ರಾಜ್ಯ ಸುದ್ದಿ

ಬರ ಸಂಕಷ್ಟಕ್ಕೆ ಸ್ಪಂದಿಸದ ಕೇಂದ್ರ: ಬರ ಅಧ್ಯಯನ ತಂಡದ ಮುಂದೆ ರಾಜ್ಯದ ಅಳಲು

ಬೆಂಗಳೂರು: ಕಳೆದ 18 ವರ್ಷಗಳಲ್ಲಿ 14 ವರ್ಷ ಬರಗಾಲಕ್ಕೆ ತುತ್ತಾಗಿರುವ ರಾಜ್ಯದಲ್ಲಿ ಈ ವರ್ಷದ ಮುಂಗಾರು ಮತ್ತು ಹಿಂಗಾರು ಎರಡೂ ಹಂಗಾಮುಗಳು ವಿಫಲವಾಗಿ ಅನಾವೃಷ್ಟಿಯ ತೀವ್ರತೆ ಕಾಡುತ್ತಿದ್ದರೂ ಗಾಯದ ಮೇಲೆ ಬರೆ ಎಳೆದಂತೆ ಕೇಂದ್ರ ಸರಕಾರ ರಾಜ್ಯಕ್ಕೆ ಸಕಾಲಿಕವಾಗಿ ನ್ಯಾಯಯುತ ಪರಿಹಾರ ನೀಡುತ್ತಿಲ್ಲ ಎಂದು ರಾಜ್ಯ ಸರಕಾರ ತೀವ್ರ ಅಸಮಾಧಾನ ವ್ಯಕ್ತಮಾಡಿದೆ.

ಮುಂಗಾರು ವೈಫಲ್ಯದ ಬೆಳೆ ನಷ್ಟಕ್ಕೆ ಎನ್‌ಡಿಆರ್‌ಎಫ್‌ ಮಾರ್ಗಸೂಚಿಯಂತೆ ಕೇಳಲಾಗಿದ್ದ 2,434 ಕೋಟಿ ರೂ. ಪೈಕಿ ಕೇವಲ 944 ಕೋಟಿ ರೂ. ಮಂಜೂರು ಮಾಡಿದ್ದ ಕೇಂದ್ರ ಸರಕಾರ ಈ ಹಣವನ್ನೂ ಬಿಡುಗಡೆ ಮಾಡಿಲ್ಲ. ಕಳೆದ ಜನವರಿ 19 ರಂದು ಈ ಪರಿಹಾರದ ಮೊತ್ತವನ್ನು ಪ್ರಕಟಿಸಿದ್ದ ಕೇಂದ್ರ ಸರಕಾರದಿಂದ ಈವರೆಗೆ ಹಣ ಬಿಡುಗಡೆಯಾಗಿಲ್ಲ. ಬರಗಾಲದ ಕಾರಣ ಉದ್ಯೋಗ ಸೃಷ್ಟಿಗೆ ಆಸರೆಯಾಗಿದ್ದ ನರೇಗಾ ಯೋಜನೆಯ ಕೂಲಿ ಹಣವನ್ನೂ ಬಿಡುಗಡೆ ಮಾಡಿಲ್ಲ. ಭೀಕರ ಬರ ಪರಿಸ್ಥಿತಿ ಎದುರಿಸುತ್ತಿರುವ ದೇಶದ 24 ಜಿಲ್ಲೆಗಳಲ್ಲಿ 18 ಕರ್ನಾಟಕದಲ್ಲಿವೆ. ಆದರೂ, ಕೇಂದ್ರವು ನ್ಯಾಯಯುತ ಪರಿಹಾರ ಬಿಡುಗಡೆ ಮಾಡದಿರುವುದು ಸಮಸ್ಯೆಯ ತೀವ್ರತೆ ಹೆಚ್ಚಿಸಿದೆ ಎಂದು ರಾಜ್ಯ ಸರಕಾರ ಅತೃಪ್ತಿ ವ್ಯಕ್ತಪಡಿಸಿದೆ.

ಹಿಂಗಾರು ವೈಫಲ್ಯ ನಷ್ಟ ಅಂದಾಜು ಮಾಡಲು ರಾಜ್ಯದ ಕೋರಿಕೆಯಂತೆ ಆಗಮಿಸಿದ್ದ ಕೇಂದ್ರದ 9 ಮಂದಿ ಅಧಿಕಾರಿಗಳ ತಂಡದ ಸಮ್ಮುಖದಲ್ಲಿ ರಾಜ್ಯ ಸರಕಾರ ಈ ಅತೃಪ್ತಿಯನ್ನು ಹೊರಹಾಕಿದೆ. ಜತೆಗೆ, ಹಿಂಗಾರು ಹಂಗಾಮಿನಲ್ಲಿ 11,384 ಕೋಟಿ ರೂ. ನಷ್ಟವಾಗಿದ್ದು, ಮಾರ್ಗಸೂಚಿಯಂತೆ 2,064 ಕೋಟಿ ರೂ. ನೆರವು ಮಂಜೂರು ಮಾಡಲು ಶಿಫಾರಸು ಮಾಡುವಂತೆ ಕೇಂದ್ರ ತಂಡಕ್ಕೆ ರಾಜ್ಯ ಸರಕಾರ ಮನವಿ ಮಾಡಿತು.

