ರಾಜ್ಯ ಸುದ್ದಿ

ಬಡ್ತಿ ಮೀಸಲು ಸಂಘರ್ಷ: ಶೇ.18 ಮೀಸಲು ವಿರುದ್ಧ ಸಾಮಾನ್ಯ ನೌಕರರೂ ಕೋರ್ಟ್‌ಗೆ

ಬೆಂಗಳೂರು: ಬಡ್ತಿ ಮೀಸಲು ಪ್ರಕರಣದ ಬಿಕ್ಕಟ್ಟು ಮತ್ತಷ್ಟು ಗೋಜಲಾಗುವ ಲಕ್ಷಣ ಕಾಣಿಸಿಕೊಂಡಿದೆ. ಪರಿಶಿಷ್ಟರ ಹಿತರಕ್ಷಣೆಗಾಗಿ ಸರಕಾರ ಜಾರಿಗೆ ತಂದಿರುವ ಕಾಯಿದೆ ಕುರಿತು ಅಕ್ಟೋಬರ್‌ 23ರಂದು ಬಿ.ಕೆ. ಪವಿತ್ರ ಪ್ರಕರಣದ ಅಂತಿಮ ವಿಚಾರಣೆ ನಡೆಯಲಿದ್ದು, ಬಳಿಕ ತೀರ್ಪು ಪ್ರಕಟವಾಗಲಿದೆ. ಈ ಪ್ರಕರಣದ ತೀರ್ಪಿನ ಬಗ್ಗೆ ತೀವ್ರ ರೀತಿಯ ಅನುಮಾನ ಹಾಗೂ ಕಾತರ ಹೊಂದಿರುವ ಸಾಮಾನ್ಯ ವರ್ಗದ ನೌಕರರು, ಮುಂಬಡ್ತಿಗೆ ಸರಕಾರ ನಿಗದಿಪಡಿಸಿರುವ ಶೇ.18 ರಷ್ಟು ಮೀಸಲು ಪ್ರಮಾಣವನ್ನೇ ನ್ಯಾಯಾಲಯದಲ್ಲಿ ಪ್ರಶ್ನಿಸಲು ಮುಂದಾಗಿದ್ದಾರೆ. ಒಂದು ವೇಳೆ ಸುಪ್ರೀಂ ತೀರ್ಪಿನಲ್ಲಿ ಬಡ್ತಿ ಮೀಸಲು ಪರವಾದ ಸಮಯ-ಸಂದರ್ಭ ಎದುರಾದರೂ, ಅದನ್ನು ಎದುರಿಸಲು ಈಗಿನಿಂದಲೇ ಸರಕಾರಿ ನೌಕರರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಇದರೊಂದಿಗೆ ಬಡ್ತಿ ಮೀಸಲು ವಿಷಯದಲ್ಲಿ ನೌಕರರ ನಡುವಿನ ಸಂಘರ್ಷವು ಇನ್ನಷ್ಟು ಹೆಚ್ಚುವ ಆತಂಕ ಉಂಟಾಗಿದೆ. ರಾಜ್ಯ ಸರಕಾರ ತಂದಿರುವ ಮುಂಬಡ್ತಿ ಕಾಯಿದೆ ಜಾರಿಗೊಳಿಸಲು ಕೋರ್ಟ್‌ ಅನುಮತಿ ನೀಡಿದರೆ ಈಗಾಗಲೇ ಹಿಂಬಡ್ತಿಗೆ ಒಳಗಾಗಿರುವ 3,750 ಪರಿಶಿಷ್ಟ ನೌಕರರಿಗೆ ಅನುಕೂಲವಾಗಲಿದೆ. ಅಂದರೆ ಸಂಖ್ಯಾಧಿಕ ಕೋಟಾದಡಿ (ಸೂಪರ್‌ ನ್ಯೂಮರರಿ) ಈ ನೌಕರರು ಮೊದಲಿನ ಹುದ್ದೆಯನ್ನು ಪುನಃ ಪಡೆಯಲಿದ್ದಾರೆ. ಇದಕ್ಕೆ ಪ್ರತಿರೋಧವೊಡ್ಡಲು ಹೊಸ ಕಾನೂನು ಸಂಘರ್ಷ ಹುಟ್ಟು ಹಾಕಬೇಕು ಎನ್ನುವುದು ಸಾಮಾನ್ಯ ವರ್ಗದ ನೌಕರರದ್ದಾಗಿದೆ. ಶೇ.18ರಷ್ಟು ಮೀಸಲು ನೀಡಿದ್ದನ್ನು ಪ್ರಶ್ನಿಸಿದರೆ ಈ ಪ್ರಕರಣ ಬೇರೆ ರೀತಿಯ ತಿರುವು ಪಡೆದುಕೊಳ್ಳುತ್ತದೆ. ಇದರಿಂದಾಗಿ ಕಾಯಿದೆ ಅನುಷ್ಠಾನಕ್ಕೂ ತಡೆಯುಂಟಾಗಲಿದೆ ಎಂಬ ಲೆಕ್ಕಾಚಾರ ಇದರ ಹಿಂದಿದೆ. ಪ್ರಮೋಷನ್‌ ಕೊಡುವಾಗ ಶೇ.18ರ ಕೋಟಾ ಪರಿಗಣಿಸಬೇಕೆಂದಿಲ್ಲ. ಇಂದ್ರಾ ಸಹಾನಿ ಪ್ರಕರಣದ ತೀರ್ಪಿನಲ್ಲೂ ಸುಪ್ರೀಂಕೋರ್ಟ್‌ ಇದೇ ಅಂಶವನ್ನು ಎತ್ತಿ ಹಿಡಿದಿತ್ತು. ನಂತರ ಆರ್ಟಿಕಲ್‌ 16(4ಎ) ಪ್ರಕಾರ ಮೀಸಲಿನಡಿ ಬಡ್ತಿ ನೀಡಲು ಅವಕಾಶ ಮಾಡಿಕೊಳ್ಳಲಾಯಿತು.

