ಸುದ್ದಿ

ಬಿಎಂಟಿಸಿ ನಿಲ್ದಾಣದಲ್ಲಿ  ಬೈಕ್‌ ಸೇವೆ ಪ್ರಾರಂಭ

ಬೆಂಗಳೂರು: ಬಸ್‌ ನಿಲ್ದಾಣದಿಂದ ಪ್ರಯಾಣಿಕರು ನೇರವಾಗಿ ಮನೆ ಸೇರಲು ಮತ್ತು ಮನೆಯಿಂದ ನಿಲ್ದಾಣಕ್ಕೆ ಬರಲು ಬಿಎಂಟಿಸಿಯು ‘ಸಿದ್ಧ ಸೇವೆ’ ಎಂಬ ಹೊಸದಾದ ಯೋಜನೆಯನ್ನು ಆರಂಭಿಸಿದೆ. ಇದಕ್ಕಾಗಿ ಮೆಟ್ರೊ ಬೈಕ್ಸ್‌ ಎಂಬ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ನಗರದ ಶಾಂತಿನಗರ ಬಸ್‌ ನಿಲ್ದಾಣದಲ್ಲಿ ಮೆಟ್ರೊ ಬೈಕ್‌ ಸೇವೆಗೆ ಸಚಿವ ಎಚ್‌.ಎಂ.ರೇವಣ್ಣ ಅವರು ಬುಧವಾರ ಚಾಲನೆ ನೀಡಿದರು. ‘ಲಾಸ್ಟ್‌ ಮೈಲ್‌ ಕನೆಕ್ಟಿವಿಟಿ’ ವ್ಯವಸ್ಥೆಯಡಿ ಬಿಎಂಟಿಸಿಯು ಪ್ರಯಾಣಿಕರನ್ನು ನಿಲ್ದಾಣಗಳಿಂದ ನೇರವಾಗಿ ಮನೆಗೆ ತಲುಪಿಸಲು ಎರಡನೇ ಹಂತದ ಸಾರಿಗೆ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಪ್ರಾಯೋಗಿಕವಾಗಿ ಎರಡು ಹಂತದಲ್ಲಿ ಯೋಜನೆಯನ್ನು ಕೈಗೆತ್ತಿಕೊಂಡಿದೆ.

ಬಿಎಂಆರ್‌ಸಿಎಲ್‌ನ 36 ಮೆಟ್ರೊ ನಿಲ್ದಾಣಗಳಲ್ಲಿ ಸೇವೆ ಒದಗಿಸುತ್ತಿರುವ ಮೆಟ್ರೊ ಬೈಕ್ಸ್‌ ಸಂಸ್ಥೆಯು ಬಸ್‌ ನಿಲ್ದಾಣಗಳಲ್ಲೂ ಬಾಡಿಗೆ ಆಧಾರದ ಮೇಲೆ ಗೇರ್‌ ರಹಿತ ವಾಹನಗಳನ್ನು ಬಾಡಿಗೆಗೆ ನೀಡುತ್ತಿದೆ. ಪ್ರಯಾಣಿಕರು ಮೆಟ್ರೊ ಬೈಕ್ಸ್‌ ಆ್ಯಪ್‌ ಅನ್ನು ಡೌನ್‌ಲೋಡ್‌ ಮಾಡಿಕೊಂಡು ಈ ಸೇವೆಯನ್ನು ಪಡೆಯಬಹುದಾಗಿದೆ. ಪ್ರಯಾಣಿಕರು ಬೈಕ್‌ಗಳನ್ನು ಬಾಡಿಗೆಗೆ ಪಡೆದು ನಿಗದಿತ ಸ್ಥಳಕ್ಕೆ ಪ್ರಯಾಣಿಸಿ ಅಲ್ಲಿಯೇ ನಿಲುಗಡೆ ಮಾಡಬಹುದು. ಅದೇ ರೀತಿ ಸೈಕಲ್‌ಗಳನ್ನು ಬಾಡಿಗೆಗೆ ಪಡೆದು ಸ್ವತಃ ಚಾಲನೆ ಮಾಡಿಕೊಂಡು ಹೋಗಲು ಅವಕಾಶ ನೀಡಲಾಗಿದೆ.

ಪ್ರತಿ ಕಿ.ಮೀ ಗೆ 5 ರೂ.ಇಲ್ಲವೇ ನಿಮಿಷಕ್ಕೆ 50 ಪೈಸೆ ಬಾಡಿಗೆ ನಿಗದಿಪಡಿಸಲಾಗಿದೆ. ಈ ವಾಹನಗಳು ಕೀ ರಹಿತವಾಗಿರುತ್ತವೆ. ಪ್ರಯಾಣಿಕರು ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಒನ್‌ ಟೈಮ್‌ ಪಾಸ್‌ವರ್ಡ್‌ ಬಳಸಿ ಈ ದ್ವಿಚಕ್ರ ವಾಹನಗಳನ್ನು ಬಳಸಬಹುದಾಗಿದೆ. ಜತೆಗೆ ಪ್ರಯಾಣಿಕರು ರಾತ್ರಿ ವೇಳೆ ದ್ವಿಚಕ್ರ ವಾಹನಗಳನ್ನು ಮನೆಗೆ ಕೊಂಡೊಯ್ಯಬಹುದು. ಇದಕ್ಕೆ ಪ್ರತಿ ಕಿ.ಮೀ ಗೆ 6.50 ರೂ. ಭರಿಸಬೇಕಾಗುತ್ತದೆ. ಈ ಮೂಲಕ ನಿಲ್ದಾಣದಲ್ಲಿನ ಪಾರ್ಕಿಂಗ್‌ ಶುಲ್ಕದ ಹೊರೆ ಪ್ರಯಾಣಿಕರಿಗೆ ತಪ್ಪಲಿದೆ ಅಲ್ಲದೇ ಇಂಧನವೂ ಉಳಿತಾಯವಾಗಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

 

About the author

ಕನ್ನಡ ಟುಡೆ

Leave a Comment