ರಾಜಕೀಯ

ಬಿಜೆಪಿ ಐಟಿ ದಾಳಿಗೆ ಸೇಡು ತೀರಿಸಿಕೊಂಡ್ರಾ ಡಿಕೆಶಿ: ರಾಮನಗರ ‘ಶಾಕ್’ ಕೊಟ್ಟು ಶಿವಕುಮಾರ್

ಬೆಂಗಳೂರು: ಗುರುವಾರ ಬೆಳಗ್ಗೆ ಡಿಕೆ ಸಹೋದರರು ನೀಡಿದ ಶಾಕ್ ನಿಂದಾಗಿ ಇಡೀ  ರಾಜಕೀಯ ವಲಯದಲ್ಲಿ ಚರ್ಚೆಯಲ್ಲಿ ಮುಳುಗಿದೆ. ಜಲ ಸಂಪನ್ಮೂಲ ಸಚಿವ ಡಿ,ಕೆ ಶಿವಕುಮಾರ್ ಮತ್ತು ಸಹೋದರ ಹಾಗೂ ಸಂಸದ ಡಿ,ಕೆ ಸುರೇಶ್ ಮಾಡಿದ ಮಾಸ್ಟರ್ ಪ್ಲಾನ್ ಬಿಜೆಪಿ ಮುಖ ಕೆಂಪಾಗಿಸಿದೆ ಜೊತೆಗೆ ಕಾಂಗ್ರೆಸ್ ನಲ್ಲಿ ಡಿಕೆಶಿ ಪ್ರಾಬಲ್ಯ ಎಷ್ಟು ಎಂಬ ಸಂದೇಶ ರವಾನಿಸಿದೆ.

ಗುರುವಾರ ಬೆಳಗ್ಗೆ ಡಿ.ಕೆ ಶಿವಕುಮಾರ್ ಮನೆಯಲ್ಲಿ ಸುದ್ದಿಗೋಷ್ಟಿ ನಡೆಸಿದ ಬಿಜೆಪಿ ಅಭ್ಯರ್ಥಿ ಎಲ್ ಚಂದ್ರಶೇಖರ್ ತಾವು ಕಾಂಗ್ರೆಸ್ ಗೆ ಮರಳುತ್ತಿದ್ದು , ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರ ಸ್ವಾಮಿ ಅವರಿಗೆ ಬೆಂಬಲ ಘೋಷಿಸಿದರು. ಕಾಂಗ್ರೆಸ್ ನಲ್ಲಿ ಡಿ.ಕೆ ಸಹೋದರರ ವಿರುದ್ಧ ಮಾತನಾಡುತ್ತಿದ್ದವರ ಬಾಯಿ ಮುಚ್ಚಿಸಿದ್ದಾರೆ, ಜೊತೆಗೆ ತಾವು ಯಾವುದೇ ಕಾರಣಕ್ಕೂ ಬಗ್ಗುವುದಿಲ್ಲ ಎಂಬ ಪ್ರಬಲ ಸಂದೇಶ ರವಾನಿಸಿದ್ದಾರೆ.

ತಮ್ಮ ಮೇಲೆ ನಡೆದ ಆದಾಯ ತೆರಿಗೆ ಮತ್ತು ಜಾರಿ ನಿರ್ದೇಶನಾಲಯ ದಾಳಿಯಿಂದ ಜರ್ಝರಿತವಾಗಿದ್ದರು ಶಿವಕುಮಾರ್. ಒಬ್ಬ ವ್ಯಕ್ತಿಯನ್ನು ಗೋಡೆಗೆ ತಳ್ಳಿದಾಗ ಸ್ವಾಭಾವಿಕವಾಗಿಯೇ ಆಕ್ರೋಶ ಮೂಡುತ್ತದೆ, ರಾಮನಗರದ ದಂಗೆಯ ಮೂಲಕ ಬಿಜೆಪಿಗೆ ಮಾತ್ರವಲ್ಲ ಕಾಂಗ್ರೆಸ್ ಪಾಳೆಯಕ್ಕೂ ಡಿಕೆಶಿ ತಮ್ಮ ಪ್ರಾಬಲ್ಯ ತೋರಿದ್ದಾರೆ ಎಂದು ಡಿಕೆಶಿ ಸಹೋದರರ ಆಪ್ತರೊಬ್ಬರು ಹೇಳಿದ್ದಾರೆ.

