ಸಿನಿ ಸಮಾಚಾರ

ಬಾಲಿವುಡ್‌ ಸಂಸ್ಕಾರಿ ನಟ ಆಲೋಕ್‌ ನಾಥ್‌ ವಿರುದ್ದ ಅತ್ಯಾಚಾರ ಆರೋಪ

ಮುಂಬಯಿ : ಬಾಲಿವುಡ್‌ ನಟಿಯರು ಈಚಿನ ದಿನಗಳಲ್ಲಿ  ಈಗ ಒಬ್ಬರ ಬಳಿಕ ಒಬ್ಬರಾಗಿ, ವರ್ಷಗಳು ಅಥವಾ ದಶಕಗಳ ಹಿಂದೆ ಸಹ ನಟರಿಂದ ತಾವು ಅನುಭವಿಸಿದ್ದೇವೆಂಬ ಲೈಂಗಿಕ ಕಿರುಕುಳಗಳನ್ನು ಬಹಿರಂಗಪಡಿಸುವ ಮೂಲಕ ಸುದ್ದಿಯಾಗುತ್ತಿರುವುದು ಸಾಮಾನ್ಯವಾಗಿದೆ.

ಬೆಳ್ಳಿ ತೆರೆಯಲ್ಲಿ ಅತ್ಯಂತ ಸಭ್ಯ, ಸಂಸ್ಕಾರಿ ನಟ ಎಂದೇ ಖ್ಯಾತರಾಗಿರುವ ಆಲೋಕ್‌ ನಾಥ್‌ ವಿರುದ್ಧ ಈಗ ಹಿರಿಯ ಲೇಖಕಿ, ಚಿತ್ರ ನಿರ್ಮಾಪಕಿ, 1990ರ “ತಾರಾ” ಖ್ಯಾತಿಯ ಅವಂತ್‌ ಗರ್ಡೆ ಶೋ ಮೂಲಕ ಪ್ರಖ್ಯಾತಿ ಪಡೆದಿದ್ದ ವಿಂತಾ ನಂದಾ ಅವರು “ಎರಡು ದಶಕಗಳ ಕಾಲ ಆಲೋಕ್‌ ನಾಥ್‌ ನನ್ನ ಮೇಲೆ ಅತ್ಯಾಚಾರ ಎಸಗಿದ್ದರು’ ಎಂದು ಗಂಭೀರವಾಗಿ ಆರೋಪಿಸುವ ಹೇಳಿಕೆ ನೀಡಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.

“ಈ ವಿಷಯವನ್ನು ಬಹಿರಂಗಪಡಿಸುವ ಸಂದರ್ಭಕ್ಕಾಗಿ ನಾನು 19 ವರ್ಷಗಳ ಕಾಲ ಕಾಯಬೇಕಾಯಿತು’ ಎಂದು ನಂದಾ ಅವರು ತಮ್ಮ ಫೇಸ್‌ ಬುಕ್‌ ಪೋಸ್ಟ್‌ ನಲ್ಲಿ ಬರೆದಿದ್ದಾರೆ. ನಂದಾ ಅವರು ತಮ್ಮ ಹೃದಯದಾಳದಿಂದ ತಮ್ಮ ನೋವನ್ನು ತೋಡಿಕೊಂಡಿರುವ ಫೇಸ್‌ ಬುಕ್‌ ಪೋಸ್ಟ್‌ನಲ್ಲಿ  ನಟ ಆಲೋಕ್‌ ನಾಥ್‌ ಅವರ ಹೆಸರನ್ನು ನೇರವಾಗಿ ಹೇಳದೆ 1990ರ ದಶಕದ ಖ್ಯಾತ “ಸಂಸ್ಕಾರಿ’ ಮತ್ತು ಸುವಿಖ್ಯಾತ ಟಿವಿ ನಟ’ ನಿಂದ ನನ್ನ ಮೇಲೆ ಎರಡು ದಶಕಗಳ ಕಾಲ ಲೈಂಗಿಕ ಕಿರುಕುಳ ನಡೆಯಿತು ಎಂದು ಹೇಳಿದ್ದಾರೆ.

ಅನಂತರ ಐಎಎನ್‌ಎಸ್‌ಗೆ ಈ ವಿಷಯವನ್ನು  ಎಸ್‌ಎಂಎಸ್‌ ಮೂಲಕ ದೃಢೀಕರಿಸಿದ ನಂದಾ ಅವರು “ಹೌದು, ಆ ವ್ಯಕ್ತಿ ಆಲೋಕ್‌ ನಾಥ್‌ ಅವರೇ ಆಗಿದ್ದಾರೆ;  ಕೇವಲ “ಸಂಸ್ಕಾರಿ” ನಟನೆಂದು ಹೇಳಿದರಷ್ಟೇ ಸಾಕೆಂದು ನಾನು ಭಾವಿಸಿದ್ದೆ’ ಎಂದು ಹೇಳಿದ್ದಾರೆ.

ಹಾಲಿವುಡ್‌ ಬಳಿಕ ಹಿಂದಿ ಚಿತ್ರರಂಗದಲ್ಲೂ ಈಗ “ಮೀ ಟೂ’ ಆಂದೋಲನ ಕಾಲಿರಿಸಿದ್ದು ಪ್ರಮುಖ ತಾರಾಮಣಿಗಳು ತಾವು ತಮ್ಮ ಉನ್ನತಿಯ ದಿನಗಳಲ್ಲಿ ಸಹ ನಟ, ನಿರ್ಮಾಪಕ, ನಿರ್ದೇಶಕ ಮುಂತಾಗಿ ವಿವಿಧ ಬಗೆಯ ಸಿನೇಮಾ ಮಂದಿಯಿಂದ ಅನುಭವಿಸಿದ್ದ ಲೈಂಗಿಕ ಕಿರುಕುಳ, ದೌರ್ಜನ್ಯ, ಅತ್ಯಾಚಾರ ಇತ್ಯಾದಿ ಕಹಿ ಪ್ರಸಂಗಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಬಹಿರಂಗ ಪಡಿಸುತ್ತಿರುವುದು ಒಂದು ಟ್ರೆಂಡ್‌ ಆಗಿ ಬಿಟ್ಟಿದೆ.

ಈ ಹಿನ್ನೆಲೆಯಲ್ಲೇ ಕೇಂದ್ರ ಸಚಿವೆ ಮೇನಕಾ ಗಾಂಧಿ ಅವರು ಯಾವುದೇ ಕಾನೂನು ಕಾಲಮಿತಿಯನ್ನು ಲೆಕ್ಕಿಸದೆ ಈ ಬಗೆಯ ಪ್ರಕರಣಗಳನ್ನು ಕಾನೂನಿನಡಿ ತರುವುದಕ್ಕೆ ಅವಕಾಶ ಕಲ್ಪಿಸುವಂತೆ ಕಾನೂನು ಆಯೋಗಕ್ಕೆ ಸೂಚಿಸಿರುವುದು ತಾಜಾ ವಿದ್ಯಮಾನವಾಗಿದೆ.

 

About the author

ಕನ್ನಡ ಟುಡೆ

Leave a Comment