ರಾಜ್ಯ ಸುದ್ದಿ

ಬಿಜೆಪಿಗೆ ರೈತರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ: ಉಪಮುಖ್ಯಮಂತ್ರಿ ಪರಮೇಶ್ವರ್

ತುಮಕೂರು: ‘ಬಿಜೆಪಿಗೆ ರೈತರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ’. ರಾಜ್ಯದ ರೈತರ ಸಮಸ್ಯೆ ಎಂದು ಕೇಂದ್ರದ ಬಳಿ ತೆರಳಿದಾಗ ಅವರು ಯಾವುದೇ ರೀತಿ ಸ್ಪಂದಿಸಿಲ್ಲ ಎಂದು ಉಪಮುಖ್ಯಮಂತ್ರಿ ಪರಮೇಶ್ವರ್​​ ಹೇಳಿದ್ದಾರೆ. ಕಬ್ಬು ಬೆಳೆಗಾರರ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕೇಂದ್ರ ಸರ್ಕಾರ ನಿಗದಿಪಡಿಸುವ ಎಫ್‌ಆರ್‌ಪಿ ಬೆಲೆ ಏರುಪೇರಾಗುತ್ತದೆ. ಅದರ ಮೇಲೆ ಸಕ್ಕರೆ ಕಾರ್ಖಾನೆ ಮಾಲೀಕರು ಕಬ್ಬಿನ‌ ಬೆಲೆ ನಿಗದಿಪಡಿಸುತ್ತಾರೆ.‌ ಕೆಲವು ಸಂದರ್ಭ ಎಫ್ಆರ್‌ಪಿ ಬೆಲೆಗಿಂತಾ ಹೆಚ್ಚು ಸಿಗುತ್ತದೆ, ಕಡಿಮೆಯೂ ಸಿಗುತ್ತದೆ ಎಂದರು.

ಕಾರ್ಖಾನೆಗಳು ರೈತರೊಂದಿಗೆ ಮಾಡಿಕೊಂಡ ಒಪ್ಪಂದಗಳಂತೆ ನಡೆದುಕೊಳೊಳ್ಳುವುದಿಲ್ಲ. ರೈತರಿಗೆ ಸಹಾಯ ಮಾಡಲೆಂದು ಕಾರ್ಖಾನೆಗಳಿಗೆ ಸರ್ಕಾರ ಹಣ ನೀಡಿದೆ. ಕಳೆದ ಬಾರಿ‌ ಸಿದ್ದರಾಮಯ್ಯ ಅವರು 450 ರೂಪಾಯಿ ಬೆಂಬಲ ಬೆಲೆ ನೀಡಿದ್ದಾರೆ. 2017-18 ನಡೆದ ಒಪ್ಪಂದದ ಹಣ ಕೊಟಿಲ್ಲ ಎಂದು ರೈತರು ಪ್ರತಿಭಟನೆ ನಡೆಸಿದ್ದಾರೆ‌ ಎಂದು ಹೇಳಿದರು‌‌.

ಸರ್ಕಾರ ಈಗಾಗಲೇ ರೈತರೊಂದಿಗೆ, ಕಾರ್ಖಾನೆ ಮಾಲೀಕರೊಂದಿಗೆ ಸಭೆ ನಡೆಸಿದೆ. ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಅಂತಿಮವಾಗಿ ತೀರ್ಮಾನಿಸಲಾಗುವುದು. ಕೇಂದ್ರ ಸರ್ಕಾರ ದರ ನಿಗದಿಪಡಿಸುವುದರಿಂದ ಅವರು ಸ್ಪಂದಿಸಬೇಕಿದೆ. ಬಿಜೆಪಿ ರೈತರ ಬಗ್ಗೆ ಮೊಸಳೆ ಕಣ್ಣೀರು ಹಾಕುವುದು ಬೇಡ. ರಾಜಕೀಯಕ್ಕಾಗಿ ರೈತರ ಪರವಾಗಿ ಮಾತನಾಡುತ್ತಾರೆ ಎಂದು ತಿಳಿಸಿದರು.

About the author

ಕನ್ನಡ ಟುಡೆ

Leave a Comment