ರಾಜ್ಯ ಸುದ್ದಿ

ಬೆಂಗಳೂರು: ಇಂದಿನಿಂದ ಆರಂಭವಾಗಿರುವ ನಾಲ್ಕು ದಿನಗಳ ಕೃಷಿ ಮೇಳಕ್ಕೆ ರಾಜ್ಯಪಾಲ ವಜೂಭಾಯಿ ವಾಲಾ ಚಾಲನೆ

ಬೆಂಗಳೂರು: ಹೆಬ್ಬಾಳದ  ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಇಂದಿನಿಂದ ಆರಂಭವಾಗಿರುವ ನಾಲ್ಕು ದಿನಗಳ ಕೃಷಿ ಮೇಳಕ್ಕೆ ರಾಜ್ಯಪಾಲ  ವಜೂಭಾಯಿ ವಾಲಾ ಚಾಲನೆ ನೀಡಿದರು.ನಂತರ ಮಾತನಾಡಿದ ಅವರು, ನೀರು ಎಷ್ಟೇ ಪ್ರಮಾಣದಲ್ಲಿ ಲಭ್ಯವಿದ್ದರೂ ಎಷ್ಟೋ ಅಗತ್ಯವೋ ಅಷ್ಟನೇ ಮಾತ್ರ ಬಳಸಿಕೊಳ್ಳಬೇಕು.

ಈ ನಿಟ್ಟಿನಲ್ಲಿ ಇಸ್ರೇಲ್  ಕೃಷಿ ಮಾದರಿಯನ್ನು ಅನುಸರಿಸಬೇಕು ಎಂದರು.ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಅಗತ್ಯ ಬೆಂಬಲ ನೀಡಬೇಕು. ಕೃಷಿಕರನ್ನು ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ  ಅವಶ್ಯವಿರುವ ಯೋಜನೆಗಳನ್ನು ಜಾರಿಗೆ ತರಬೇಕು. ಕೃಷಿ ವಿಶ್ವವಿದ್ಯಾಲಯಗಳು ಮಾಡಿರುವ ಸಂಶೋಧನೆ, ಹೊಸ ಹೊಸ ಅವಿಷ್ಕಾರಗಳನ್ನು ರೈತರು ಕೃಷಿಯಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಕೃಷಿ ಸಚಿವ ಶಿವಶಂಕರ ರೆಡ್ಡಿ ಮಾತನಾಡಿ, ಕೃಷಿ, ಸಿರಿಧಾನ್ಯ ಬೆಳೆ ಅಭಿವೃದ್ಧಿ ಕುರಿತಂತೆ ಸರ್ಕಾರ ವಿಶೇಷ ಯೋಜನೆ  ರೂಪಿಸಿದ್ದು, ಇಸ್ರೇಲ್ ಮಾದರಿ ಕೃಷಿ  ಅಳವಡಿಸಿಕೊಳ್ಳಲು ರೈತರಿಗೆ ಎಲ್ಲಾ  ಸಹಕಾರ, ಮಾರ್ಗದರ್ಶನ ನೀಡಲಾಗುವುದು, ಖಾಸಗಿ ಕೃಷಿ ವಿಶ್ವವಿದ್ಯಾಲಯಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸದ್ಯದಲ್ಲೇ ಸರ್ಕಾರ ಅಗತ್ಯ ಕಾನೂನನ್ನು ರಚಿಸಲಿದೆ ಎಂದು ತಿಳಿಸಿದರು. 

ಇದೇ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕನ್ನೂರು ಹೆಗ್ಗರಣಿ ಗ್ರಾಮದ ಪ್ರಸಾದ ರಾಮ ಹೆಗಡೆ ಅವರಿಗೆ ಅತ್ಯುತ್ತಮ ತೋಟಗಾರಿಕಾ, ಡಾ. ಎಂ. ಎಚ್. ಮರೀಗೌಡ ರಾಜ್ಯಮಟ್ಟದ ಪ್ರಶಸ್ತಿ ನೀಡಲಾಯಿತು.ಕೋಲಾರ ಜಿಲ್ಲೆ ಮದನಹಳ್ಳಿ ಗ್ರಾಮದ ಎಂ.ಎನ್. ರವಿ ಶಂಕರ್ ಅವರಿಗೆ ಕೆನರಾ ಬ್ಯಾಂಕ್ ಪ್ರಾಯೋಜಿತ ಕೆನ್ ಬ್ಯಾಂಕ್ ಅತ್ಯುತ್ತಮ ರೈತ ಪ್ರಶಸ್ತಿ ನೀಡಲಾಯಿತು. ಅದೇ ವಿಭಾಗದಲ್ಲಿ ಹಾಸನ ಜಿಲ್ಲೆಯ ಹೇಮ ಅನಂತ ಅವರಿಗೂ ಪ್ರಶಸ್ತಿ ನೀಡಿ ಗೌರವಿಸಲಾಯಿತು.

About the author

ಕನ್ನಡ ಟುಡೆ

Leave a Comment