ರಾಜಕೀಯ

ಬಿಜೆಪಿ ಸೇರಲು ಬಂಜಾರಾ ಶ್ರೀ ಆಶೀರ್ವಾದ ಪಡೆದ ಜಾಧವ

ಚಿಂಚೋಳಿ: ಕಾಂಗ್ರೆಸ್‌ ಪಕ್ಷ ನನಗೆ ಸಚಿವ ಸ್ಥಾನ ನೀಡದೇ ಅನ್ಯಾಯ ಮಾಡಿದೆ. ನಾನು ಸಚಿವ ಸ್ಥಾನಕ್ಕೆ ಅರ್ಹನಾಗಿದ್ದರೂ ನಿರ್ಲಕ್ಷಿಸಲಾಗಿದೆ ಎಂದು ಅತೃಪ್ತಗೊಂಡಿರುವ ಶಾಸಕ ಡಾ.ಉಮೇಶ ಜಾಧವ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆಗೊಳ್ಳಲು ಬಂಜಾರಾ ಸಮಾಜದ ಧರ್ಮಗುರು ಶ್ರೀ ಡಾ. ರಾಮರಾವ್‌ ಮಹಾರಾಜ ಅವರನ್ನು ಭೇಟಿ ಮಾಡಿ ತಮ್ಮ ಮುಂದಿನ ನಡೆ ಬಗ್ಗೆ ಚರ್ಚಿಸಿದ್ದಾರೆಂದು ಮೂಲಗಳು ತಿಳಿಸಿವೆ. ಮಹಾರಾಷ್ಟ್ರದ ಪೌರಾದೇವಿ ಶಕ್ತಿಪೀಠದ ಧರ್ಮಗುರು ಶ್ರೀ ಡಾ.ರಾಮರಾವ್‌ ಮಹಾರಾಜರನ್ನು ಭಾನುವಾರ ಭೇಟಿ ಮಾಡಿ ತಮಗೆ ಕಾಂಗ್ರೆಸ್‌ನಿಂದ ಅನ್ಯಾಯವಾಗಿರುವ ಕುರಿತು ಸುದೀರ್ಘ‌ವಾಗಿ ಮಾತುಕತೆ ನಡೆಸಿದರು ಎನ್ನಲಾಗಿದೆ.

ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಆಗುತ್ತಿಲ್ಲ. ಸಮ್ಮಿಶ್ರ ಸರ್ಕಾರದಿಂದ ಅನುದಾನ ನೀಡುತ್ತಿಲ್ಲ. ಅಧಿಕಾರಿಗಳ ವರ್ಗಾವಣೆ ಮತ್ತು ಕಾರ್ಯಕರ್ತರಿಗೆ ಕೆಲಸ ನೀಡುವ ವಿಚಾರದಲ್ಲೂ ಅಸಮಾಧಾನವಿದೆ. ತಾಂಡಾಗಳಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಆಗುತ್ತಿಲ್ಲ. 2013ರಲ್ಲಿ ತಮ್ಮ ಆಶೀರ್ವಾದಿಂದ ಮತಕ್ಷೇತ್ರದಲ್ಲಿ ಹೆಚ್ಚು ಅಭಿವೃದ್ಧಿ ಪಡಿಸಿದ್ದೇನೆ. 2018ರಲ್ಲಿ ಮತ್ತೆ ಶಾಸಕರಾಗಿ ಆಯ್ಕೆಗೊಂಡಿದ್ದೇನೆ. ಆದರೂ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್‌ ನನಗೆ ಸಚಿವ ಸ್ಥಾನ ಕೊಡಿಸುವಲ್ಲಿ ನಿರ್ಲಕ್ಷ್ಯತನ ತೋರಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಅವರ ಆಪ್ತರು ತಿಳಿಸಿದ್ದಾರೆ.

ಬಿಜೆಪಿ ಸೇರ್ಪಡೆಗೊಳ್ಳುವ ಕುರಿತು ಕಳೆದೆರಡು ದಿನಗಳಿಂದ ಮಹಾರಾಷ್ಟ್ರದ ರೆಸಾರ್ಟ್‌ವೊಂದರಲ್ಲಿ ಬೀಡು ಬಿಟ್ಟಿರುವ ಬಿಜೆಪಿ ಶಾಸಕರೊಂದಿಗೆ ಜಾಧವ ಮಾತುಕತೆ ನಡೆಸಿದ್ದನ್ನು ಅವಲೋಕಿಸಿದರೆ ಬಿಜೆಪಿಗೆ ಸೇರುವುದು ಬಹುತೇಕ ಖಚಿತವಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

 

About the author

ಕನ್ನಡ ಟುಡೆ

Leave a Comment