ರಾಜ್ಯ ಸುದ್ದಿ

ಬೆಂಗಳೂರು: ಮಾರಣಾಂತಿಕ ಎಚ್‌1ಎನ್‌1ಗೆ ಮತ್ತಿಬ್ಬರು ಬಲಿ

ಬೆಂಗಳೂರು: ಮಾರಣಾಂತಿಕ ಎಚ್‌1ಎನ್‌1 ಹಾವಳಿ ರಾಜ್ಯದಲ್ಲಿ ಮುಂದುವರಿದಿದ್ದು, ಸಾವಿನ ಸಂಖ್ಯೆ 12ಕ್ಕೆ ಏರಿಕೆಯಾಗಿದ್ದು, ಸೋಂಕಿತರ ಸಂಖ್ಯೆ 700 ಗಡಿ ದಾಟಿದೆ. ಮಂಗಳವಾರ ಒಂದೇ ದಿನ ರಾಜ್ಯದಲ್ಲಿ 12 ಹೊಸ ಪ್ರಕರಣ ವರದಿಯಾಗಿದ್ದು, ತುಮಕೂರಿನಲ್ಲಿ ಇಬ್ಬರು ಎಚ್‌1ಎನ್‌1ಗೆ ಮೃತರಾಗಿದ್ದಾರೆ. ಜ.1ರಿಂದ ಇವರೆಗೆ 5833 ಶಂಕಿತ ವ್ಯಕ್ತಿಗಳ ಗಂಟಲಿನ ದ್ರವ ಪರೀಕ್ಷೆ ಮಾಡಿದ್ದು, ಇದರಲ್ಲಿ 703ಮಂದಿಯಲ್ಲಿ ಎಚ್‌1ಎನ್‌1 ಸೋಂಕು ಇರುವುದು ದೃಢಪಟ್ಟಿದೆ. ಈವರೆಗೆ 12ಮಂದಿ ಎಚ್‌1ಎನ್‌1 ಜ್ವರದ ತೀವ್ರತೆಗೆ ಸಾವನ್ನಪ್ಪಿದ್ದಾರೆ. ಕಳೆದ ವರ್ಷ 16,864 ಶಂಕಿತ ವ್ಯಕ್ತಿಗಳ ಗಂಟಲಿನ ದ್ರವ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದರಲ್ಲಿ 3260 ಮಂದಿಗೆ ಎಚ್‌1ಎನ್‌1 ಸೋಂಕು ತಗಲಿರುವುದು ದೃಢಪಟ್ಟಿದ್ದು, 15ಮಂದಿ ಜ್ವರಕ್ಕೆ ಬಲಿಯಾಗಿದ್ದರು.

ರಾಜ್ಯದ ಎಲ್ಲ ಜಿಲ್ಲೆಯಲ್ಲಿ ಎಚ್‌1ಎನ್‌1 ಪ್ರಕರಣ ಪತ್ತೆಯಾಗಿದ್ದು, ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ಆಸ್ಪತ್ರೆಯಲ್ಲಿ ಮಂಗಳವಾರ 4ಹೊಸ ಪ್ರಕರಣಗಳು ದೃಢಪಟ್ಟಿವೆ. ನಗರದಲ್ಲಿ ಎಚ್‌1ಎನ್‌1 ಸೋಂಕಿತರ ಸಂಖ್ಯೆ 128ಕ್ಕೆ ತಲುಪಿದ್ದು, ಮೂವರು ಸಾವನ್ನಪ್ಪಿದ್ದಾರೆ. ತುಮಕೂರಿನಲ್ಲಿ ಕೇವಲ ಹನ್ನೊಂದು ಪ್ರಕರಣಗಳಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಇನ್ನು ಶಿವಮೊಗ್ಗ-71, ಬೆಂಗಳೂರು ನಗರ-65 (1ಸಾವು), ಚಿಕ್ಕಮಗಳೂರು-37, ದಕ್ಷಿಣ ಕನ್ನಡ-41, ಹಾಸನ-30(1ಸಾವು) ದಾವಣಗೆರೆ-30, ಧಾರವಾಡ-24, ಬೆಳಗಾವಿ-25, ಬಿಜಾಪುರ-28 ಪ್ರಕರಣ ದಾಖಲಾಗಿದೆ. ಬೆಂಗಳೂರು ಗ್ರಾಮಾಂತರ, ರಾಮನಗರ, ಬಳ್ಳಾರಿಯಲ್ಲಿ ತಲಾ ಒಬ್ಬರು ಎಚ್‌1ಎನ್‌1ನಿಂದ ಮೃತಪಟ್ಟಿದ್ದಾರೆ .

About the author

ಕನ್ನಡ ಟುಡೆ

Leave a Comment