ರಾಷ್ಟ್ರ ಸುದ್ದಿ

ಬಿಜೆಪಿ ಅಧ್ಯಕ್ಷ ಅಮಿತ್‌ ಶಾಗೆ ಎಚ್‌1ಎನ್‌1: ಏಮ್ಸ್ ಆಸ್ಪತ್ರೆಗೆ ದಾಖಲು

ಹೊಸದಿಲ್ಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಎಚ್‌1ಎನ್‌1ನಿಂದ ಬಳಲುತ್ತಿದ್ದು, ಬುಧವಾರ ರಾತ್ರಿ ರಾಷ್ಟ್ರ ರಾಜಧಾನಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಸ್ವತ: ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾಹಿತಿ ನೀಡಿರುವ ಅಮಿತ್ ಶಾ, ”ನನಗೆ ಎಚ್‌1ಎನ್‌1 ಕಾಯಿಲೆ ಇದೆ ಎಂಬುದು ವೈದ್ಯರ ಪರೀಕ್ಷೆ ವೇಳೆ ಬಯಲಾಗಿದೆ. ದೇವರ ಅನುಗ್ರಹ ಹಾಗೂ ನಿಮ್ಮೆಲ್ಲರ ಶುಭ ಹಾರೈಕೆಗಳಿಂದ, ನಾನು ಶೀಘ್ರದಲ್ಲೇ ಚೇತರಿಸಿಕೊಳ್ಳುತ್ತೇನೆ” ಎಂದು ಹಿಂದಿಯಲ್ಲಿ ಟ್ವೀಟ್‌ ಮಾಡಿದ್ದಾರೆ. ಏಮ್ಸ್‌ ಮೂಲಗಳ ಪ್ರಕಾರ, ಬಿಜೆಪಿ ನಾಯಕ ಉಸಿರಾಟದ ಸಮಸ್ಯೆ ಹಾಗೂ ಇನ್ನಿತರೆ ಸಮಸ್ಯೆಯಿಂದಾಗಿ ಅಮಿತ್ ಶಾ ಆಸ್ಪತ್ರೆಗೆ ಸೇರಿದ್ದರು ಎಂದು ತಿಳಿದುಬಂದಿದೆ. ರಾತ್ರಿ 9 ಗಂಟೆ ವೇಳೆಗೆ ಆಸ್ಪತ್ರೆಗೆ ದಾಖಲಾದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಹೊಸದಿಲ್ಲಿಯ ಏಮ್ಸ್ ಆಸ್ಪತ್ರೆಯ ಹಳೆಯ ಖಾಸಗಿ ವಾರ್ಡ್‌ನಲ್ಲಿ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ.

ಏಮ್ಸ್‌ ನಿರ್ದೇಶಕ ರಣದೀಪ್ ಗುಲೇರಿಯಾ ನೇತೃತ್ವದಲ್ಲಿ ವೈದ್ಯರ ತಂಡವು ಅಮಿತ್ ಶಾ ಆರೋಗ್ಯದ ಮೇಲೆ ತೀವ್ರ ನಿಗಾ ವಹಿಸಿದ್ದಾರೆ. ಈ ಬಗ್ಗೆ ಕೇಂದ್ರ ಗೃಹ ಸಚಿವ ಸಹ ಟ್ವೀಟ್‌ ಮೂಲಕ ಮಾತನಾಡಿದ್ದು, ನಾನು ಏಮ್ಸ್ ಆಸ್ಪತ್ರೆಯಲ್ಲಿ ಎಚ್‌1ಎನ್‌1ಗೆ ಚಿಕಿತ್ಸೆ ಪಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೊಂದಿಗೆ ಮಾತನಾಡಿದ್ದೇನೆ. ಅವರು ಶೀಘ್ರದಲ್ಲಿ ಚೇತರಿಸಿಕೊಳ್ಳಲೆಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ ಎಂದು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ.

About the author

ಕನ್ನಡ ಟುಡೆ

Leave a Comment