ರಾಜ್ಯ ಸುದ್ದಿ

ಬೆಂಗಳೂರು: ಎಸಿಬಿ ದಾಳಿಯಲ್ಲಿ ಪತ್ತೆಯಾಗಿದ್ದು 19.6 ಕೆ.ಜಿ. ಚಿನ್ನ: ಎಸಿಬಿ ಐಜಿ ಚಂದ್ರಶೇಖರ್

ಬೆಂಗಳೂರು: ಸಾರ್ವಜನಿಕರಿಂದ ಸಿಕ್ಕ ಮಾಹಿತಿ ಆಧಾರದ ಮೇಲೆ ಇಬ್ಬರು ಅಧಿಕಾರಿಗಳ ನಿವಾಸ, ಕಚೇರಿ ಮೇಲೆ ಎಸಿಬಿ ಅಧಿಕಾರಿಗಳಿಂದ ದಾಳಿ ನಡೆಸಲಾಯಿತು. ಭ್ರಷ್ಟಾಚಾರವನ್ನು ನಿಗ್ರಹ ಮಾಡಲು ಸಾರ್ವಜನಿಕರಿಂದಲೇ ಮಾಹಿತಿ ಬರಬೇಕು ಎಂದು ಎಸಿಬಿ ಐಜಿ ಚಂದ್ರಶೇಖರ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹಳಷ್ಟು ಕಡೆಗಳಿಂದ ಪ್ರಮುಖ ಮಾಹಿತಿಗಳು ಸಿಗುತ್ತಿವೆ. ಅದರ ಆಧಾರದ ಮೇಲೆ ಕಾರ್ಯಾಚರಣೆ ಮಾಡಲಾಗುತ್ತದೆ. ಎಸಿಬಿ ಸಹಾಯವಾಣಿಗೆ ಸಾರ್ವಜನಿಕರು ಕರೆ ಮಾಡಬಹುದು. ಫೇಸ್​ಬುಕ್​, ಟ್ವಿಟರ್​ ಮೂಲಕವೂ ಮಾಹಿತಿ ನೀಡಬಹುದು ಎಂದು ಹೇಳಿದರು.

ನಿನ್ನೆ ಎಸಿಬಿ ಬಲೆಗೆ ಬಿದ್ದ ಅಧಿಕಾರಿಗಳು ತಮ್ಮ ಹಣ, ಆಸ್ತಿಯ ಮೂಲದ ಬಗ್ಗೆ ಮಾಹಿತಿ ಕೊಡಬೇಕು. 3-4 ತಿಂಗಳೊಳಗೆ ಚಾರ್ಜ್​ಶೀಟ್​ ಹಾಕಲಾಗುವುದು. ಎರಡೂ ದಾಳಿ ಸಂಬಂಧ ಎಸಿಬಿಗೆ ಈವರೆಗೆ 500 ಕರೆಗಳು, 60 ರಿಂದ 70 ಇ-ಮೇಲ್​ಗಳು ಬಂದಿವೆ. ಅಧಿಕಾರಿಗಳು ಲೆಕ್ಕ ಕೊಡುವಾಗ ತಪ್ಪು ಮಾಹಿತಿ ನೀಡಿದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ಬಿಡಿಎ ಇಂಜಿನಿಯರ್ ಗೌಡಯ್ಯ ಮನೆಯಲ್ಲಿ 18 ಕೆಜಿ ಚಿನ್ನ, ಬೆಳ್ಳಿ 10 ಕೆಜಿ, 2 ಮನೆ, 8 ನಿವೇಶನ, 14 ಅಪಾರ್ಟ್​​ಮೆಂಟ್​ ಫ್ಲ್ಯಾಟ್ಸ್​, 3 ಕಾರು, 3 ದ್ವಿಚಕ್ರ ವಾಹನ, 77 ಲಕ್ಷ ನಗದು, 45 ಲಕ್ಷ ಬ್ಯಾಂಕ್​ ಠೇವಣಿಯು ಪತ್ತೆಯಾಗಿದೆ.

KIADB ಸಿಡಿಒ ಸ್ವಾಮಿ ಮನೆ ಮೇಲೆ ದಾಳಿ ನಡೆಸಿದಾಗ 8 ಮನೆ, 11 ನಿವೇಶನ, 14 ಎಕರೆ ಕೃಷಿ ಜಮೀನು, ಚಿನ್ನ 1.6 ಕೆಜಿ, ಬೆಳ್ಳಿ 7.5 ಕೆಜಿ, 3 ಕಾರು, 4 ಕೋಟಿ 57 ಲಕ್ಷ ನಗದು ಪತ್ತೆಯಾಗಿದ್ದು, ಹಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಸದ್ಯ ಪ್ರಾಥಮಿಕ ತನಿಖೆಯಲ್ಲಿ ಇದು ಗೊತ್ತಾಗಿದೆ ಎಂದು ತಿಳಿಸಿದರು. 

About the author

ಕನ್ನಡ ಟುಡೆ

Leave a Comment