ರಾಜಕೀಯ

ಬಜೆಟ್ ಅಧಿವೇಶನ: ಕಾಂಗ್ರೆಸ್ ನ 7 ಶಾಸಕರು ಸದನಕ್ಕೆ ಗೈರು, ಉಮೇಶ್ ಜಾಧವ್ ಗೆ ನೋಟಿಸ್

ಬೆಂಗಳೂರು: ಸಮ್ಮಿಶ್ರ ಸರ್ಕಾರದ ಬಜೆಟ್ ಅಧಿವೇಶನದ ಮೊದಲ ದಿನವಾದ ಬುಧವಾರ ಜಂಟಿ ಅಧಿವೇಶನಕ್ಕೆ ಕಾಂಗ್ರೆಸ್ ನಾಲ್ವರು ಅತೃಪ್ತರು ಸೇರಿದಂತೆ ಒಟ್ಟು 7 ಶಾಸಕರು ಗೈರಾಗಿದ್ದರು.
ಅತೃಪ್ತ ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕಮಟಹಳ್ಳಿ, ಡಾ.ಉಮೇಶ್ ಜಾಧವ್, ಬಿ.ನಾಗೇಂದ್ರ ಹಾಗೂ ಶಾಸಕರಾದ ಜಿ.ಎನ್.ಗಣೇಶ್, ಡಾ.ಸುಧಕಾರ್ ಮತ್ತು ಸೌಮ್ಯರೆಡ್ಡಿ ಕಲಾಪದಿಂದ ದೂರ ಉಳಿದಿದ್ದರು. ಇನ್ನು ಕಂಪ್ಲಿ ಶಾಸಕ ಗಣೇಶ್ ಅವರಿಂದ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೊರ ಬಂದ ಶಾಸಕ ಆನಂದ್ ಸಿಂಗ್ ಅವರು ಇಂದು ಕಲಾಪದಲ್ಲಿ ಪಾಲ್ಗೊಂಡರು. ಆದರೆ ನಂತರ ಎದೆನೋವು ಮತ್ತು ವಾಂತಿಯಾಗುತ್ತಿದೆ ಎಂದು ಹೇಳಿ ಮತ್ತೆ ಆನಂದ್ ಸಿಂಗ್ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ರಮೇಶ್ ಜಾರಕಿಹೊಳಿ, ಮಹೇಶ್ ಕಮಟಹಳ್ಳಿ, ಉಮೇಶ್ ಜಾಧವ್ ಹಾಗೂ ನಾಗೇಂದ್ರ ಸರ್ಕಾರದ ವಿರುದ್ಧ ಬಂಡಾಯವೆದ್ದಿದ್ದು, ಒಂದು ತಿಂಗಳಿನಿಂದ ಪಕ್ಷದ ಸಂಪರ್ಕಕ್ಕೆ ಸಿಗದೇ ಕಾಂಗ್ರೆಸಿಗೆ ತಲೆನೋವಾಗಿ ಪರಿಣಮಿಸಿದ್ದಾರೆ. ಪಕ್ಷದಿಂದ ಬೇಸತ್ತಿದ್ದು, ಬಿಜೆಪಿ ಸೇರಲು ಹೆಜ್ಜೆ ಮುಂದೆ ಇಟ್ಟಿದ್ದಾರೆ ಎನ್ನಲಾಗುತ್ತಿದೆ. ಜಿ.ಎನ್.ಗಣೇಶ್ ಶಾಸಕ ಆನಂದ್ ಸಿಂಗ್ ಮೇಲಿನ‌ ಹಲ್ಲೆ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಬಂಧನದ ಭೀತಿಯಿಂದ ಅಧಿವೇಶನಕ್ಕೆ ಗೈರು ಹಾಜರಾಗಿದ್ದಾರೆ. ಪೂರ್ವನಿಯೋಜಿತ ಕಾರ್ಯಕ್ರಮ ನಿಮಿತ್ತ ಅಧಿವೇಶನಕ್ಕೆ ಗೈರಾಗಿದ್ದ ಸೌಮ್ಯರೆಡ್ಡಿ ಸಭಾಧ್ಯಕ್ಷರಿಗೆ ಈ ಸಂಬಂಧ ಪತ್ರ ಬರೆದು ಅನುಮತಿ ಪಡೆದುಕೊಂಡಿದ್ದಾರೆ.