ಬಳಿಕ ಎಂ. ನಾಗರಾಜ್‌ ಪ್ರಕರಣದಲ್ಲಿ ಇದನ್ನು ಪ್ರಶ್ನಿಸಲಾಯಿತು. ಎಂ. ನಾಗರಾಜ್‌ ಪ್ರಕರಣ ಸಂಬಂಧ 2006 ರಲ್ಲಿ ತೀರ್ಪು ಪ್ರಕಟಿಸಿದ್ದ ಸುಪ್ರೀಂಕೋರ್ಟ್‌, ಬಡ್ತಿ ಮೀಸಲು ಸಂಬಂಧದಲ್ಲಿ 3 ಪ್ರಮುಖ ಮಾನದಂಡ ಪರಾಮರ್ಶಿಸಲು ಸೂಚಿಸಿತು. ಅದರಂತೆ ಎಸ್‌ಸಿ, ಎಸ್‌ಟಿಗಳ ಪ್ರಾತಿನಿಧ್ಯದ ಕೊರತೆ, ಹಿಂದುಳಿದಿರುವಿಕೆ ಹಾಗೂ ದಕ್ಷತೆಯ ಬಗ್ಗೆ ಪರಿಶೀಲನೆ ನಡೆಸಬೇಕಿತ್ತು. ಇಂಥ ಸೂಚನೆ ಇರುವುದರಿಂದ ಕರ್ನಾಟಕ ಹೊರತು ಪಡಿಸಿ ಬಹುತೇಕ ರಾಜ್ಯಗಳು ಬಡ್ತಿ ಮೀಸಲನ್ನು ತೆಗೆದು ಹಾಕಿವೆ. ಉತ್ತರ ಪ್ರದೇಶದಲ್ಲಿ ಈ ಸಂಬಂಧ ಕ್ರಮ ಕೈಗೊಳ್ಳುವಾಗ ದೊಡ್ಡ ಕೋಲಾಹಲವೇ ನಡೆದಿತ್ತು. ಆದರೆ, ರಾಜ್ಯದಲ್ಲಿ ಈ ಮಾನದಂಡಗಳನ್ನು ಭರ್ತಿ ಮಾಡಿದ್ದರ ಬಗ್ಗೆ ಪರಿಶೀಲನೆ ಕೈಗೊಳ್ಳಲು ಆಸಕ್ತಿ ತೋರಿರಲಿಲ್ಲ. ಇದರ ಪರಿಣಾಮವಾಗಿ ಬಿ.ಕೆ. ಪವಿತ್ರ ಪ್ರಕರಣ ಸುಪ್ರೀಂ ಅಂಗಳದ ಮುಂದೆ ಹೋಗುವಂತಾಯಿತು ಎಂದು ಅವರು ಹೇಳುತ್ತಾರೆ.

