ರಾಜ್ಯ ಸುದ್ದಿ

ಬಿಜೆಪಿಯಲ್ಲಿ ಹೀರೊಗಳಿಲ್ಲ, ರಾಜಕೀಯಕ್ಕಾಗಿ ಪಟೇಲ್ ಪ್ರತಿಮೆ ಅನಾವರಣ ಎಂದ ದಿನೇಶ್ ಗುಂಡೂರಾವ್

ಬೆಂಗಳೂರು : ಬಿಜೆಪಿಯಲ್ಲಿ ಯಾರೂ ಹೀರೊಗಳಿಲ್ಲದ್ದರಿಂದ ನರೇಂದ್ರ ಮೋದಿಯವರು ಅನಿವಾರ್ಯವಾಗಿ ಸರ್ದಾರ್‌ ವಲ್ಲಭಭಾಯಿ ಪಟೇಲರ ಪ್ರತಿಮೆ ನಿರ್ಮಿಸಿದ್ದಾರೆ. ಜತೆಗೆ ಪಂಡಿತ್‌ ನೆಹರೂ ಅವರನ್ನು ಖಳನಾಯಕನಂತೆ ಬಿಂಬಿಸುವ ಕೆಲಸವನ್ನು ಬಿಜೆಪಿ, ಆರ್‌ಎಸ್‌ಎಸ್‌ ಮಾಡುತ್ತಿವೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಆರೋಪಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಪ್ರಧಾನಿ ಜವಾಹರಲಾಲ್‌ ನೆಹರೂ ಜನ್ಮ ದಿನದ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಬಳಿಕ ಬುಧವಾರ ಅವರು ಮಾತನಾಡಿದರು.”ನೆಹರೂ ಕುಟುಂಬ ದೇಶಕ್ಕಾಗಿ ತ್ಯಾಗ ಮಾಡಿದೆ. ನೆಹರೂ ಅವರಿಗೆ ಅನಿವಾರ್ಯತೆ ಇಲ್ಲದಿದ್ದರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ಸೆರೆವಾಸ ಅನುಭವಿಸಿದ್ದರು. ಬಿಜೆಪಿಯ ಯಾವ ನಾಯಕರೂ ಸ್ವಾತಂತ್ರ್ಯಕ್ಕಾಗಿ ಹೋರಾಡಿ 10 ದಿನವೂ ಜೈಲಿನಲ್ಲಿ ಇರಲಿಲ್ಲ,” ಎಂದು ಟೀಕಿಸಿದರು.

”ಮೋದಿ ಪ್ರಧಾನಿಯಾಗುತ್ತಿದ್ದಂತೆ ಬಿಜೆಪಿಯ ಹಿರಿಯ ನಾಯಕರು ಮೂಲೆಗುಂಪಾಗಿದ್ದಾರೆ. ಆಡ್ವಾಣಿ ಅಂಥವರೇ ಮಾತಾಡದ ಸ್ಥಿತಿಗೆ ತಲುಪಿದ್ದಾರೆ. ಮೋದಿ ಸರ್ವಾಧಿಕಾರಿಯಾಗಿದ್ದಾರೆ. ಆದರೆ, ನೆಹರೂ ಪ್ರಜಾಪ್ರಭುತ್ವವಾದಿಯಾಗಿದ್ದರು. ಜನರಿಗೆ ಅನಿಸಿಕೆ ವ್ಯಕ್ತಪಡಿಸಲು ಮುಕ್ತ ಅವಕಾಶವಿತ್ತು. ಬಿಜೆಪಿಯಲ್ಲಿ ಹೀರೊಗಳೇ ಇಲ್ಲದ್ದರಿಂದ ಕಾಂಗ್ರೆಸ್‌ನ ಸರ್ದಾರ್‌ ಪಟೇಲ್‌, ಸುಭಾಷ್‌ಚಂದ್ರ ಬೋಸ್‌ ಅವರ ಹೆಸರು ಬಳಸಿಕೊಳ್ಳಲಾಗುತ್ತಿದೆ. ಜತೆಗೆ ಈ ನಾಯಕರೊಂದಿಗೆ ನೆಹರೂ ಅವರನ್ನು ಹೋಲಿಕೆ ಮಾಡಿ ಒಡೆದು ಆಳುವ ನೀತಿಯನ್ನು ಬಿಜೆಪಿ ಅನುಸರಿಸುತ್ತಿದೆ. ಪಟೇಲ್‌ ಮತ್ತು ನೆಹರೂ ನಡುವೆ ಸಣ್ಣ ವ್ಯತ್ಯಾಸವಿದ್ದಿದ್ದನ್ನೇ ದೊಡ್ಡದು ಮಾಡುತ್ತಿದ್ದಾರೆ. ಜತೆಗೆ ಬಿಜೆಪಿಯಲ್ಲಿ ಪ್ರತಿಮೆ ನಿರ್ಮಿಸುವಂತಹ ಅರ್ಹರು ಯಾರೂ ಇಲ್ಲ ,”ಎಂದು ಹೇಳಿದರು.

ಬದುಕಿದ್ದರೆ ಪಿಎಂ ಆಗುತ್ತಿದ್ದರು; ಸಂಸದ ಕೆ.ಎಚ್‌.ಮುನಿಯಪ್ಪ ಮಾತನಾಡಿ, ”ಸರ್ದಾರ್‌ ಪಟೇಲ್‌ ಪ್ರಧಾನಿ ಆಗುವುದನ್ನು ನೆಹರೂ ತಪ್ಪಿಸಿದರು ಎನ್ನುವುದು ಸರಿಯಲ್ಲ. ಪಟೇಲ್‌ ಅವರಿಗೆ ಈ ಹುದ್ದೆ ಸಿಕ್ಕಿದ್ದರೆ ಉತ್ತಮ ಪ್ರಧಾನಿಯಾಗುತ್ತಿದ್ದರು. ದುರಾದೃಷ್ಟವಶಾತ್‌ ಪಟೇಲರು ಚುನಾವಣೆ ಎದುರಿಸಲು ಸಾಧ್ಯವಾಗಲಿಲ್ಲ. ಯಾಕೆಂದರೆ ಆ ವೇಳೆಗೆ ಅವರು ನಿಧನರಾಗಿದ್ದರು. ಚುನಾವಣೆ ಬಳಿಕವೂ ಅವರು ಬದುಕಿದ್ದರೆ ಖಂಡಿತ ಪ್ರಧಾನಿಯಾಗುತ್ತಿದ್ದರು,” ಎಂದರು.

ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ ಮಾತನಾಡಿ, ”ಮೋದಿ ಸರಕಾರ ಜಾತಿ ಹಾಗೂ ಕೋಮುಗಳ ನಡುವೆ ಬಿಕ್ಕಟ್ಟು ಸೃಷ್ಟಿಸುತ್ತಿದೆ. ಕೇಂದ್ರ ಸರಕಾರ ಒಂದು ಸಮುದಾಯದ ಪೋಷಣೆ ಮಾಡುತ್ತಿದ್ದು, ಉದ್ಯಮಿಗಳು ಲೂಟಿಗಿಳಿದಿದ್ದಾರೆ,” ಎಂದು ಆರೋಪಿಸಿದರು.

About the author

ಕನ್ನಡ ಟುಡೆ

Leave a Comment