ಇಂದು ಸದನ ಸೇರುತ್ತಿದ್ದಂತೆ ಧರಣಿ ನಡೆಸುತ್ತಿದ್ದ ಬಿಜೆಪಿ ಸದಸ್ಯರು ಮೈತ್ರಿ ಸರ್ಕಾರದ ಹನ್ನೊಂದಕ್ಕೂ ಹೆಚ್ಚು ಮಂದಿ ಕಲಾಪದಿಂದ ದೂರ ಉಳಿದಿದ್ದಾರೆ ಎನ್ನುವ ಮಾಹಿತಿ ಇರುವ ಚೀಟಿಯನ್ನು ಮಾಧ್ಯಮ ಪ್ರತಿನಿಧಿಗಳಿಗೆ ನೀಡಿದರು. ಆದರೆ ಈ ಮಾಹಿತಿ ತಪ್ಪಾಗಿತ್ತು. ಗೊಂದಲ ಸೃಷ್ಟಿಸುವ ಉದ್ದೇಶದಿಂದಲೇ ಬಿಜೆಪಿಯ ಕೆಲವರು ಇಂತಹ ಮಾಹಿತಿ ರವಾನಿಸಿದ್ದರು ಎನ್ನಲಾಗಿದೆ.
ಬಿಜೆಪಿಯ ಮೂವರು ಶಾಸಕರು ಗೈರು: ಬಜೆಟ್ ಅಧಿವೇಶನದ ಮೊದಲ ದಿನ ಪ್ರತಿಪಕ್ಷ ಬಿಜೆಪಿಯ ಮೂವರು ಶಾಸಕರು ಸದನಕ್ಕೆ  ಗೈರಾಗಿದ್ದು, ಪ್ರತಿಪಕ್ಷ ನಾಯಕ ಬಿಎಸ್ ಯಡಿಯೂರಪ್ಪ ಅವರಿಗೆ ತಲೆನೋವಾಗಿ ಪರಿಣಮಿಸಿದೆ. ಬಿಜೆಪಿ ಶಾಸಕರಾದ ಕರುಣಾಕರ ರೆಡ್ಡಿ, ದೊಡ್ಡನಗೌಡ ಪಾಟೀಲ್ ಹಾಗೂ ಸಿಎಂ ನಿಂಬಣ್ಣವರ ಸದನಕ್ಕೆ ಗೈರಾಗಿದ್ದಾರೆ.
ಅಧಿವೇಶನಕ್ಕೆ ಹಾಜರಾಗುವಂತೆ ಉಮೇಶ್ ಜಾಧವ್ ಗೆ ನೋಟಿಸ್
ಸದನದಲ್ಲಿ ಕಡ್ಡಾಯವಾಗಿ ಹಾಜರಿರುವಂತೆ ಪಕ್ಷದ ಸದಸ್ಯರಿಗೆ ಕಾಂಗ್ರೆಸ್‍ ವಿಪ್‍ ಜಾರಿ ಮಾಡಿದ್ದರೂ ಅತೃಪ್ತ ಶಾಸಕ ಉಮೇಶ್ ಜಾಧವ್ ಸದನಕ್ಕೆ ಗೈರು ಹಾಜರಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಜಾಧವ್ ಗೆ ನೋಟಿಸ್ ಜಾರಿಮಾಡಿದ್ದಾರೆ. ಮೇಲ್ಮನೆ ಸದಸ್ಯ ಪ್ರಕಾಶ್ ರಾಥೋಡ್ ಮೂಲಕ ಉಮೇಶ್ ಜಾದವ್ ಗೆ ನೋಟಿಸ್‌ ಕಳುಹಿಸಲಾಗಿದ್ದು, ಇಂದು ಖುದ್ದಾಗಿ ಅಧಿವೇಶನಕ್ಕೆ  ಹಾಜರಾಗುವಂತೆ ಮತ್ತು ಸಿದ್ದರಾಮಯ್ಯ ಅವರನ್ನು ಭೇಟಿಯಾಗುವಂತೆ ನೋಟಿಸ್‍ನಲ್ಲಿ ಸೂಚಿಸಲಾಗಿದೆ.

About the author

ಕನ್ನಡ ಟುಡೆ

Leave a Comment