ಮಾತುಕತೆ ನಡೆಸಲು ಸಲಹೆ ಈ ಮಧ್ಯೆ ಕಾನೂನು ಹೋರಾಟದಿಂದಷ್ಟೇ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು ಎಂಬ ಅಭಿಪ್ರಾಯವೂ ನೌಕರರ ಮಧ್ಯೆ ವ್ಯಕ್ತವಾಗಿದೆ. ಬಡ್ತಿ ಮೀಸಲು ಪ್ರಕರಣದಿಂದ ಈಗಾಗಲೇ ಸಾಮಾನ್ಯ ವರ್ಗದ ಹಲವರು ಪ್ರಮೋಷನ್‌ ಇಲ್ಲದರೆ 1 ವರ್ಷದ ಅವಧಿಯಲ್ಲಿ ನಿವೃತ್ತರಾಗಿದ್ದಾರೆ. ಜತೆಗೆ ಎಸ್‌ಸಿ, ಎಸ್‌ಟಿಗಳಿಗೂ ನ್ಯಾಯ ದೊರಕಿಲ್ಲ. ಸರಕಾರ ಇಚ್ಛಾಶಕ್ತಿ ಪ್ರದರ್ಶಿಸಿ ಎಸ್‌ಸಿ, ಎಸ್‌ಟಿ ಹಾಗೂ ಸಾಮಾನ್ಯ ವರ್ಗದವರ ನಡುವೆ ಸಂಧಾನ ನಡೆಸಬೇಕು. ಮೀಸಲಿನಡಿ ಬಡ್ತಿಯನ್ನು ಶೇ.18 ಕ್ಕೆ ಸೀಮಿತಗೊಳಿಸಬೇಕು. ರಾಜ್ಯದ ಕಾಯಿದೆ ವಿಚಾರದಲ್ಲಿ ಹಠ ಸಾಧಿಸುವುದನ್ನು ಬಿಡಬೇಕು. ಇಂಥ ನಿಲುವು ತೆಗೆದುಕೊಂಡರೆ ಶೇ.18ರಡಿ ಪ್ರಮೋಷನ್‌ ನೀಡಿದ್ದನ್ನು ಪ್ರಶ್ನಿಸಿ ಕಾನೂನು ಹೋರಾಟ ಎದುರಾಗುವುದನ್ನೂ ತಡೆಯಬಹುದು. ಈ ಹೋರಾಟಕ್ಕೆ ದಾರಿ ಮಾಡಿಕೊಟ್ಟರೆ ಕೆನೆಪದರದ ಲೆಕ್ಕಾಚಾರದಲ್ಲಿ ಮತ್ತೊಂದು ಸಂಕಷ್ಟ ಬರುತ್ತದೆ. ಇದನ್ನು ಪರಿಶೀಲಿಸಲು ಹೊರಟರೂ ಶೇ.50 ಕ್ಕೂ ಹೆಚ್ಚು ಎಸ್‌ಸಿ, ಎಸ್‌ಟಿಗಳು ಹಿಂಬಡ್ತಿಗೆ ಒಳಗಾಗುವ ಅಪಾಯ ಬರಬಹುದು. ಇದರಿಂದ ರಾಜ್ಯದಲ್ಲಿ ಹಿಂಬಡ್ತಿಯ ಪರ್ವವೇ ಶುರುವಾಗಬಹುದು ಎಂಬ ಮಾತುಗಳೂ ಸಚಿವಾಲಯದ ಅಂಗಳದಲ್ಲಿ ಕೇಳಿಬರುತ್ತಿವೆ.

