ರಾಜ್ಯ ಸುದ್ದಿ

ಬೆಂಗಳೂರು; ಸೈಬರ್ ಕ್ರೈಂ ಸಂಶೋಧನೆ, ತರಬೇತಿ ಕೇಂದ್ರ ಉದ್ಘಾಟನೆ

ಬೆಂಗಳೂರು: ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಬೆಂಗಳೂರಿನ ಸಿಐಡಿ ಕೇಂದ್ರದಲ್ಲಿ ಸೈಬರ್ ಅಪರಾಧ ತನಿಖೆ ತರಬೇತಿ ಮತ್ತು ಸಂಶೋಧನೆ ಕೇಂದ್ರವನ್ನು(ಸಿಸಿಐಟಿಆರ್) ಉದ್ಘಾಟಿಸಿದರು. ಇದು ರಾಜ್ಯ ಸರ್ಕಾರ ಮತ್ತು ಇನ್ಫೋಸಿಸ್ ಪ್ರತಿಷ್ಠಾನದ ಸಹಯೋಗದಲ್ಲಿ ಕೈಗೊಂಡಿರುವ ಯೋಜನೆಯಾಗಿದ್ದು 5 ವರ್ಷಗಳಿಗೆ ಸ್ಥಾಪನಾ ವೆಚ್ಚವಾಗಿ 22 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ದೇಶೀ ನಿರ್ಮಿತ ಸೌಲಭ್ಯಗಳನ್ನು ಈ ಕೇಂದ್ರ ಹೊಂದಿರುತ್ತದೆ. ಸೈಬರ್ ಭದ್ರತೆ ವಿದ್ಯಾರ್ಥಿಗಳಿಗೆ ಕೇಂದ್ರದಲ್ಲಿ ಇಂಟರ್ನ್ ಶಿಪ್ ಮತ್ತು ವಿದೇಶಗಳೊಂದಿಗೆ ಜ್ಞಾನವನ್ನು ವಿನಿಮಯ ಮಾಡಿಕೊಳ್ಳಲು ತಜ್ಞರನ್ನು ಕಳುಹಿಸಲು ಇಚ್ಛಿಸುತ್ತೇವೆ ಎಂದು ಇನ್ಫೋಸಿಸ್ ಅಧ್ಯಕ್ಷೆ ಸುಧಾ ಮೂರ್ತಿ ಹೇಳಿದರು. ಕೇಂದ್ರ ಒಂದೇ ಸಲಕ್ಕೆ ಸುಮಾರು 100 ಜನರಿಗೆ ತರಬೇತಿ ಒದಗಿಸಲಿದೆ. ಸೈಬರ್ ಕ್ರೈಂ ತಡೆಯುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ನಾವು ಈಗಾಗಲೇ ಎಲ್ಲಾ ಜಿಲ್ಲೆಗಳಲ್ಲಿ ಪೊಲೀಸ್ ಠಾಣೆಗಳಲ್ಲಿ ಸೈಬರ್, ಆರ್ಥಿಕ ಅಪರಾಧ ಮತ್ತು ಮಾದಕವಸ್ತು ಕೇಂದ್ರಗಳನ್ನು ಈಗಾಗಲೇ ಸ್ಥಾಪಿಸಿದ್ದೇವೆ. ಮುಂದಿನ ದಿನಗಳಲ್ಲಿ ಸೈಬರ್ ಕ್ರೈಂ ಬಗ್ಗೆ ಇಂತಹ ಅನೇಕ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದರು. ಸೈಬರ್ ಕ್ರೈಂ ಕೇಸುಗಳ ತನಿಖೆ ನಡೆಸಲು ಪೊಲೀಸ್ ಸಿಬ್ಬಂದಿಗೆ ತರಬೇತಿ ನೀಡಲು ಸಿಐಡಿ ಕೇಂದ್ರ ನೋಡಲ್ ಏಜೆನ್ಸಿಯಾಗಿದೆ. 2007ರಿಂದ ಅಂಕಿಅಂಶ ಭದ್ರತೆ ಮಂಡಳಿಯ ತಜ್ಞರು ಪೊಲೀಸ್ ಸಿಬ್ಬಂದಿಗೆ ತರಬೇತಿ ನೀಡುತ್ತಿದ್ದಾರೆ. ಇನ್ನು ಅದನ್ನು ದೊಡ್ಡ ಪ್ರಮಾಣದಲ್ಲಿ ಕೈಗೊಳ್ಳಲಾಗುವುದು ಎಂದು ಸಿಐಡಿ ಡಿಜಿಪಿ ಪ್ರವೀಣ್ ಸೂದ್ ಹೇಳಿದರು.

About the author

ಕನ್ನಡ ಟುಡೆ

Leave a Comment