ರಾಜ್ಯ ಸುದ್ದಿ

ಬೆಂಗಳೂರು: ಜೈಲಿನಲ್ಲೇ ಕನ್ನಡ ಕೋರ್ಸ್ ಕಲಿಯಲು ಮುಂದಾದ ಶಶಿಕಲಾ

ಬೆಂಗಳೂರು: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ವಿ.ಕೆ. ಶಶಿಕಲಾ ಅವರು ಕನ್ನಡದಲ್ಲಿ ಸರ್ಟಿಫಿಕೇಟ್‌ ಕೋರ್ಸ್‌ ಮಾಡಲು ಉತ್ಸುಕತೆ ತೋರಿದ್ದಾರೆ. ದೂರ ಶಿಕ್ಷಣ ಸರ್ಟಿಫಿಕೇಟ್‌ ಕೋರ್ಸ್‌ಗಳಿಗೆ ನೋಂದಣಿ ಮಾಡಲು ಜೈಲಿನಲ್ಲಿರುವ ಕೈದಿಗಳನ್ನು ಉತ್ತೇಜಿಸಲು ನಿರ್ದೇಶನಾಲಯದ ಅಧಿಕಾರಿಗಳು ಜೈಲಿಗೆ ತೆರಳಿದ್ದಾಗ ಈ ವಿಷಯ ತಿಳಿದು ಶಶಿಕಲಾ ಕೂಡ ಕೋರ್ಸ್‌ ಮಾಡಲು ಆಸಕ್ತಿ ವಹಿಸಿದರು ಎಂದು ತಿಳಿದು ಬಂದಿದೆ.
ಜೈಲು ಸೇರಿದಾಗ ಶಶಿಕಲಾ ಅವರಿಗೆ ಕನ್ನಡದ ಬಗ್ಗೆ ಅಷ್ಟೇನೂ ಗೊತ್ತಿರಲಿಲ್ಲ. ಇದೀಗ ಅವರು ಕೆಲ ಕನ್ನಡದ ಪದಗಳನ್ನು ಬಳಸುತ್ತಾರೆ. ವಾಕ್ಯ ರಚನೆ ಮಾಡುತ್ತಾರೆ. ಕನ್ನಡದಲ್ಲಿ ಸಮರ್ಥವಾಗಿ ಮಾತನಾಡುತ್ತಾರೆ ಎಂದು ಜೈಲಿನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಸಂಬಂಧ ಅಧಿಕಾರಿಗಳು ನಿರ್ದೇಶನಾಲಯದ ನಿರ್ದೇಶಕ ಪ್ರೊ.ಬಿ.ಸಿ. ಮೈಲಾರಪ್ಪ ಅವರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಶಶಿಕಲಾ ಅವರು ಕೋರ್ಸ್‌ ಮಾಡಲು ಆಸಕ್ತಿ ತೋರಿದಲ್ಲಿ ಶನಿವಾರ ನಾವೇ ಜೈಲಿಗೆ ಭೇಟಿ ನೀಡಿ ಪ್ರವೇಶ ಪಡೆಯುತ್ತೇವೆ. ಕೋರ್ಸ್‌ನ ಬಗ್ಗೆ ವಿವರಿಸುತ್ತೇವೆ. ಹಾಗೆಯೇ, ಅರ್ಜಿ ನಮೂನೆ ಮೇಲೆ ಸಹಿ ಪಡೆಯುವ ಮೂಲಕ ನೋಂದಣಿ ಪ್ರಕ್ರಿಯೆ ಮುಗಿಸುತ್ತೇವೆ” ಎಂದು ಬೆಂಗಳೂರು ವಿವಿ ದೂರ ಶಿಕ್ಷಣ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
‘ಪರಪ್ಪನ ಅಗ್ರಹಾರ ಜೈಲಿನಲ್ಲೇ ಬೆಂಗಳೂರು ವಿವಿ ದೂರಶಿಕ್ಷಣ ನಿರ್ದೇಶನಾಲಯ ತರಗತಿಗಳನ್ನು ನಡೆಸಲಿದೆ. ಜೈಲಿಗೆ ತೆರಳಲಿರುವ ಅಧ್ಯಾಪಕರೇ ಶಶಿಕಲಾ ಅವರಿಗೂ ತರಗತಿ ತೆಗೆದುಕೊಳ್ಳಲಿದ್ದಾರೆ,”ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ಕೇಂದ್ರ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ 257 ಕೈದಿಗಳು 2018-19ನೇ ಶೈಕ್ಷಣಿಕ ಸಾಲಿನಲ್ಲಿ ಸ್ನಾತಕ ಪದವಿ ಸೇರಿದಂತೆ ನಾನಾ ರೀತಿಯ ಸರ್ಟಿಫಿಕೇಟ್‌ ಕೋರ್ಸ್‌ಗಳನ್ನು ಮಾಡಲು ಆಸಕ್ತಿ ವಹಿಸಿದ್ದಾರೆ ಎಂದು ತಿಳಿದು ಬಂದಿದೆ.

About the author

ಕನ್ನಡ ಟುಡೆ

Leave a Comment