿರು ನಿಶಾನೆ

ಬೆಂಗಳೂರು :ರಾಜ್ಯ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ರಾಜ್ಯ ಚುನಾವಣಾ ಆಯೋಗ ಹಸಿರು ನಿಶಾನೆ ತೋರಿದ್ದು, ವರ್ಗಾವಣೆ ಪಡೆದ ಶಿಕ್ಷಕರಿಗೆ ಚುನಾವಣೆ ನಂತರ ನೇಮಕಾತಿ ಆದೇಶ ನೀಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸೂಚಿಸಿದೆ. ಮೂರು ಲೋಕಸಭಾ ಕ್ಷೇತ್ರ, ಎರಡು ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿರುವುದರಿಂದ ಚುನಾವಣಾ ಆಯೋಗ ಬಳ್ಳಾರಿ, ಶಿವಮೊಗ್ಗ, ಉಡುಪಿ, ರಾಮನಗರ, ದಾವಣಗೆರೆ, ಬಾಗಲಕೋಟೆ, ಮೈಸೂರು ಮತ್ತು ಮಂಡ್ಯದಲ್ಲಿ ನೀತಿ ಸಂಹಿತೆ ಜಾರಿ ಮಾಡಿದೆ.

ಚುನಾವಣಾ ನೀತಿ ಸಂಹಿತೆ ಇರುವುದರಿಂದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಡೆಸಬಹುದೇ ಎಂದು ಇಲಾಖೆಯ ಆಯುಕ್ತರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರು. ಆಯೋಗದ ಅಪರ ಮುಖ್ಯ ಚುನಾವಣಾಧಿಕಾರಿ ಡಾ.ಕೆ.ಜಿ.ಜಗದೀಶ್‌ ಅವರು, ಕೇಂದ್ರೀಕೃತ ವ್ಯವಸ್ಥೆಯಡಿ ಆನ್‌ಲೈನ್‌ ಮೂಲಕ ಜಿಲ್ಲಾ ಹಂತದಲ್ಲಿ ಶಿಕ್ಷಕರ ವರ್ಗಾವಣೆ ನಡೆಯುವುದರಿಂದ, ನೀತಿ ಸಂಹಿತೆ ಜಾರಿಯಲ್ಲಿರುವ ಜಿಲ್ಲೆ ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ವರ್ಗಾವಣೆ ಪ್ರಕ್ರಿಯೆ ನಡೆಸಲು ಅನುಮತಿ ನೀಡಿದ್ದಾರೆ. ನೀತಿ ಸಂಹಿತೆ ಜಾರಿಯಲ್ಲಿರುವ 8 ಜಿಲ್ಲೆಗಳಲ್ಲಿ  ಚುನಾವಣಾ ಪ್ರಕ್ರಿಯೆ ಮುಗಿಯುವವರೆಗೂ ವರ್ಗಾವಣೆ ಹೊಂದಿದ ಶಿಕ್ಷಕರ ಬಿಡುಗಡೆ ಮತ್ತು ಹಾಜರಾತಿ ಕ್ರಮಗಳನ್ನು ಕೈಗೊಳ್ಳದಂತೆ ಸೂಚನೆ ನೀಡಿದೆ.

 

About the author

ಕನ್ನಡ ಟುಡೆ

Leave a Comment