ಸಿನಿ ಸಮಾಚಾರ

ಬಿಸಿಲಿಗೆ ಬಂದು ನೋಡಲಿ ಎಂದಿದ್ದ ಸಿಎಂ ಎಚ್ ಡಿಕೆಗೆ ನಟ ಯಶ್ ಕೊಟ್ಟ ಭರ್ಜರಿ ತಿರುಗೇಟು

ಬೆಂಗಳೂರು: ಇಡೀ ಕರ್ನಾಟಕದಲ್ಲಿಯೇ ಮಂಡ್ಯ ಲೋಕಸಭೆ ಚುನಾವಣಾ ಅಖಾಡ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸುಮಲತಾ ಹಾಗೂ ಕಾಂಗ್ರೆಸ್ -ಜೆಡಿಎಸ್ ಅಭ್ಯರ್ಥಿ ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ನಡುವೆ ಜಿದ್ದಾಜಿದ್ದಿ ತಾರಕಕ್ಕೇರಿದೆ. ಇಬ್ಬರ ಪರವಾಗಿ ಪ್ರಚಾರ ನಡೆಸುತ್ತಿರುವವರು ಕೊಡುತ್ತಿರುವ ಏಟು-ತಿರುಗೇಟು ಭಾರೀ ಸದ್ದು ಮತ್ತು ಸುದ್ದಿ ಮಾಡುತ್ತಿದೆ. ನಿನ್ನೆ ಸುಮಲತಾ ಪರ ಪ್ರಚಾರ ನಡೆಸುತ್ತಿದ್ದ ವೇಳೆ ನಟ ಯಶ್ ಸಿಎಂ ಹೇಳಿಕೆಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಇವು ಶೋಕಿ ಎತ್ತುಗಳು ಬಿಸಿಲಿಗೆ ಬರಲ್ಲ” ಎಂಬ ಸಿಎಂ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಯಶ್​​, ನಮಗೆ ಬಿಸಿಲು ಹೊಸದೇನಲ್ಲ ಎಂದಿದ್ಧಾರೆ. ಅಷ್ಟೇ ಅಲ್ಲದೇ ನಮ್ಮಪ್ಪ ಡ್ರೈವರ್​​​, ನಾನು ಡ್ರೈವರ್​​ ಮಗ. ಹೀಗಾಗಿ ನಮಗೆ ಬಿಸಿಲು ಹೊಸದಲ್ಲ ಎನ್ನುವ ಮೂಲಕ ಸಿಎಂ ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ಧಾರೆ. ನಟ ಯಶ್​​, ಬಿಸಿಲಿಗೆ ಬರಬೇಕೆಂದು ತೋರಿಸಿಕೊಡೋರು ಜನ. ನಮಗೆ ಬಿಸಿಲು ಹೊಸದೇನಲ್ಲ. ರೋಡ್ನಲ್ಲಿ ಗಲ್ಲಿ ಕ್ರಿಕೆಟ್, ಬುಗುರಿ ಆಡಿ ಬೆಳೆದವನು. ನಾನು ಡ್ರೈವರ್ ಮಗ, ನಮಗೆ ಬಿಸಿಲು ಹೊಸದಲ್ಲ. ಸರ್ಕಾರಿ ಬಸ್ಸಲ್ಲಿ ಓಡಾಡಿಯೇ ಇಲ್ಲಿಗೆ ಬಂದವರು ನಾವು. ಮತ್ತೆ ಬಿಸಿಲಿಗೆ ಬರೋಕೆ ನನಗೇನೂ ಸಮಸ್ಯೆ ಇಲ್ಲ. ಆದರೆ, ಹುಟ್ಟಿದಾಗಿನಿಂದ ನೆರಳಲ್ಲೇ ಇದ್ದವರು ಯಾರು? ಹೀಗೆ ಬೆಳೆದವರು ಮಾತ್ರ ಬಿಸಿಲು ಬಗ್ಗೆ ಯೋಚಿಸಬೇಕು ಎಂದು ಸಿಎಂ ಹೇಳಿಕೆಗೆ ಭರ್ಜರಿಯಾಗಿಯೇ ತಿರುಗೇಟು ನೀಡಿದರು. ಈ ಚುನಾವಣಾ ಅಖಾಡದಲ್ಲಿ ಸಿನಿಮಾದವರು ಯಾರೆಲ್ಲಾ ಇದ್ದಾರೆ ಎಂದು ಸ್ವತಃ ಸಿಎಂ ಯೋಚಿಸಲಿ. ನಾನೊಬ್ಬನೇ ಇಲ್ಲಿ ಪ್ರಚಾರ ಮಾಡುತ್ತಿಲ್ಲ. ಸಿಎಂ ಯಾರಿಗೆ ಹೇಳಿಕೆ ಕೊಟ್ಟಿದ್ದಾರೆ ಅಂತ ನೀವೇ ಆಲೋಚಿಸಿ. 6 ಕೋಟಿ ಜನ ಆಯ್ಕೆ ಮಾಡಿರೋ ಸಿಎಂ ಅವರು. ಅವರು ಯಾವ ಅರ್ಥದಲ್ಲಿ ಏನು ಹೇಳಿದ್ದಾರೋ ನನಗಂತು ಅರ್ಥವಾಗಲಿಲ್ಲ. ನಮಗೆ ಹೋದ ಕಡೆಯೆಲ್ಲಾ ಒಳ್ಳೆಯ ಬೆಂಬಲ ಸಿಗುತ್ತಿದೆ. ಜನರನ್ನು ನೇರವಾಗಿ ಭೇಟಿ ಮಾಡುವ ಮೂಲಕ ಜನರಿಗೆ ಇನ್ನಷ್ಟು ಹತ್ತಿರವಾಗುತ್ತಿದ್ದೇವೆ ಎಂದರು.

About the author

ಕನ್ನಡ ಟುಡೆ

Leave a Comment