ವಿಧಾನಸೌಧದಲ್ಲಿ ಶುಕ್ರವಾರ ಕೇಂದ್ರ ಸರಕಾರದ ಜಂಟಿ ಕಾರ್ಯದರ್ಶಿ ಡಾ.ಅಭಿಷೇಕ್‌ ನೇತೃತ್ವದ ಅಧಿಕಾರಿಗಳ ತಂಡದೊಂದಿಗೆ ಸಮಾಲೋಚನೆ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ”ಪ್ರಸಕ್ತ ವರ್ಷದಲ್ಲಿ ಮುಂಗಾರು ಮತ್ತು ಹಿಂಗಾರು ಹಂಗಾಮುಗಳ ವೈಫಲ್ಯದಿಂದಾಗಿ ವಿಶೇಷವಾಗಿ ರೈತರು, ಕೃಷಿ ಕೂಲಿಕಾರರು ಹಾಗೂ ಬಡವರ ಸಂಕಷ್ಟ ಹೆಚ್ಚಿದೆ. ಕಳೆದ 18 ವರ್ಷಗಳಲ್ಲಿ 14 ವರ್ಷಗಳ ಕಾಲ ತೀವ್ರ ಬರಗಾಲಕ್ಕೆ ತುತ್ತಾಗಿರುವ ರಾಜ್ಯದ ಸಂಕಷ್ಟಕ್ಕೆ ಕೇಂದ್ರ ಸರಕಾರ ಕೂಡಲೇ ಸ್ಪಂದಿಸಬೇಕು. ಈ ಸಂಬಂಧ ವಸ್ತುಸ್ಥಿತಿಯನ್ನು ಕೇಂದ್ರ ತಂಡಕ್ಕೆ ಮನವರಿಕೆ ಮಾಡಿಕೊಡಲಾಗಿದೆ” ಎಂದು ತಿಳಿಸಿದರು.

ಮಂಜೂರು ಮೊತ್ತವೂ ಬರಲಿಲ್ಲ ”ಮುಂಗಾರು ನಷ್ಟಕ್ಕೆ ಮಾರ್ಗಸೂಚಿ ಪ್ರಕಾರ 2,434 ಕೋಟಿ ರೂ. ಪರಿಹಾರ ಕೇಳಲಾಗಿತ್ತು. ಆದರೆ, ಕೃಷಿ ಬೆಳೆಗೆ 815.75 ಕೋಟಿ ರೂ., ತೋಟಗಾರಿಕೆ ಬೆಳೆ ನಷ್ಟಕ್ಕೆ 126.02 ಕೋಟಿ ರೂ ಹಾಗೂ ಕುಡಿಯುವ ನೀರಿಗೆ 7.72 ಕೋಟಿ ರೂ. ಸೇರಿ ಒಟ್ಟು 944 ಕೋಟಿ ರೂ. ಮಂಜೂರು ಮಾಡಿರುವುದಾಗಿ ಕೇಂದ್ರ ಸರಕಾರ ಜನವರಿ 19ರಂದೇ ಪ್ರಕಟಿಸಿತ್ತು. ಆದರೆ, ಈ ಕುರಿತು ರಾಜ್ಯ ಸರಕಾರಕ್ಕೆ ಅಧಿಕೃತ ಮಾಹಿತಿಯನ್ನೂ ಕಳಿಸಿಲ್ಲ ಮತ್ತು ಹಣವನ್ನೂ ಬಿಡುಗಡೆ ಮಾಡಿಲ್ಲ” ಎಂದು ದೇಶಪಾಂಡೆ ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರ ತಂಡಕ್ಕೆ ಮನವರಿಕೆ: ರಾಜ್ಯದ ಮನವಿಯಂತೆ ಹಿಂಗಾರು ಬರ ಪರಿಸ್ಥಿತಿ ಅಧ್ಯಯನಕ್ಕೆ ಆಗಮಿಸಿದ್ದ ಕೇಂದ್ರ ನಿಯೋಗವು ಮೂರು ತಂಡಗಳಲ್ಲಿ 14 ಜಿಲ್ಲೆಗಳಲ್ಲಿ ಸುಮಾರು 3 ಸಾವಿರ ಕಿ.ಮೀ. ಪ್ರವಾಸ ನಡೆಸಿದ್ದು, ದಿಲ್ಲಿಗೆ ಮರಳುವ ಮುನ್ನ ವಿಧಾನಸೌಧಕ್ಕೆ ಆಗಮಿಸಿ ಸಮಾಲೋಚನೆ ನಡೆಸಿತು. ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ, ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ, ಪಶು ಸಂಗೋಪನೆ ಸಚಿವ ವೆಂಕಟರಾವ್‌ ನಾಡಗೌಡ, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದು, ರಾಜ್ಯದಲ್ಲಿನ ಬರಪರಿಸ್ಥಿತಿಯನ್ನು ಕೇಂದ್ರ ತಂಡಕ್ಕೆ ಮನವರಿಕೆ ಮಾಡಿಕೊಟ್ಟಿತು.

About the author

ಕನ್ನಡ ಟುಡೆ

Leave a Comment