ರಾಷ್ಟ್ರ ಸುದ್ದಿ

ಪ್ರಿಯಾಂಕಾ ವಾದ್ರಾ ಬಂದಿದ್ದೇ ತಡ, ಬಂಗಾಳ, ಆಂಧ್ರದಲ್ಲಿ ಕೈ ಮೈತ್ರಿ ಮಾತೇ ಇಲ್ಲ

ನವದೆಹಲಿ: ಪ್ರಿಯಾಂಕಾ ವಾದ್ರಾ ಸಕ್ರಿಯ ರಾಜಕೀಯಕ್ಕೆ ಬರುತ್ತಿದ್ದಂತೆಯೇ ಕಾಂಗ್ರೆಸ್ ಪಕ್ಷಕ್ಕೆ ಆನೆ ಬಲ ಬಂದಂತಾಗಿದ್ದು, ಈ ಹಿಂದೆ ಪಶ್ಚಿಮ ಬಂಗಾಳ ಮತ್ತು ಆಂಧ್ರ ಪ್ರದೇಶದಲ್ಲಿ ಮೈತ್ರಿಗೆ ಹಾತೊರೆಯುತ್ತಿದ್ದ ಕಾಂಗ್ರೆಸ್ ಪಕ್ಷ ಇದೀಗ ಇಲ್ಲಿ ಮೈತ್ರಿ ಕುರಿತು ನಿರ್ಲಕ್ಷ್ಯ ತೋರುತ್ತಿದೆ.
ಈ ಹಿಂದೆ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ಟಿಎಂಸಿ ಪಕ್ಷ ಮತ್ತು ಆಂಧ್ರ ಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಪಕ್ಷಗಳೊಂದಿಗೆ ಕಾಂಗ್ರೆಸ್ ಮೈತ್ರಿ ಮಾತುಕತೆ ನಡೆಸಲು ಉತ್ಸುಕತೆ ತೋರಿತ್ತು. ಆದರೆ ಇತ್ತೀಚಿನ ಬೆಳವಣಿಗೆ ಬಳಿಕ ಕಾಂಗ್ರೆಸ್ ಪಕ್ಷದಿಂದ ಇಂತಹ ಯಾವುದೇ ನಡೆ ಕಂಡುಬಂದಿಲ್ಲ. ಪ್ರಮುಖವಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸುತ್ತಿರುವುದು ಮತ್ತು ಇದಕ್ಕೆ ಕೆಲ ಯುಪಿಎ ಮೈತ್ರಿ ಪಕ್ಷಗಳೂ ಬೆಂಬಲ ನೀಡಿರುವುದು ಕಾಂಗ್ರೆಸ್ ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಕಾಂಗ್ರೆಸ್ ಪಕ್ಷದಿಂದ ಪ್ರಧಾನಿ ಅಭ್ಯರ್ಥಿಯಾಗಿ ಈ ವರೆಗೂ ಯಾರನ್ನೂ ಅಧಿಕೃತವಾಗಿ ಘೋಷಣೆ ಮಾಡಿಲ್ಲವಾದರೂ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರೇ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಲಾಗುತ್ತಿದೆ. ಆದರೆ ರಾಹುಲ್ ನೇತೃತ್ವಕ್ಕೆ ಯುಪಿಎ ಮಿತ್ರ ಪಕ್ಷಗಳಿಂದಲೇ ಆಂತರಿಕ ಅಸಮಾಧಾನ ಭುಗಿಲೆದ್ದಿದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಯುಪಿಎ ಮಿತ್ರಕೂಟದಲ್ಲೂ ಪ್ರಧಾನಿ ಅಭ್ಯರ್ಥಿಗಳ ಪಟ್ಟಿಯೂ ದೊಡ್ಡದಿದೆ. ಇನ್ನು ಚಂದ್ರ ಬಾಬು ನಾಯ್ಡು ಅವರು ಈ ಹಿಂದೆ ಪರೋಕ್ಷವಾಗಿ ಮಮತಾ ಬ್ಯಾನರ್ಜಿ ಅವರಿಗೆ ತಮ್ಮ ಬೆಂಬಲ ಘೋಷಣೆ ಮಾಡಿದ್ದರು.
ಇದೇ ಕಾರಣಕ್ಕೆ ಕಾಂಗ್ರೆಸ್ ಪಕ್ಷ ಪಶ್ಚಿಮ ಬಂಗಾಳ ಮತ್ತು ಆಂಧ್ರ ಪ್ರದೇಶದಲ್ಲಿ ಈ ವರೆಗೂ ಮೈತ್ರಿ ಘೋಷಣೆ ಮಾಡಿಲ್ಲ ಎಂದು ಹೇಳಲಾಗುತ್ತಿದೆ. ಇದೇ ಪರಿಸ್ಥಿತಿ ಉತ್ತರ ಪ್ರದೇಶದಲ್ಲೂ ಇದ್ದು, ಈಗಾಗಲೇ ಎಸ್ ಪಿ ಮತ್ತು ಬಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದು, ಮಾಯಾವತಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಪರೋಕ್ಷವಾಗಿ ಬಿಂಬಿಸಲಾಗುತ್ತಿದೆ. ಇದೇ ಕಾರಣಕ್ಕೆ ಸ್ವತಃ ಪ್ರಿಯಾಂಕಾ ವಾದ್ರಾ ಅವರನ್ನೇ ಇಲ್ಲಿ ಕಾಂಗ್ರೆಸ್ ಪಕ್ಷ ಕಣಕ್ಕಿಳಿಸಲು ಸಜ್ಜಾಗಿದ್ದು, ಉತ್ತರ ಪ್ರದೇಶದಲ್ಲಿ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದೆ. ಒಟ್ಟಾರೆ ಈ ಬಾರಿಯ ಲೋಕಸಭಾ ಚುನಾವಣೆ ಕಾಂಗ್ರೆಸ್ ಪಕ್ಷಕ್ಕೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.

About the author

ಕನ್ನಡ ಟುಡೆ

Leave a Comment