ರಾಜ್ಯ ಸುದ್ದಿ

ಬೆಂಗಳೂರು, ಉಡುಪಿ, ಬಾಗಲಕೋಟ, ವಿಜಯಪುರದಲ್ಲಿ ಬೃಹತ್ ಜನಾಗ್ರಹ ಸಭೆ

ಬೆಂಗಳೂರು: ರಾಜ್ಯ ರಾಜಧಾನಿ ಭಾನುವಾರ ಕೇಸರಿಮಯವಾಗಿತ್ತು. ನಗರದ ಹಲವು ಕಡೆಗಳಿಂದ ಹೊರಟ ಸಂಘ ಪರಿವಾರದ ರಾರ‍ಯಲಿಗಳು ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಸಂಗಮಿಸಿದವು. ಅಯೋಧ್ಯೆಯಲ್ಲೇ  ರಾಮ ಮಂದಿರ  ನಿರ್ಮಿಸಬೇಕೆಂಬ ಜಯಘೋಷ ಅಲ್ಲಿ ಕೇಳಿಬಂತು.

ಬೃಹತ್‌ ಜನಾಗ್ರಹ ಸಭೆಯಲ್ಲಿ ಸೇರಿದ್ದ ಜನ ಸಮೂಹದ ಆಶಯಕ್ಕೆ ಅಸಂಖ್ಯ ಸಾಧು-ಸಂತರು ಬೆಂಬಲ ಸೂಚಿಸಿದರು. ಹೋರಾಟದ ಮೂಲಕ ಅಯೋಧ್ಯೆಯಲ್ಲಿ ಮಂದಿರ ಕಟ್ಟುವ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಮಂದಿರ ಕಟ್ಟುವುದಿದ್ದಲ್ಲಿ ಅದು ಅಯೋಧ್ಯೆಯ ರಾಮ ಜನ್ಮಸ್ಥಳದಲ್ಲಿ ಆಗಿಯೇ ತೀರಬೇಕು. ಸುಪ್ರೀಂಕೋರ್ಟ್‌ ಕೂಡ ಜನರ ಆಶಯಕ್ಕೆ ಸ್ಪಂದಿಸಿ ಬೇಗನೆ ತೀರ್ಪು ಪ್ರಕಟಿಸಬೇಕು. ವಿನಾಕಾರಣ ವಿಳಂಬ ನೀತಿ ಅನುಸರಿಸಿದರೆ ಯಾವುದೇ ಹೋರಾಟಕ್ಕೂ ಸಿದ್ಧ ಎಂದು ಸಭೆಯು ಸ್ಪಷ್ಟ ಸಂದೇಶ ಸಾರಿತು. ಉಡುಪಿ, ಬಾಗಲಕೋಟ, ವಿಜಯಪುರದಲ್ಲೂ ಬೃಹತ್‌  ಜನಾಗ್ರಹ ಸಭೆ ನಡೆಯಿತು.

ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಮಂದಿರ ನಿರ್ಮಿಸಲು ಕೇಂದ್ರ ಸರಕಾರದಿಂದ ಸುಗ್ರೀವಾಜ್ಞೆ ಹೊರಡಿಸುವಂತೆ ಒತ್ತಾಯಿಸಲು ಪ್ರಧಾನಿ ನರೇಂದ್ರ ಮೋದಿ ಬಳಿಗೆ ನಿಯೋಗ ಕೊಂಡೊಯ್ಯಲಾಗುವುದು ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಘೋಷಿಸಿದರು. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ರಾಷ್ಟ್ರ ಹಾಗೂ ಜನರ ಸ್ವಾಭಿಮಾನದ ಪ್ರಶ್ನೆಯಾಗಿದೆ. ಇದಕ್ಕೆ ಸ್ಪಂದಿಸಿ ಸರಕಾರ ಸುಗ್ರೀವಾಜ್ಞೆ ಹೊರಡಿಸಲು ಸಂಸತ್ತಿನ ಉಭಯ ಸದನಗಳಲ್ಲಿ ಮಂದಿರ ನಿರ್ಮಿಸುವ ಪರವಾದ ನಿರ್ಣಯ ಕೈಗೊಳ್ಳಬೇಕು. ಈ ಮಹತ್ಕಾರ್ಯವನ್ನು ತ್ವರಿವಾಗಿ ಅನುಷ್ಠಾನಕ್ಕೆ ತರಲು ಸಂತರ ನಿಯೋಗವು ಪ್ರಧಾನಿ ಬಳಿಗೆ ತೆರಳಿ ಒತ್ತಾಯಿಸಬೇಕಿದೆ,’’ ಎಂದು ಶ್ರೀಗಳು ಹೇಳಿದರು.

‘‘ದಿಲ್ಲಿಯಲ್ಲಿ ಡಿ.9ಕ್ಕೆ ಧರ್ಮ ಸಂಸತ್‌ ನಡೆಯಲಿದ್ದು, ಅಲ್ಲಿ ಮಂದಿರ ನಿರ್ಮಾಣದ ರೂಪುರೇಷೆಗಳ ಚೌಕಟ್ಟು ನೀಡಲಾಗುವುದು. ಇದೇ ಸಂದರ್ಭದಲ್ಲಿ ಸರಕಾರದಿಂದ ಸುಗ್ರೀವಾಜ್ಞೆ ಹೊರಬೀಳಲು ಒತ್ತಡ ಹೇರಬೇಕಿದೆ. ಇದಕ್ಕೂ ಜಗ್ಗದಿದ್ದಲ್ಲಿ ಸಂತರು ಉಪವಾಸ ಕೂರಲು ಕೂಡ ಹಿಂದೇಟು ಹಾಕುವುದಿಲ್ಲ. ಜನ ಕೂಡ ತ್ಯಾಗ-ಬಲಿದಾನಕ್ಕೆ ಸಿದ್ಧರಾಗಬೇಕು. ಮಂದಿರ ನಿರ್ಮಾಣಕ್ಕೆ ಮುಸ್ಲಿಂ ಹಾಗೂ ಕೈಸ್ತರೂ ಬೆಂಬಲಿಸಲಿಸಬೇಕು,’’ ಎಂದು ಕರೆ ನೀಡಿದರು.

About the author

ಕನ್ನಡ ಟುಡೆ

Leave a Comment