ರಾಜಕೀಯ

ಬಿಜೆಪಿ ನಾಯಕರ ಟೆಲಿಫೋನ್‌ ಕದ್ದಾಲಿಕೆ: ಅಶೋಕ್‌ ಆರೋಪ

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಟೆಲಿಫೋನ್‌ ಕರೆಗಳ ಕದ್ದಾಲಿಕೆಯ ವಿಚಾರವನ್ನು ಬಿಜೆಪಿ ಪ್ರಸ್ತಾಪಿಸಿದ್ದು, ಆಡಳಿತರೂಢ ಪಕ್ಷದ ಕಾಂಗ್ರೆಸ್‌ ಸಚಿವರು ಬಿಜೆಪಿ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ನಿರಾಕರಿಸಿದ್ದಾರೆ. ಖಾಸಗಿ ಸುದ್ದಿವಾಹಿನಿ ಜತೆ ಮಾತನಾಡಿರುವ ಮಾಜಿ ಡಿಸಿಎಂ ಆರ್‌. ಅಶೋಕ್‌, ”ರಾಜ್ಯ ಸರಕಾರವು ಬಿಜೆಪಿ ನಾಯಕರು ಹಾಗೂ ಕೆಲವು ಪತ್ರಕರ್ತರ ಟೆಲಿಫೋನ್‌ ಕರೆಗಳನ್ನು ಕದ್ದಾಲಿಸುತ್ತಿದೆ,”ಆರೋಪಿಸಿದ್ದಾರೆ.

”ಬಿಜೆಪಿ ನಾಯಕರು ಮಾತ್ರವಲ್ಲದೆ ಕಾಂಗ್ರೆಸ್‌ನ ಪ್ರಮುಖ ನಾಯಕರ ದೂರವಾಣಿ ಕರೆಗಳನ್ನು ಕದ್ದಾಲಿಸಲಾಗುತ್ತಿದೆ. ವಿಶೇಷವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಹಲವು ನಾಯಕರ ದೂರವಾಣಿ ಕರೆಗಳನ್ನು ಕದ್ದಾಲಿಸುತ್ತಿರುವುದು ನಿಜ. ಸಮ್ಮಿಶ್ರ ಸರಕಾರ ಪತನಗೊಳಿಸಲು ಕಾಂಗ್ರೆಸ್‌ನ ಕೆಲವು ನಾಯಕರು ಪ್ರಯತ್ನಿಸಬಹುದು ಎಂಬ ಆತಂಕ ಹಾಗೂ ಅನುಮಾನದಿಂದ ಸರಕಾರ ಈ ಕೃತ್ಯದಲ್ಲಿ ಭಾಗಿಯಾಗಿದೆ,” ಎಂದು ದೂರಿದ್ದಾರೆ.

ಫೋನ್‌ ಬಳಸುವಾಗ ವಿಚಿತ್ರ ಸದ್ದು ಬರುತ್ತಿದ್ದು, ಟ್ಯಾಪ್‌ ಆಗುತ್ತಿರುವ ಅನುಮಾನವಿದೆ. ಈ ಬಗ್ಗೆ ಸರಕಾರ ಸ್ಪಷ್ಟನೆ ನೀಡಬೇಕು. ಈ ಬಗ್ಗೆ ಅಧಿವೇಶನದಲ್ಲಿ ತನಿಖೆಗೆ ಒತ್ತಾಯಿಸಲಾಗುವುದು.
ಜಗದೀಶ ಶೆಟ್ಟರ್‌, ಮಾಜಿ ಸಿಎಂ. 

ಫೋನ್‌ ಕದ್ದಾಲಿಕೆ ಬಿಜೆಪಿಯವರಿಗೆ ಕರಗತವಾಗಿರುವ ವಿಚಾರ. ನಾವು ಬಿಜೆಪಿಯಿಂದ ಪ್ರಜಾಪ್ರಭುತ್ವದ ರಕ್ಷಣೆ ಮಾಡಬೇಕಿದೆ. ಕೃಷ್ಣ ಭೈರೇಗೌಡ ಗ್ರಾಮೀಣಾಭಿವೃದ್ಧಿ ಸಚಿವ (ಚಿತ್ರದುರ್ಗದಲ್ಲಿ)

ದೂರವಾಣಿ ಕದ್ದಾಲಿಕೆ ಬಗ್ಗೆ ಪ್ರತಿಪಕ್ಷದವರು ಮಾಡಿರುವ ಆರೋಪದಲ್ಲಿ ಹುರುಳಿಲ್ಲ. ಕದ್ದಾಲಿಕೆ ಮಾಡುವ ಅವಶ್ಯಕತೆಯೂ ಇಲ್ಲ. – ಆರ್‌.ವಿ.ದೇಶಪಾಂಡೆ, ಕಂದಾಯ ಸಚಿವ(ಬೆಂಗಳೂರಿನಲ್ಲಿ)

About the author

ಕನ್ನಡ ಟುಡೆ

Leave a Comment