ರಾಜ್ಯ ಸುದ್ದಿ

ಬಿಎಸ್‌ವೈ ವಿರುದ್ಧ ವಿಚಾರಣೆಗೆ ಮಧ್ಯಾಂತರ ತಡೆ

ಕಲಬುರಗಿ: ಆಪರೇಷನ್‌ ಆಡಿಯೊ ಪ್ರಕರಣದಲ್ಲಿ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ ಮೇಲಿನ ತನಿಖೆಗೆ ಹೈಕೋರ್ಟ್‌ ಏಕಸದಸ್ಯ ಪೀಠ ಶುಕ್ರವಾರ ಮಧ್ಯಂತರ ತಡೆಯಾಜ್ಞೆ ನೀಡಿದ್ದು, ಇದರಿಂದ ಬಿಎಸ್‌ವೈ ಅವರಿಗೆ ತಾತ್ಕಾಲಿಕ ರಿಲೀಫ್‌ ದೊರೆತಂತಾಗಿದೆ.

ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಬಿಎಸ್‌ವೈ ಹಾಗೂ ಇತರ ಮೂವರ ಪರವಾಗಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಬುಧವಾರ ನಡೆದಿತ್ತು. ಯಡಿಯೂರಪ್ಪ ಅವರ ಪರವಾಗಿ ಹಿರಿಯ ನ್ಯಾಯವಾದಿ ಸಿ.ವಿ.ನಾಗೇಶ್‌ ಹಾಗೂ ಮಾಜಿ ಸಚಿವ ಶಿವನಗೌಡ ನಾಯಕ, ಪ್ರೀತಂಗೌಡ ಮತ್ತು ಪತ್ರಕರ್ತ ಎಂ.ಬಿ.ಮರಂಕಲ್‌ ಪರವಾಗಿ ಅಶೋಕ್‌ ಹಾರನಹಳ್ಳಿ ವಾದ ಮಂಡಿಸಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಪಿ.ಜಿ.ಎಂ.ಪಾಟೀಲ್‌ ಅವರು ತೀರ್ಪು ಕಾಯ್ದಿರಿಸಿದ್ದರು.

ಶುಕ್ರವಾರ ಬೆಳಗ್ಗೆ ತೀರ್ಪು ಪ್ರಕಟಿಸಿದ ನ್ಯಾಯಮೂರ್ತಿಗಳು, ”ಎಫ್‌ಐಆರ್‌ ದಾಖಲಿಸಲಾಗಿದೆ ಎಂಬ ಒಂದೇ ಕಾರಣಕ್ಕೆ ಯಡಿಯೂರಪ್ಪ ಸೇರಿದಂತೆ ಎಲ್ಲ ನಾಲ್ವರನ್ನು ಯಾವುದೇ ರೀತಿಯ ವಿಚಾರಣೆಗೆ ಒಳಪಡಿಸುವಂತಿಲ್ಲ ಎಂದರಲ್ಲದೆ, ಎಫ್‌ಐಆರ್‌ ರದ್ದುಪಡಿಸುವ ಕುರಿತಂತೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ಮುಂದುವರಿಯಲಿದೆ,”ಎಂದು ಹೇಳಿದರಲ್ಲದೆ, ದೂರುದಾರ ಶರಣಗೌಡ ಕಂದಕೂರ ಅವರಿಗೆ ನೋಟಿಸ್‌ ಜಾರಿ ಮಾಡುವಂತೆ ನ್ಯಾಯಮೂರ್ತಿಗಳು ನಿರ್ದೇಶನ ನೀಡಿದರು.

ದೇಣಿಗೆ ಬೇರೆ ಲಂಚ ಬೇರೆ ‘ಯಡಿಯೂರಪ್ಪ ಅವರು ಶರಣಗೌಡ ಕಂದಕೂರ ಜತೆ ದೂರವಾಣಿಯಲ್ಲಿ ಮಾತನಾಡುವಾಗ ಚುನಾವಣೆಗೆ ನಿಲ್ಲುವುದಾದರೆ ಹಣಕಾಸಿನ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಹಣ ನೀಡುವ ಮೂಲಕ ಸಹಾಯ ಹಸ್ತ ಚಾಚುವುದು ಭ್ರಷ್ಟಾಚಾರದ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ, ಈ ನಿಟ್ಟಿನಲ್ಲಿ ವಿಚಾರಣೆಯ ಅಗತ್ಯವೇ ಇಲ್ಲ ಎಂಬ ತಮ್ಮ ವಾದವನ್ನು ನ್ಯಾಯಾಲಯ ಎತ್ತಿ ಹಿಡಿದಿದೆ,” ಎಂದು ಯಡಿಯೂರಪ್ಪ ಪರ ವಕೀಲ ಸಂಜಯ್‌ ಕುಲಕರ್ಣಿ ಸಂತಸ ವ್ಯಕ್ತಪಡಿಸಿದರು.

About the author

ಕನ್ನಡ ಟುಡೆ

Leave a Comment