ರಾಷ್ಟ್ರ ಸುದ್ದಿ

ಬನ್ನಿ ನಮ್ಮೆಲ್ಲರನ್ನೂ ಸಾಯಿಸಿ’: ಉಗ್ರರಿಗೆ ಬಹಿರಂಗ ಪತ್ರ ಬರೆದ ಜಮ್ಮು-ಕಾಶ್ಮೀರದ ದಿಟ್ಟ ಪೊಲೀಸ್ ಅಧಿಕಾರಿ ಇಮ್ತಿಯಾಸ್ ಕುಟುಂಬ

ಶ್ರೀನಗರ: ಕಾಶ್ಮೀರ ಪ್ರೀತಿಸುತ್ತಿದ್ದ ವ್ಯಕ್ತಿಯನ್ನು ನೀವು ಸಾಯಿಸಿದ್ದೀರಿ, ಬನ್ನಿ ನಮ್ಮೆಲ್ಲರನ್ನೂ ಹತ್ಯೆ ಮಾಡಿ… ಹೀಗೆಂದು ಉಗ್ರರ ಗುಂಡಿಗೆ ಬಲಿಯಾದ ಜಮ್ಮು ಮತ್ತು ಕಾಶ್ಮೀರದ ದಿಟ್ಟ ಪೊಲೀಸ್ ಅಧಿಕಾರಿ ಇಮ್ತಿಯಾಜ್ ಕುಟುಂಬ ಉಗ್ರರಿಗೆ ಬಹಿರಂಗ ಪತ್ರವೊಂದನ್ನು ಬರೆದಿದೆ.

ಹತ್ಯೆಯಾದ ಸಬ್ ಇನ್ಸ್ ಪೆಕ್ಟರ್ ಮಿರ್ ಇಮ್ತಿಯಾಜ್ ಅವರ ಅಧಿಕೃತ ಫೇಸ್ ಬುಕ್ ಪೇಜ್ ನಲ್ಲಿ ಉಗ್ರರಿಗೆ ಬಹಿರಂಗ ಪತ್ರ ಬರೆದಿರುವ ಕುಟುಂಬ, ವೃದ್ಧ ತಂದೆ ಹಾಗೂ ವೃದ್ಧ ತಾಯಿಯ ಪ್ರೀತಿ ಮಗನನ್ನು ನೀವು ಹತ್ಯೆ ಮಾಡಿದ್ದೀರಿ. ತನ್ನ ಸಹೋದರ ಹಾಗೂ ಸಹೋದರಿಗೆ ಏಕೈಕ ಬೆಂಬಲಿಗನಾಗಿದ್ದ ಸಹೋದರನನ್ನು ಹತ್ಯೆ ಮಾಡಿದ್ದೀರಿ. ಮದುವೆಯಾಗಬೇಕೆಂದು ಬಯಸಿದ್ದ ಪ್ರತೀ ಯುವತಿಯರ ಕನಸನ್ನು ಸಾಯಿಸಿದ್ದೀರಿ. ಆಶಾವಾದದ ಆಲೋಚನೆಗಳುಳ್ಳ ವ್ಯಕ್ತಿಯನ್ನು ಸಾಯಿಸಿದ್ದೀರಿ. ಸ್ನಾತಕೋತ್ತರ ಪದವಿಯಲ್ಲಿ ಅತ್ಯುತ್ತಮ ವಿದ್ಯಾರ್ಥಿ, ಎಸ್ಐ ಬ್ಯಾಚ್ ನಲ್ಲಿ ಟಾಪರ್ ಆಗಿದ್ದ ವ್ಯಕ್ತಿಯನ್ನು ಸಾಯಿಸಿದ್ದೀರಿ.

