ರಾಜಕೀಯ

ಬಿಬಿಎಂಪಿಯಂತೇ ಮೈಸೂರಲ್ಲೂ ಫೈಟ್​: ಮೇಯರ್​ ಸ್ಥಾನಕ್ಕಾಗಿ ದೋಸ್ತಿಗಳು, ಅಧಿಕಾರಕ್ಕಾಗಿ ಬಿಜೆಪಿ ಶತಪ್ರಯತ್ನ

ಮೈಸೂರು: ಅತಂತ್ರವಾಗಿರುವ ಮೈಸೂರು ಮಹಾನಗರ ಪಾಲಿಕೆಯ ಮೇಯರ್​ ಉಪ ಮೇಯರ್​ ಸ್ಥಾನಕ್ಕೆ ಇಂದು ಚುನಾವಣೆ ನಡೆಯಲಿದೆ. ಆದರೆ, ಪಾಲಿಕೆ ಗದ್ದುಗೆಗಾಗಿ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್​-ಜೆಡಿಎಸ್​ ಪಕ್ಷಗಳು ಮೇಯರ್​ ಸ್ಥಾನಕ್ಕಾಗಿ ಹಗ್ಗಜಗ್ಗಾಟ ನಡೆಸುತ್ತಿದ್ದರೆ, ಕೈ ತಪ್ಪಿರುವ ಅಧಿಕಾರ ಪಡೆಯಲು ಬಿಜೆಪಿ ತೆರೆ ಮರೆಯ ಪ್ರಯತ್ನ ನಡೆಸುತ್ತಿದೆ.

ಕಳೆದ ಬಾರಿಯಂತೇ ಈ ಬಾರಿಯೂ ಮೈಸೂರು ಪಾಲಿಕೆ ಅತಂತ್ರಗೊಂಡಿತ್ತು. ಕಳೆದ ಬಾರಿ ಜೆಡಿಎಸ್​ ಬಿಜೆಪಿ ಮೈತ್ರಿ ಮಾಡಿಕೊಂಡಿದ್ದವಾದರೂ, ಈ ಬಾರಿ ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಮಾಡಿಕೊಂಡಿವೆ. ಸದಸ್ಯಬಲದಲ್ಲಿ ಹೆಚ್ಚು ಕಡಿಮೆ ಕಾಂಗ್ರೆಸ್​-ಜೆಡಿಎಸ್​ಗೆ ಸಮಬಲವಿದ್ದರೂ, ಕಾಂಗ್ರೆಸ್​ ಮೇಯರ್​ ಸ್ಥಾನಕ್ಕಾಗಿ ಪಟ್ಟು ಹಿಡಿದಿದೆ. ಮೇಯರ್​ ಸ್ಥಾನ ನಮಗೇ ಬೇಕು ಎಂದು ಈಗಾಗಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಹೇಳಿದ್ದಾರೆ. ಆದರೆ, ಮೇಯರ್​ ಪಟ್ಟ ಬಿಟ್ಟುಕೊಡಲು ಜೆಡಿಎಸ್​ಗೆ ಸಮ್ಮತವಿದ್ದಂತೆ ಕಾಣುತ್ತಿಲ್ಲ. ಇದು ಮೈತ್ರಿ ಪಕ್ಷಗಳ ನಡುವೆ ಸಮಸ್ಯ ತಂದಿಟ್ಟಿದೆ. ಹೀಗಾಗಿ ಎರಡೂ ಪಕ್ಷಗಳ ನಾಯಕರು ಪ್ರತ್ಯೇಕ ಸಭೆಗಳನ್ನು ನಡೆಸಿ ಮೇಯರ್​ ಹುದ್ದೆ ಪಡೆಯುವ ಕುರಿತು ತಂತ್ರ ರೂಪಿಸುತ್ತಿದ್ದಾರೆ.

ಇತ್ತ ಪಾಲಿಕೆಯಲ್ಲಿ ಅತಿ ದೊಡ್ಡ ಪಕ್ಷವಾದರೂ, ಅಧಿಕಾರದಿಂದ ವಂಚಿತವಾಗಿರುವ ಬಿಜೆಪಿ ಮೈತ್ರಿ ಪಕ್ಷಗಳ ನಡುವಿನ ಬಂಡಾಯದ ಲಾಭ ಪಡೆದು ಅಧಿಕಾರ ಹಿಡಿಯುವ ಯೋಜನೆಯಲ್ಲಿದೆ. ಕಾಂಗ್ರೆಸ್​ ಜತೆಗೆ ಮೈತ್ರಿ ಮಾಡಿಕೊಳ್ಳ ಬಯಸದ ಸದಸ್ಯರು ಇತ್ತ ಬಂದರೆ, ಒಂದು ಕೈ ನೋಡುವ ಇರಾದೆಯಲ್ಲಿದೆ ಬಿಜೆಪಿ.

ಇನ್ನು, ಪಾಲಿಕೆ ಚುನಾವಣೆಯ ಉಸ್ತುವಾರಿಯನ್ನು ಕಾಂಗ್ರೆಸ್​, ಸಚಿವ ಕೃಷ್ಣಬೈರೇಗೌಡ ಅವರಿಗೆ ವಹಿಸಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರೂ ಮೈಸೂರಿಗೆ ಆಗಮಿಸಿದ್ದಾರೆ. ಈ ಇಬ್ಬರೂ ನಾಯಕರು ಸ್ಥಳೀಯ ನಾಯಕರೊಂದಿಗೆ ಸರಣಿ ಸಭೆಗಳನ್ನು ನಡೆಸುತ್ತಿದ್ದು, ಸದಸ್ಯರನ್ನು ಹಿಡಿದಿಟ್ಟುಕೊಳ್ಳುವ ಬಗ್ಗೆ ಮತ್ತು ಮೇಯರ್​ ಹುದ್ದೆ ಪಡೆಯುವ ಬಗ್ಗೆ ರಣ ತಂತ್ರ ರೂಪಿಸುತ್ತಿದ್ದಾರೆ. ಜೆಡಿಎಸ್​ ಪಾಳೆಯದಲ್ಲಿ ಜಿ.ಟಿ ದೇವೇಗೌಡ ಮತ್ತು ಸಾ.ರಾ ಮಹೇಶ್​ ಮುಖಂಡರ ಸಭೆಗಳಲ್ಲಿ ತೊಡಗಿದ್ದಾರೆ.

ಇನ್ನೊಂದೆಡೆ ಸಚಿವ ಜಿ.ಟಿ.ದೇವೇಗೌಡ ಮೇಯರ್​ ಹುದ್ದೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದಾರೆ ಎನ್ನಲಾಗಿದೆ. ಇತ್ತ ಸಿದ್ದರಾಮಯ್ಯ ಅವರೂ ಪಟ್ಟು ಹಿಡಿದಿದ್ದಾರೆ. ಹಾಗೇನಾದರೂ ಆದರೆ, ಇಬ್ಬರೂ ನಾಯಕರ ನಡುವೆ ಮತ್ತೊಂದು ಸುತ್ತಿನ ರಾಜಕೀಯ ಗುದ್ದಾಟ ನಿಶ್ಚಿತ. ಮೈಸೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ 22, ಜೆಡಿಎಸ್ 18 ಕಾಂಗ್ರೆಸ್ 19 ಪಕ್ಷೇತರ 6 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಪಾಲಿಕೆಯ ಸದಸ್ಯ ಬಲ 65.

About the author

ಕನ್ನಡ ಟುಡೆ

Leave a Comment