ಕ್ರೈಂ

ಪ್ರಿಯಕರನ ಕೈ ಕತ್ತರಿಸಲು ಪ್ರೇಯಸಿ ಪೇದೆ ಸುಪಾರಿ ಕೊಟ್ಟಿದ್ದೇಕೆ

ಬೆಂಗಳೂರು: ಬನ್ನೇರುಘಟ್ಟ ಉದ್ಯಾನವನ ವ್ಯಾಪ್ತಿಯ ಬೆಟ್ಟದಲ್ಲಿ ಯುವಕನ ಕೈ ಕತ್ತರಿಸಿದ್ದ ಪ್ರಕರಣಕ್ಕೆ ಟ್ವಿಸ್ಟ್​ ಸಿಕ್ಕಿದ್ದು, ಕೈ ಕತ್ತರಿಸಲು ಪ್ರೇಯಸಿಯೇ ಸುಪಾರಿ ಕೊಟ್ಟಿರುವ ಸಂಗತಿ ತನಿಖೆಯಿಂದ ಬೆಳಕಿಗೆ ಬಂದಿದೆ. ಸೆ.11ರಂದು ಪ್ರೇಯಸಿ ಜತೆ ಬನ್ನೇರುಘಟ್ಟಕ್ಕೆ ತೆರಳಿದ್ದಾಗ ಸಂಜೆ 5 ಗಂಟೆ ಸುಮಾರಿಗೆ ಸುಲಿಗೆ ನೆಪದಲ್ಲಿ ಬಂದ ಕೆಲವರು ಆತನ ಕೈ ಕಟ್​ ಮಾಡಿ, ಅನುಮಾನ ಬರದೆ ಇರಲಿ ಎಂದು ಮೊಬೈಲ್ ಹಾಗೂ ಪರ್ಸ್ ಕಸಿದುಕೊಂಡು ಹೋಗಿದ್ದರು. ಘಟನೆ ವೇಳೆ ಯುವತಿ ಪ್ರಜ್ಞೆ ತಪ್ಪಿ ಬಿದ್ದಿದ್ದಳು.

ಘಟನೆ ನಂತರ ರವೀಶ್​ ಬನ್ನೇರುಘಟ್ಟ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರಿಗೆ ತನಿಖೆ ವೇಳೆ ಸತ್ಯ ತಿಳಿದುಬಂದಿದೆ. ವಿಚಾರಣೆ ವೇಳೆ ತಾನು ತಪ್ಪು ಮಾಡಿರುವುದಾಗಿ ರವೀಶ್​ ಪ್ರೇಯಸಿ ಜಯಲಕ್ಷ್ಮಿ ತಪ್ಪೊಪ್ಪಿಕೊಂಡಿದ್ದಾಳೆ. ಪ್ರಕರಣ ಸಂಬಂಧ ಬನ್ನೇರುಘಟ್ಟ ಪೊಲೀಸರು ಜಯಲಕ್ಷ್ಮಿ ಸೇರಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಮೂಲತಃ ಮಧುಗಿರಿಯವನಾದ ಗಾಯಾಳು ರವೀಶ್ ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್ ಆಗಿದ್ದ. 9 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ರವೀಶ್​ ತನ್ನ ಅಣ್ಣ ಶಿವಕುಮಾರ್ ಜತೆ ಅನೇಕಲ್​ನ ಎರಂಡಹಳ್ಳಿಯಲ್ಲಿ ವಾಸವಾಗಿದ್ದ. 2016ರಲ್ಲಿ ರವೀಶ್​ಗೆ ಜಯಲಕ್ಷ್ಮಿ ಎಂಬ ಮಹಿಳೆ ಪರಿಚಯವಾಗಿತ್ತು. ವೃತ್ತಿಯಲ್ಲಿ ಮಹಿಳಾ ಪೊಲೀಸ್ ಪೇದೆ ಯಾಗಿರುವ ಜಯಲಕ್ಷ್ಮಿ ಹಾಗೂ ರವೀಶ್​ ನಡುವೆ ಪ್ರೀತಿ ಮೂಡಿತ್ತು. ಆದರೆ, ಪಾಲಕರು ಒಪ್ಪದ ಕಾರಣ ಇಬ್ಬರೂ ದೂರವಾಗಿದ್ದರು. ಈ ನಡುವೆ ಆಕೆಗೆ ಮತ್ತೊಬ್ಬನ ಜತೆ ವಿವಾಹವಾಗಿತ್ತು. ಸಾಂಸಾರಿಕ ಕಲಹದ ಕಾರಣ ಜಯಲಕ್ಷ್ಮಿ ಗಂಡನಿಂದಲೂ ದೂರಾಗಿ, ವಿಚ್ಛೇದನಕ್ಕೂ ಅರ್ಜಿ ಸಲ್ಲಿಸಿದ್ದಳೆನ್ನಲಾಗಿದೆ.

ಈ ನಡುವೆ ಮತ್ತೆ ರವೀಶ್​ನೊಂದಿಗೆ ಗೆಳೆತನ ಮುಂದುವರಿದಿತ್ತು. ಈ ವೇಳೆ ಜಯಲಕ್ಷ್ಮಿ ತನ್ನನ್ನು ಮದುವೆಯಾಗು ಎಂದು ರವೀಶ್​ನೊಂದಿಗೆ ಕೇಳಿಕೊಂಡಿದ್ದಾಳೆ. ಆದರೆ, ಆಕೆಗೆ ಮೊದಲೆ ಮದುವೆ ಆಗಿದ್ದರಿಂದ ರವೀಶ್​ ಮದುವೆ ಪ್ರಸ್ತಾಪ ಮಾಡದಂತೆ ಸೂಚಿಸಿದ್ದಾನೆ. ಕೋಪಗೊಂಡ ಜಯಲಕ್ಷ್ಮಿ ರವೀಶ್​ಗೆ ಸುಪಾರಿ ಕೊಟ್ಟು ಕೈ ಅಥವಾ ಕಾಲು ಕಟ್ ಮಾಡಿಸಬೇಕು. ಹೀಗೆ ಮಾಡಿದರೆ ಆತನನ್ನು ಯಾರು ಮದುವೆ ಆಗುವುದಿಲ್ಲ. ಆಗ ಅನಿವಾರ್ಯವಾಗಿ ತನ್ನ ಬಳಿ ಬರುತ್ತಾನೆ ಎಂದು ಪ್ಲ್ಯಾನ್​ ಮಾಡಿ ಈ ಕೃತ್ಯ ಎಸಗಿ ಕೆಲ ಯುವಕರಿಗೆ ಸುಪಾರಿ ನೀಡಿದ್ದಾಳೆ. ಹಾಗೇ ಕೈ ಕತ್ತರಿಸಿದ ನಂತರ ಅಲ್ಲೆ ಬಿಡಬೇಡಿ ನೀವೆ ತೆಗೆದುಕೊಂಡು ಹೋಗಿ, ಇಲ್ಲದಿದ್ದರೆ ಚಿಕಿತ್ಸೆ ನೀಡಿ ಸರಿಪಡಿಸಬಹುದು ಎಂದು ಸೂಚಿಸಿದ್ದಾಳೆ.

About the author

ಕನ್ನಡ ಟುಡೆ

Leave a Comment