ಗುರುವಾರ ಮಧ್ಯರಾತ್ರಿ 2 ಗಂಟೆ ವೇಳೆಗೆ ಚಂದ್ರಶೇಖರ್ ಅವರನ್ನು  ಬಿಜೆಪಿ ಬಿಡುವಂತೆ ಮನವೊಲಿಸಿದ್ದಾಗಿ ಸುದ್ದಿ  ಕೇಳಿ ಬಂದಿತ್ತು. ಸದ್ಯದ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಜೊತೆ ಶಿವಕುಮಾರ್ ಅವರಿಗೆ ಆಂತರಿಕ ಘರ್ಷಣೆ ನಡೆಯುತ್ತಿದೆ,  ಜೆಡಿಎಸ್ ಸಿಎಂ ಎಚ್.ಡಿ ಕುಮಾರ ಸ್ವಾಮಿ ಜೊತೆ ಹೆಚ್ಚು ಆಪ್ತರಾಗುತ್ತಿರುವುದು ಕಾಂಗ್ರೆಸ್ ನಲ್ಲಿ ಡಿಕೆ ವಿರುದ್ದ ಕತ್ತಿ ಮಸೆಯಲು ಪ್ರಮುಖ ಕಾರಣವಾಗಿದೆ,ಜೊತೆಗೆ ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಗಳ ರಾಜಕೀಯದಲ್ಲಿ ಡಿಕೆಶಿ ತಮ್ಮ ಮೂಗು ತೂರಿಸುತ್ತಿರುವುದು ಕಾಂಗ್ರೆಸ್ ನ ಕೆಲ ನಾಯಕರುಗಳಿಗೆ ಬಿಸಿತುಪ್ಪವಾಗಿದೆ, ತಮ್ಮ ನಾಯಕತ್ವವನ್ನು ವಿಸ್ತರಿಸಿಕೊಳ್ಳಲು ಆತುರ ಪಡುತ್ತಿರುವ ಡಿ,ಕೆ ಶಿವಕುಮಾರ್  ಹೈಕಮಾಂಡ್ ಗೂ ಅಸಮಾಧಾನ ಮೂಡಿಸಿದ್ದಾರೆ, ಆದರೆ ಗುರುವಾರ ನಡೆದ ರಾಜಕೀಯ ಬೆಳವಣಿದೆ ಡಿಕೆಶಿಗೆ ಮತ್ತಷ್ಟು ಬಲ ತಂದಿದ್ದು ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಂಡಿದ್ದಾರೆ.

ರಾಮನಗರ ದಂಗೆ ಸಣ್ಣ ಪ್ರಮಾಣದ್ದು, ಆದರೆ ಅದರ ಪರಿಣಾಮ ಮಾತ್ರ ದೊಡ್ಡದಾಗಿರುತ್ತದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ, ಒಕ್ಕಲಿಗರ ಪ್ರಾಬಲ್ಯವಿರುವ ರಾಮನಗರದಲ್ಲಿ ಬಿಜೆಪಿ ತನ್ನ ಅಸ್ಥಿತ್ವ ಕಂಡುಕೊಳ್ಳುವ ಪ್ರಯತ್ನಕ್ಕೆ ಡಿಕೆಶಿ ಎಳ್ಳು ನೀರು ಎರೆದಿದ್ದಾರೆ, ತಾವು ಕಾನೂನು ಪ್ರಕಾರವಾಗಿ ಸುರಕ್ಷವಾಗಿಲ್ಲ ಎಂಬದನ್ನು ತಿಳಿದಿರುವ ಶಿವಕುಮಾರ್, ತಮಗೆ ಐಟಿ ದಾಳಿಯಿಂದ ಉಂಟಾದ ನೋವು ಹಾಗೂ ಮುಜುಗರವನ್ನು ವಾಪಸ್ ನೀಡಲು ಬಯಸಿದ್ದಾರೆ,ಒಕ್ಕಲಿಗರ ಭಧ್ರಕೋಟೆಗೆ ಬಿಜೆಪಿ ನುಗ್ಗುವುದು ಅಷ್ಟು ಸುಲಭದ ಕೆಲಸವಲ್ಲ ಎಂಬುದನ್ನು ತಿಳಿಸಿದ್ದಾರೆ, ಬಿಜೆಪಿಯವರು ಲಿಂಗಾಯತರು, ಒಬಿಸಿ, ಹಾಗೂ ಎಸ್ ಸಿ ಮತ್ತು ಎಸ್ಟಿ ಮತದಾರರನ್ನು ಓಲೈಸಬಹುದು, ಆದರೆ ಒಕ್ಕಲಿಗ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಅದು ಸಾಧ್ಯವಿಲ್ಲ ಎಂಬ ಸಂದೇಶ್ ರವಾನಿಸಿದ್ದಾರೆ.

About the author

ಕನ್ನಡ ಟುಡೆ

Leave a Comment