 

ವಾದಕ್ಕೆ ಕೆನೆಪದರ ಬಲ : ಎಂ. ನಾಗರಾಜ್‌ ಪ್ರಕರಣದ ತೀರ್ಪಿನ ಪರಾಮರ್ಶೆಯನ್ನು 7 ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾಯಿಸುವ ಅಗತ್ಯವಿಲ್ಲವೆಂದು ಸೆಪ್ಟೆಂಬರ್‌ 26ರಂದು ಹೇಳಿರುವ ಸುಪ್ರೀಂಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಪೀಠವು ಕೆನೆಪದರದ ವಿಚಾರ ಎತ್ತಿದೆ. ಈ ಅಂಶವೂ ತಮ್ಮ ಹೋರಾಟಕ್ಕೆ ಬಲ ನೀಡಲಿದೆ ಎನ್ನುವುದು ಸಾಮಾನ್ಯ ವರ್ಗದ ನೌಕರರ ಭರವಸೆ. ಎಂ. ನಾಗರಾಜ್‌ ಪ್ರಕರಣದ ತೀರ್ಪಿನಲ್ಲಿರುವಂತೆ ಎಸ್‌ಸಿ, ಎಸ್‌ಟಿಗಳ ಹಿಂದುಳಿದಿರುವಿಕೆ ಬಗ್ಗೆ ಡಾಟಾ ಸಂಗ್ರಹಿಸುವ ಅಗತ್ಯವಿಲ್ಲವೆಂದು ಪೀಠ ಹೇಳಿತ್ತು. ಆದರೆ, ಈ ಮಾನದಂಡದ ಜಾಗದಲ್ಲಿ ಕೆನೆಪದರ ಇತ್ಯರ್ಥಗೊಳಿಸುವುದು ಬಂದು ಕುಳಿತಂತಾಗಿದೆ. ಈ ಅಂಶವನ್ನೂ ಆಧಾರವಾಗಿಟ್ಟುಕೊಂಡು ಶೇ.18ರಡಿ ಬಡ್ತಿಯಲ್ಲಿ ಮೀಸಲು ನೀಡಿದ್ದನ್ನು ಪ್ರಶ್ನಿಸಬಹುದು. ಈ ಹೋರಾಟದಲ್ಲಿ ಯಶಸ್ಸು ಕಂಡರೆ ಮತ್ತಷ್ಟು ಎಸ್‌ಸಿ, ಎಸ್‌ಟಿಗಳು ಹಿಂಬಡ್ತಿಗೆ ಒಳಗಾಗುವ ಸನ್ನಿವೇಶ ಸೃಷ್ಟಿಯಾಗಲಿದೆ ಎನ್ನುವುದು ಸಾಮಾನ್ಯ ವರ್ಗದವರ ವಾದವಾಗಿದೆ.

ಶೇ.18ಕ್ಕೆ ಆಕ್ಷೇಪ ಏಕೆ? ರಾಜ್ಯದ ಕಾಯಿದೆ ಅನುಷ್ಠಾನಗೊಂಡರೆ ತಮ್ಮ ಭವಿಷ್ಯಕ್ಕೆ ಕುತ್ತು ಬರಲಿದೆ ಎಂಬ ಭೀತಿ ಸಾಮಾನ್ಯ ವರ್ಗದ್ದು. ರಾಜ್ಯದಲ್ಲಿ ಜ್ಯೂನಿಯರ್‌ ಕ್ಲಾಸ್‌-1 ಹಂತದ ವರೆಗೆ ಬಡ್ತಿಯಲ್ಲಿ ಶೇ.18ರಡಿ ಮೀಸಲು ಅಳವಡಿಸಿಕೊಳ್ಳಲಾಗಿದೆ. ತಹಸೀಲ್ದಾರ್‌, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ಗಳು, ಸಚಿವಾಲಯದ ಅಧೀನ ಕಾರ್ಯದರ್ಶಿಗಳು ಹಾಗೂ ಡಿವೈಎಸ್ಪಿಗಳು ಈ ಕೇಡರ್‌ನಲ್ಲಿದ್ದಾರೆ. ಶೇ.18ರಡಿ ನೀಡಿದ ಬಡ್ತಿ ತೆಗೆದುಹಾಕಿದರೆ ಇಂಥ ಅಧಿಕಾರಿಗಳೂ ಹಿಂಬಡ್ತಿಗೆ ಒಳಗಾಗುತ್ತಾರೆ. ಈ ಸಾಧ್ಯತೆ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆಯಲಾಗುತ್ತಿದೆ ಎಂದು ಅಹಿಂಸಾ ಸಂಘಟನೆಯೊಂದಿಗೆ ಗುರುತಿಸಿಕೊಂಡಿರುವ ಸಾಮಾನ್ಯ ವರ್ಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

About the author

ಕನ್ನಡ ಟುಡೆ

Leave a Comment