ರಾಜ್ಯ ಸುದ್ದಿ

ಬೆಂಗಳೂರು: 30 ದಿನಗಳಲ್ಲಿ ಸಿರ್ಸಿ ಸರ್ಕಲ್ ಮೇಲ್ಸೇತುವೆ ಸಂಚಾರಕ್ಕೆ ಸಿದ್ಧ

ಬೆಂಗಳೂರು: ದುರಸ್ತಿ ಕಾರ್ಯದ ನಿಮಿತ್ತ ಕಳೆದೊಂದು ವಾರದಿಂದ ಮುಚ್ಚಲ್ಪಟ್ಟಿರುವ ಸಿರ್ಸಿ ಸರ್ಕಲ್ ಮೇಲ್ಸೇತುವೆ  ಇನ್ನೊಂದು ತಿಂಗಳಲ್ಲಿ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಉಪ ಮುಖ್ಯಮಂತ್ರಿ ಜಿ ಪರಮೇಶ್ವರ ಹೇಳಿದ್ದಾರೆ. ಮಂಗಳವಾರ ಸಿರ್ಸಿ ಸರ್ಕಲ್ ಮೇಲ್ಸೇತುವೆ ಕಾಮಕಾರಿ ಪರಿಶೀಲನೆ ನಡೆಸಿದ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೇಲ್ಸೇತುವೆ ದುರಸ್ತಿ ಕಾರ್ಯ ಭರದಿಂದ ಸಾಗಿದೆ. ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಮೇಲ್ಸೇತುವೆ ಮೇಲಿನ ರಸ್ತೆಗೆ ಹೊದಿಕೆ ಹೊದಿಸಲಾಗುತ್ತಿದೆ. ಇನ್ನೊಂದು ತಿಂಗಳಲ್ಲಿ ಮೇಲ್ಸೇತುವೆ ಪ್ರಯಾಣಿಕರಿಗೆ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಹೇಳಿದರು. ಆಸ್ಫಾಲ್ಟಿಕೊ ಸೀಲ್ ಎಂಬ ಹೊಸ ತಂತ್ರಜ್ಞಾನವನ್ನು ಮೇಲ್ಸೇತುವೆ ದುರಸ್ತಿ ಕಾರ್ಯಕ್ಕೆ ಅಳವಡಿಸಿಕೊಳ್ಳಲಾಗಿದೆ. ಮಳೆ ಮತ್ತು ಇತರೆ ಕಾರಣಗಳಿಂದಾಗಿ ಗುಂಡಿ ಬೀಳುವ ಸಮಸ್ಯೆಗಳನ್ನು ಇದು ತಡೆಯುತ್ತದೆ. ನಗರದ ಪ್ರಮುಖ ಮೇಲ್ಸೇತುವೆ ಪ್ರಮುಖ ಹೆದ್ದಾರಿಗಳಲ್ಲಿ ಈ ತಂತ್ರಜ್ಞಾನ ಬಳಕೆ ಮಾಡಲಾಗುತ್ತಿದ್ದು, ಇದೀಗ ಸಿರ್ಸಿ ವೃತ್ತದ ಮೇಲ್ಸೇತುವೆಯಲ್ಲಿ ಈ ತಂತ್ರಜ್ಞಾನದ ಮೂಲಕ ದುರಸ್ತಿ ಕಾರ್ಯ ಮಾಡಲಾಗುತ್ತಿದೆ. ಪ್ರಯಾಣಿಕರಿಗೆ ಗುಣಮಟ್ಟದ ರಸ್ತೆ ಒದಗಿಸುವುದು ನಮ್ಮ ಗುರಿಯಾಗಿದೆ. ಖಂಡಿತಾ ಇನ್ನೊಂದು ತಿಂಗಳಲ್ಲಿ ಸಾರ್ವಜನಿಕರಿಗೆ ಈ ರಸ್ತೆ ಸಂಚಾರಕ್ಕೆ ಮುಕ್ತವಾಗಲಿದೆ ಎಂಬ ವಿಶ್ವಾಸವಿದೆ ಎಂದು ಪರಮೇಶ್ವರ್ ಹೇಳಿದ್ದಾರೆ.

About the author

ಕನ್ನಡ ಟುಡೆ

Leave a Comment