ಪ್ರಮುಖವಾಗಿ ಇಡೀ ಕಾಶ್ಮೀರ ಪ್ರೀತಿಸುತ್ತಿದ್ದ ವ್ಯಕ್ತಿಯನ್ನು ಸಾಯಿಸಿದ್ದೀರಿ. ಇದು ಜನರನ್ನೇ ಹತ್ಯೆ ಮಾಡಿದಂತೆ. ಆತನನ್ನು ಹತ್ಯೆ ಮಾಡಿದ ನೀವು, ನಮ್ಮೆಲ್ಲರನ್ನೇಕೆ ಹತ್ಯೆ ಮಾಡುತ್ತಿಲ್ಲ. ಇಮ್ತಿಯಾಜ್ ಅವರನ್ನೇ ನಂಬಿ ಬದುಕುತ್ತಿದ್ದ ಅವರ ತಾಯಿ, ತಂದೆ, ಸಹೋದರನನ್ನೇಕೆ ಹತ್ಯೆ ಮಾಡಲಿಲ್ಲ. ಬನ್ನಿ ನಮ್ಮೆಲ್ಲರನ್ನೂ ಸಾಯಿಸಿ. ಅವರನ್ನು ಬಿಟ್ಟು ನಮಗೆ ಬದುಕಲು ಸಾಧ್ಯವಿಲ್ಲ ಎಂದು ಪತ್ರದಲ್ಲಿ ತಮ್ಮ ದುಃಖವನ್ನು ಹೇಳಿಕೊಂಡಿದ್ದಾರೆ. ದಾಳಿಯ ಭೀತಿ ಇದ್ದರು ಹೇಗಾದರೂ ಮಾಡಿ ವೃದ್ಧ ಪೋಷಕರನ್ನು ನೋಡಲೇಬೇಕೆಂದು ತೀರ್ಮಾನಿಸಿದ್ದ ಜಮ್ಮು ಮತ್ತು ಕಾಶ್ಮೀರ ಪೊಲೀಸ್’ಗೆ ಸೇರಿದ ಸಬ್ ಇನ್ಸ್ ಪೆಕ್ಟರ್ ಇಮ್ತಿಯಾಸ್ ಅವರು ವೇಷ ಮರೆಸಿ ತವರಿಗೆ ಹೊರಟಿದ್ದರು. ಆದರೂ ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದ ಉಗ್ರರು ಕೊನೆಗೂ ಅಧಿಕಾರಿಯನ್ನು ಬಲಿಪಡೆದುಕೊಂಡೇ ಬಿಟ್ಟಿದ್ದರು.
ಭದ್ರತಾ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾಶ್ಮೀರಿಗರು ತಮ್ಮ ಹುದ್ದೆಯನ್ನು ತ್ಯಜಿಸಬೇಕು. ಇಲ್ಲದಿದ್ದರೆ, ಗುಂಡಿಟ್ಟು ಹತ್ಯೆಗೈಯ್ಯಬೇಕಾಗುತ್ತದೆ ಎಂದು ಕೆಲ ದಿನಗಳ ಹಿಂದಷ್ಟೇ ಉಗ್ರರು ಬೆದರಿಕೆ ಹಾಕಿದ್ದರು. ಈ ಹಿನ್ನಲೆಯಲ್ಲಿ ಕಾಶ್ಮೀರ ಪೊಲೀಸರ ಸಿಡಿಐ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೀರ್, ಸ್ವಗ್ರಾಮಕ್ಕೆ ತೆರಳಿದರೆ, ಉಗ್ರರು ದಾಳಿ ನಡೆಸಬಹುದು ಎಂಬ ಎಚ್ಚರಿಕೆಯನ್ನೂ ಸಹ ನೀಡಲಾಗಿತ್ತು.
ಆದಾಗಿಯೂ, ಉಗ್ರರ ಕಣ್ತಪ್ಪಿಸಿ ಪೋಷಕರನ್ನು ಕಾಣಬೇಕೆಂಬ ಆಕಾಂಕ್ಷೆಯೊಂದಿಗೆ ಇಮ್ತಿಯಾಜ್ ಅವರು ಯಾರೂ ಗುರುತು ಹಿಡಿಯದಂತೆ ಗಡ್ಡ, ಮೀಸೆ ತೆಗೆದು ತಮ್ಮ ಸ್ವಗ್ರಾಮಕ್ಕೆ ತೆರಳಿದ್ದರು. ಆದರೆ, ಈ ವೇಳೆ ಪುಲ್ವಾಮಾ ಜಿಲ್ಲೆಯ ವಾಹಿಬಾಗ್ ನಲ್ಲಿ ಇಮ್ತಿಯಾಜ್ ಅವರನ್ನು ಉಗ್ರರು ಗುಂಡಿಟ್ಟು ಹತ್ಯೆ ಮಾಡಿದ್ದರು. ಇದೀಗ ತಮ್ಮ ಪ್ರೀತಿಯ ಮಗನನ್ನು ಕಳೆದುಕೊಂಡ ಇಮ್ತಿಯಾಚ್ ಕುಟುಂಬಸ್ಥರ ದುಃಖ ಮುಗಿಲು ಮುಟ್ಟಿದೆ.

About the author

ಕನ್ನಡ ಟುಡೆ

Leave a Comment