ರಾಜಕೀಯ

ಬಿಜೆಪಿ ಭಿನ್ನಮತ ಸ್ಫೋಟ: ಶಿಗ್ಗಾಂವಿ ವಿಧಾನಸಭೆ ಕ್ಷೇತ್ರದಲ್ಲಿ ಟಿಕೆಟ್​ ಯಾರಿಗೆ?

ಹಾವೇರಿ: ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಪಕ್ಷದಲ್ಲಿನ ಆಂತರಿಕ ಭಿನ್ನಮತ ಸ್ಫೋಟಗೊಂಡಿದೆ.

ಬಿಜೆಪಿ ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ ಮತ್ತು ಮಾಜಿ ಶಾಸಕ ರಾಜಶೇಖರ ಸಿಂಧೂರ ಸೇರಿ ನಾಲ್ವರು ಆಕಾಂಕ್ಷಿಗಳು ಜಂಟಿ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ಪಕ್ಷದಿಂದ ಬಿ ಫಾರ್ಮ್ ಸಿಗದಿದ್ದರೆ ಪಕ್ಷೇತರರಾಗಿ ಸ್ಪರ್ಧಿಸುವ ಎಚ್ಚರಿಕೆ ನೀಡಿದ್ದಾರೆ.

ಹತ್ತು ವರ್ಷ ಕ್ಷೇತ್ರವನ್ನು ಬಸವರಾಜ ಬೊಮ್ಮಾಯಿಗೆ ಬಿಟ್ಟು ಕೊಡುವಂತೆ ಬಿಎಸ್ ವೈ ಹೇಳಿದ್ದರು. ಅದರಂತೆ ಬಸವರಾಜ ಬೊಮ್ಮಾಯಿ ಸಹ ಹತ್ತು ವರ್ಷಗಳ ನಂತರ ಕ್ಷೇತ್ರ ಬಿಟ್ಟುಕೊಡುತ್ತೀನಿ ಎಂದು ತಾಯಿಯ ಮೇಲೆ ಆಣೆ ಮಾಡಿದ್ದರು. ಆದರೆ, ಈಗ ಮತ್ತೆ ಶಾಸಕ ಬಸವರಾಜ ಬೊಮ್ಮಾಯಿ ಅವರ ಹೆಸರೇ ಓಡಾಡುತ್ತಿದೆ. ಶಾಸಕ ಬಸವರಾಜ ಬೊಮ್ಮಾಯಿ ಹೊರತುಪಡಿಸಿ ಕ್ಷೇತ್ರದಲ್ಲಿ ನಾಲ್ವರು ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿದ್ದೇವೆ. ನಾಲ್ವರಲ್ಲಿ ಯಾರಾದರೂ ಒಬ್ಬರಿಗೆ ಟಿಕೆಟ್ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಟಿಕೆಟ್‌ ದೊರಕದಿದ್ದರೆ ನಾಲ್ವರಲ್ಲಿ ಒಬ್ಬರು ಒಮ್ಮತದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತೇವೆ. ಸ್ಥಳೀಯರೇ ಅಭ್ಯರ್ಥಿ ಆಗಬೇಕು ಎಂಬುದು ಕಾರ್ಯಕರ್ತರ ಒತ್ತಾಯವಾಗಿದೆ. ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‌ವೈ ಸೇರಿದಂತೆ ಪಕ್ಷದ ಎಲ್ಲ ಮುಖಂಡರನ್ನು ಭೇಟಿ ಮಾಡಿದ್ದೇವೆ. ಕೆಲವರು ಕೈ ಚೆಲ್ಲಿದರೆ, ಕೆಲವರು ಸಮೀಕ್ಷೆ ಮಾಡಿಸ್ತಿದ್ದೇವೆ ಎಂದು ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಕಣದಿಂದ ಹಿಂದೆ ಸರಿಯೋ ಪ್ರಶ್ನೆ ಇಲ್ಲ ಎಂದು ಹೇಳಿದ್ದಾರೆ.

ಶಿಗ್ಗಾಂವಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಶಾಸಕ ಬಸವರಾಜ ಬೊಮ್ಮಾಯಿ, ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ, ಮಾಜಿ ಶಾಸಕ ರಾಜಶೇಖರ ಸಿಂಧೂರ, ಶ್ರೀಕಾಂತ ದುಂಡಿಗೌಡರ ಮತ್ತು ಶಶಿಧರ ಎಲಿಗಾರ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

About the author

ಕನ್ನಡ ಟುಡೆ

Leave a Comment