ಸಿನಿ ಸಮಾಚಾರ

ಬಿಗ್​ಬಾಸ್ ಸೀಸನ್-6, ಬಿಗ್ ಮನೆ ಪ್ರವೇಶಿಸಿದ 18 ಸ್ಪರ್ಧಿಗಳು

ಬೆಂಗಳೂರು: ಬಿಗ್​ಬಾಸ್ ಸೀಸನ್-6ಕ್ಕೆ ಭಾನುವಾರ (ಅ.21) ಅದ್ದೂರಿ ಚಾಲನೆ ಸಿಕ್ಕಿದೆ. ಕಳೆದ 5 ಸೀಸನ್​ಗಳಿಗಿಂತ ಭಿನ್ನವಾದ ತಂತ್ರಗಳನ್ನು ಹೆಣೆದುಕೊಂಡು ಬಿಗ್​ಬಾಸ್ ಮತ್ತೆ ಪ್ರೇಕ್ಷಕರೆದುರಿಗೆ ಬಂದಿದೆ. ಕಳೆದ ಎರಡು ಸರಣಿಯಲ್ಲಿ ಕಾಮನ್ ಮ್ಯಾನ್ ಪರಿಕಲ್ಪನೆಯನ್ನು ಅಳವಡಿಸಿಕೊಂಡು ಬಂದಿದ್ದ ಈ ಜನಪ್ರಿಯ ರಿಯಾಲಿಟಿ ಶೋ, ಈ ಬಾರಿ ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಸೆಮಿ ಸೆಲೆಬ್ರಿಟಿ ಎಂಬ ಹೊಸ ಪರಿಕಲ್ಪನೆ ಪರಿಚಯಿಸುತ್ತಿದೆ. ಅದರಂತೆ ಈ ಬಾರಿ ಒಟ್ಟು 18 ಸ್ಪರ್ಧಿಗಳಿಗೆ ಮನೆಯೊಳಗೆ ತೆರಳಲು ಬಿಗ್​ಬಾಸ್ ಅವಕಾಶ ಕಲ್ಪಿಸಲಾಗಿದ್ದು, ಸಾಮಾನ್ಯರ ಜತೆ ಸೆಮಿ ಸೆಲೆಬ್ರಿಟಿಗಳೂ ಮನೆ ಪ್ರವೇಶಿಸಿದ್ದಾರೆ. ಎಂದಿನಂತೆ ‘ಕಿಚ್ಚ’ ಸುದೀಪ್ ಉಲ್ಲಾಸಮಯ ನಿರೂಪಣೆಯೊಂದಿಗೆ ಗಮನ ಸೆಳೆದಿದ್ದಾರೆ. ಕಿರುತೆರೆಯಲ್ಲಿ ಹೆಸರು ಮಾಡಿರುವ ಜಯಶ್ರೀ ರಾಜ್, ‘ಒಗ್ಗರಣೆ ಡಬ್ಬಿ’ ಮೂಲಕವೇ ಮನೆ ಮಾತಾದ ಮುರಳಿ, ‘ಪಲ್ಲಟ’ ಚಿತ್ರದಲ್ಲಿ ನಟಿಸಿದ ರಂಗಭೂಮಿ ಕಲಾವಿದೆ ಅಕ್ಷತಾ ಪಾಂಡವಪುರ, ‘ಫಸ್ಟ್ ಲವ್’ ಚಿತ್ರದ ಮೂಲಕ ಚಂದನವನ ಪ್ರವೇಶಿಸಿರುವ ‘ಲಕ್ಷ್ಮೀ ಬಾರಮ್ಮ’ ಖ್ಯಾತಿಯ ಕಿರುತೆರೆ ನಟಿ ಕವಿತಾ ಗೌಡ, ಪಟ್​ಪಟ್ ಅಂತ ಮಾತಿನಲ್ಲೇ ಮನೆಕಟ್ಟುವ ಆರ್​ಜೆ ರ್ಯಾಪಿಡ್ ರಶ್ಮಿ, ಹಿನ್ನೆಲೆ ಗಾಯಕ ನವೀನ್ ಸಜ್ಜು, ಈ ಹಿಂದೆ ಹಲವು ರಿಯಾಲಿಟಿ ಶೋಗಳಲ್ಲಿ ಪಾಲ್ಗೊಂಡಿದ್ದ ನಯನಾ ಪುಟ್ಟಸ್ವಾಮಿ ಈ ಬಾರಿಯ ಬಿಗ್​ಬಾಸ್​ನಲ್ಲಿ ಸ್ಥಾನ ಪಡೆದಿದ್ದಾರೆ.ಅದೇ ರೀತಿ, ಹಲವು ಸಿನಿಮಾಗಳಲ್ಲಿ ನಟಿಸಿ, ಇತ್ತೀಚೆಗಷ್ಟೇ ತಮಿಳು ರಿಯಾಲಿಟಿ ಶೋದಲ್ಲೂ ಭಾಗವಹಿಸಿದ್ದ, ಸೋನು ಪಾಟೀಲ್ ಬಿಗ್ ಮನೆ ಪ್ರವೇಶಿಸಿದ್ದಾರೆ. ಅವರೊಟ್ಟಿಗೆ ಆಂಡ್ಯ್ರೂ ಜಯಪಾಲ್, ಎಂ. ಜೆ. ರಾಕೇಶ್, ರಕ್ಷಿತಾ ರೈ, ಆಡಮ್ ಪಾಶಾ, ಎ. ವಿ. ರವಿ, ರೀಮಾ ದಿಯಾಸ್, ಸ್ನೇಹಾ ಆಚಾರ್ಯ, ಆನಂದ್, ಧನರಾಜ್ ಹೊಸ ಬಿಗ್​ಬಾಸ್ ಮನೆಗೆ ತೆರಳಿದ್ದಾರೆ. ಒಟ್ಟು ನೂರು ದಿನಗಳ ಕಾಲ ನಡೆಯುವ ಶೋನಲ್ಲಿ, ಹೊಸ ಬಗೆಯ ಟಾಸ್ಕ್​ಗಳನ್ನು ಸ್ಪರ್ಧಿಗಳಿಗೆ ನೀಡಿ, ಪ್ರೇಕ್ಷಕರನ್ನು ರಂಜಿಸುವ ಪ್ಲಾ್ಯನ್ ಬಿಗ್​ಬಾಸ್​ನದ್ದು. ಮನೆ ಒಳಾಂಗಣ ವಿನ್ಯಾಸವನ್ನೂ ಬದಲಾಯಿಸಲಾಗಿದ್ದು, ನೋಡುಗರಿಗೆ ಹೊಸತನ ಅನುಭವ ನೀಡುವ ಭರವಸೆಯೊಂದಿಗೆ ಕಲರ್​ಫುಲ್ ಚಾಲನೆ ನೀಡಲಾಗಿದೆ.

 

About the author

ಕನ್ನಡ ಟುಡೆ

Leave a Comment