ರಾಷ್ಟ್ರ ಸುದ್ದಿ

ಬಜೆಟ್ ನಲ್ಲಿ ಬಡವರಿಗೆ ಕನಿಷ್ಠ ಆದಾಯ ಯೋಜನೆ ಘೋಷಣೆ: ರಾಹುಲ್ ಗೆ ಪ್ರಧಾನಿ ನರೇಂದ್ರ ಮೋದಿ ಸಡ್ಡು

ವದೆಹಲಿ: ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿರೆ ಬಡವರಿಗೆ ಕನಿಷ್ಠ ಆದಾಯ ಖಾತರಿ ಯೋಜನೆ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಘೋಷಿಸಿದ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಮಂಡನೆಯಾಗಲಿರುವ ಎನ್ ಡಿಎ ಸರ್ಕಾರದ ಕೊನೆಯ ಬಜೆಟ್ ನಲ್ಲಿ ಸಾರ್ವತ್ರಿಕ ಕನಿಷ್ಠ ಆದಾಯ ಯೋಜನೆ ಘೋಷಿಸಲು ಮುಂದಾಗಿದ್ದಾರೆ. ಈ ಮೂಲಕ ರಾಹುಲ್‌ ಗಾಂಧಿ ಘೋಷಣೆಗೆ ಬಿಜೆಪಿ ಸಡ್ಡು ಹೊಡೆದಿದೆ.
ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಹಿನ್ನೆಡೆಯಾದ ನಂತರ ಎಚ್ಚೆತ್ತುಕೊಂಡಿರುವ ಪ್ರಧಾನಿ ಮೋದಿ ಅವರು, ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಾರ್ವತ್ರಿಕ ಕನಿಷ್ಠ ಆದಾಯ ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಿದ್ದಾರೆ. ಆದರೆ ಈ ಯೋಜನೆಯ ನಿಜವಾದ ಫಲಾನುಭವಿಗಳು ಯಾರು ಮತ್ತು ಇದರ ಇತಿ, ಮಿತಿಗಳು ಏನೆಂದು ಇನ್ನೂ ಸ್ಪಷ್ಟವಾಗಿಲ್ಲ. 2016-17ನೇ ಸಾಲಿನ ಆರ್ಥಿಕ ಸಮೀಕ್ಷೆ ಪ್ರಕಾರ, ಶೇ.75ರಷ್ಟು ಬಡವರಿಗೆ ಕನಿಷ್ಠ ಆದಾಯ ಖಾತ್ರಿ ನೀಡಬೇಕು. ಆದರೆ ಮೋದಿ ಸರ್ಕಾರ ಈ ಯೋಜನೆಗೆ ಹಣ ಹೇಗೆ ಹೊಂದಿಸುತ್ತದೆ ಎಂಬುದು ಈಗ ಬಹುದೊಡ್ಡ ಪ್ರಶ್ನೆಯಾಗಿದೆ. ಈಗಾಗಲೇ ಆಹಾರ ಸಬ್ಸಿಡಿಗಾಗಿ 1 ಲಕ್ಷ 70 ಸಾವಿರ ಕೋಟಿ, ಎಂಎನ್ ಆರ್ ಇಜಿಗೆ 55 ಸಾವಿರ ಕೋಟಿ ರುಪಾಯಿ ನೀಡಲಾಗುತ್ತಿದ್ದು, ಹಣಕಾಸಿನ ಸಮತೋಲನ ಸಾಧಿಸಲು ಸಾಧ್ಯವೆ? ಎಂದು ತಜ್ಞರು ಪ್ರಶ್ನಿಸುತ್ತಿದ್ದಾರೆ.
ಮೋದಿ ಸರ್ಕರಾದ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದ ಅರವಿಂದ್ ಸುಬ್ರಮಣಿಯನ್ ಅವರು 2017ರ ಆರ್ಥಿಕ ಸಮೀಕ್ಷೆಯಲ್ಲಿ ಸಾರ್ವತ್ರಿಕ ಕನಿಷ್ಠ ಆದಾಯ(ಯೂನಿವರ್ಸಲ್ ಬೇಸಿಕ್ ಇನ್ಕಂ) ಎಂಬ ಹೊಸ ವಿಚಾರವನ್ನು ಪ್ರಸ್ತುತಪಡಿಸಿದ್ದರು. ಪ್ರತಿಯೊಬ್ಬ ವ್ಯಕ್ತಿಗೂ ಕನಿಷ್ಠ ಆದಾಯ ಕೊಡುವ ವ್ಯವಸ್ಥೆ ನಿರ್ಮಾಣ ಮಾಡುವುದು ಇದರ ಉದ್ದೇಶ. ಆದರೆ, ಅದಿನ್ನೂ ಕಾಗದದ ಮೇಲಿದೆಯೇ ಹೊರತು ಅನುಷ್ಠಾನಕ್ಕೆ ಬಂದಿಲ್ಲ. ಮೂಲಗಳ ಪ್ರಕಾರ, ಫೆಬ್ರವರಿ 1ರಂದು ನಡೆಯಲಿರುವ ಬಜೆಟ್​ನಲ್ಲಿ ಮೋದಿ ಸರ್ಕಾರವು ಈ ಯೋಜನೆಯನ್ನು ಪ್ರಕಟಿಸುವ ನಿರೀಕ್ಷೆ ಇದೆ. ಈ ಯೋಜನೆ ಅಡಿಯಲ್ಲಿ ದೇಶದ ಎಲ್ಲ ನಾಗರಿಕರಿಗೆ ಇಂತಿಷ್ಟು ಎಂದು ಹಣ ನೀಡಲಾಗುತ್ತದೆ. ದೇಶದ ಎಲ್ಲ ಪ್ರಜೆಗಳಿಗೆ ಜೀವನ ನಡೆಸುವುದಕ್ಕೆ ಅಗತ್ಯ ಇರುವ ಕನಿಷ್ಟ ಹಣ ಒದಗಿಸುವುದು ಈ ಯೋಜನೆಯ ಉದ್ದೇಶ. ನಾಗರಿಕರಲ್ಲಿ ಸಮಾನತೆ ತರುವುದು ಮತ್ತು ಬಡತನ ನಿವಾರಿಸುವುದು ಯೋಜನೆಯ ಮೂಲ ಉದ್ದೇಶ.

About the author

ಕನ್ನಡ ಟುಡೆ

Leave a Comment