ರಾಜ್ಯ ಸುದ್ದಿ

ಬೆಂಗಳೂರಿನ ಎಲ್ಲಾ ರಸ್ತೆಗಳಲ್ಲೂ ಸಿಸಿಟಿವಿ ಅಳವಡಿಕೆ: ಸಿಎಂ ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ಅಪರಾಧ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳಲು ಮುಂದಾಗಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ನಗರದ ಎಲ್ಲಾ ರಸ್ತೆಗಳಲ್ಲೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ ಎಂದು ಸೋಮವಾರ ಹೇಳಿದ್ದಾರೆ. ವಿಶ್ವ ಹಿರಿಯರ ನಾಗರಿಕರ ದಿನಾಚರಣೆ ಹಿನ್ನಲೆಯಲ್ಲಿ ನಗರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಅಪರಾಧ ತಡೆಯಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಸಿದ್ಧವಿಗೆ. ಅಗತ್ಯಬಿದ್ದರೆ, ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡಿ ರಸ್ತೆಗಳಲ್ಲಿ ಭದ್ರತೆಯೊದಗಿಸಲು ಮುಂದಾಗುತ್ತದೆ ಎಂದು ಹೇಳಿದ್ದಾರೆ. ಕೋಟಿಗಟ್ಟಲೇ ಹಣ ಖರ್ಚಾದರೂ ಸರಿ ನಮ್ಮ ಸರ್ಕಾರ ನಗರದ ಎಲ್ಲಾ ರಸ್ತೆಗಳಲ್ಲಿಯೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಿಡಸಲಿದೆ. ಈ ಬಗ್ಗೆ ಶೀಘ್ರದಲ್ಲಿಯೇ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ. ಬೆಂಗಳೂರು ನಗರದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಕಡಿಮೆ ಮಾಡಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲು ಸಿದ್ಧರಿದ್ದೇವೆಂದು ತಿಳಿಸಿದ್ದಾರೆ. ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಮೂವರು ಉತ್ತಮ ಅಧಿಕಾರಿಗಳನ್ನು ನೇಮಿಸಿದ್ದೇನೆ. ಯಾವ ಮಾಫಿಯಾವು ನನಗೆ ಬೆದರಿಕೆ ಹಾಕಲು ಸಾಧ್ಯವಿಲ್ಲ. ಎಲ್ಲಾ ರೀತಿಯ ಮಾಫಿಯಾ, ಮಾದಕ ವ್ಯಸನಗಳನ್ನು ಹತ್ತಿಕ್ಕುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಭೂಗಳ್ಳರು, ಮಾಫಿಯಾ, ದಂಧೆಕೋರರು ತಮ್ಮನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ರೀತಿಯ ಸಮಸ್ಯೆ ಇಲ್ಲ. ಸಮಸ್ಯೆ ಬಂದರೂ ಅದನ್ನು ಅರಗಿಸಿಕೊಳ್ಳುವ ಶಕ್ತಿ ನನಗಿದೆ ಎಂದಿದ್ದಾರೆ.
ಬಳಿಕ ಹಿರಿಯ ನಾಗರಿಕರ ಕುರಿತಂತೆ ಮಾತನಾಡಿದ ಅವರು, ಹಿರಿಯ ನಾಗರಿಕರಿಗೆ ಈ ಹಿಂದೆ ನೀಡುತ್ತಿದ್ದ ರೂ.600 ಮಾಸಾಶನ ಮೊತ್ತವನ್ನು ರೂ.1 ಸಾವಿರಕ್ಕೆ ಹೆಚ್ಚಳ ಮಾಡಿದ್ದೇನೆ. ಇನ್ನು ಮುಂದೆ ಪ್ರತಿ ವರ್ಷ ರೂ.1 ಸಾವಿರ ನಂತೆ 5 ವರ್ಷಗಳಲ್ಲಿ 5 ಸಾವಿರ ನೀಡಲಾಗುವುದು. ಮುಂದಿನ ನವೆಂಬರ್ ನಿಂದಲೇ ಹಿರಿಯ ನಾಗರೀಕರಿಗೆ ಮಾಸಿಕ ರೂ.1 ಸಾವಿರ ನೀಡಲಾಗುವುದು ಎಂದು ತಿಳಿಸಿದ್ದಾರೆ.

About the author

ಕನ್ನಡ ಟುಡೆ

Leave a Comment