ರಾಜ್ಯ ಸುದ್ದಿ

ಬೆಳಗಾವಿ: ಭುಗಿಲೆದ್ದ ಕಬ್ಬಿನ ಕಾಳಗ

ಬೆಳಗಾವಿ: ವಿಧಾನಮಂಡಲ ಅಧಿವೇಶನಕ್ಕೆ ಸಜ್ಜಾಗುತ್ತಿರುವ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕಬ್ಬಿನ ಕಾಳಗದ ಕಿಡಿ ಸ್ಪೋಟಗೊಂಡಿದೆ. ಕಬ್ಬಿನ ಬಾಕಿ ಬಿಲ್ ಪಾವತಿಗೆ ಆಗ್ರಹಿಸಿ ಅಹೋರಾತ್ರಿ ಧರಣಿ ನಡೆಸುತ್ತಿದ್ದ ರೈತರು ಸೋಮವಾರ ನಿಗದಿಯಾಗಿದ್ದ ಸಿಎಂ ಬೆಳಗಾವಿ ಭೇಟಿ ದಿಢೀರ್ ರದ್ದಾಗಿದ್ದನ್ನು ಖಂಡಿಸಿ ರಸ್ತೆಗಿಳಿದಿದ್ದರಿಂದಾಗಿ ಇಡೀ ನಗರ ಉದ್ವಿಗ್ನಗೊಂಡಿತ್ತು. ಸುವರ್ಣಸೌಧದ ಗೇಟಿನ ಕೀಲಿ ಮುರಿದ ರೈತರು ಆವರಣದೊಳಗೆ ಕಬ್ಬಿನ ಲಾರಿ ನುಗ್ಗಿಸಿದ್ದರಿಂದಾಗಿ ಪೊಲೀಸರ ಜತೆ ಘರ್ಷಣೆಯೂ ಏರ್ಪಟ್ಟಿತ್ತು. ಸಂಜೆವರೆಗೂ ರೈತರ ಪ್ರತಿಭಟನೆಗೆ ಮಣಿಯುವುದಿಲ್ಲ ಎಂದಿದ್ದ ಸಿಎಂ ಪ್ರತಿಭಟನೆ ಉಗ್ವ ಸ್ವರೂಪಕ್ಕೆ ತಿರುಗಿದ ಬೆನ್ನಲ್ಲೇ ಮಂಗಳವಾರ ಬೆಂಗಳೂರಿನಲ್ಲೇ ಬೆಳಗಾವಿ ರೈತರ ಭೇಟಿಯಾಗುವ ನಿರ್ಧಾರ ಪ್ರಕಟಿಸಿದ್ದರಿಂದ ಪ್ರತಿಭಟನಾಕಾರರು ಹೋರಾಟ ಕೈಬಿಟ್ಟಿದ್ದಾರೆ. ಡಿಸಿ ಕಚೇರಿ ಎದುರು ಭಾನುವಾರ ಬೆಳಿಗ್ಗೆ ಧರಣಿ ಆರಂಭಿಸಿದ್ದ ರೈತರು ಸಿಎಂ ಭೇಟಿ ರದ್ದಾದ ಬಳಿಕ ಕೆರಳಿದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಕಬ್ಬು ತುಂಬಿದ ಐದು ಲಾರಿಗಳನ್ನು ತಡೆದು ಸುವರ್ಣ ಸೌಧಕ್ಕೆ ನುಗ್ಗಿಸಿದರು.

ಲಾರಿಯಲ್ಲಿದ್ದ ಕಬ್ಬು ಚೆಲ್ಲಿದ ರೈತರು, ಸಿಎಂ ರಾಜಕೀಯ ಕಾರಣಕ್ಕೆ ಜವಾಬ್ದಾರಿಯಿಂದ ನುಣುಚಿಕೊಂಡು ಕಾರ್ಖಾನೆ ಮಾಲೀಕರ ಕೈಗೊಂಬೆಯಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸೌಧದ ಎದುರು ಹೈಡ್ರಾಮಾ: ರೈತರು ಕಬ್ಬು ತುಂಬಿದ ಲಾರಿ- ಟ್ರ್ಯಾಕ್ಟರ್​ಗಳನ್ನು ಸುವರ್ಣಸೌಧದೊಳಗೆ ನುಗ್ಗಿಸುವುದನ್ನು ತಡೆಯಲು ಪೊಲೀಸರು ಗೇಟಿಗೆ ಕೀಲಿ ಹಾಕಿದ್ದರಿಂದ, ಪೊಲೀಸರು- ರೈತರ ನಡುವೆ ಮಾತಿನ ಚಕಮಕಿ ನಡೆಯಿತು. ರೈತ ಮುಖಂಡ ಅಶೋಕ ಯಮಕನಮರಡಿ ಪೊಲೀಸ್ ಅಧಿಕಾರಿಗಳ ಕಾಲಿಗೆ ಬಿದ್ದು ಲಾರಿ ನುಗ್ಗಿಸಲು ಅವಕಾಶ ಕೋರಿದರೂ, ಗೇಟ್ ತೆರೆಯದ್ದರಿಂದ ಕಲ್ಲು ಎತ್ತಿಕೊಂಡು ಪೇದೆಯನ್ನು ಬೆನ್ನತ್ತಿದರು. ಇದರಿಂದಾಗಿ ಪರಿಸ್ಥಿತಿ ಉದ್ವಿಗ್ನಗೊಂಡಿತು. ಸ್ಥಳಕ್ಕೆ ಆಗಮಿಸಿದ ಪೊಲೀಸ್ ಆಯುಕ್ತ ಡಾ.ಡಿ.ಸಿ. ರಾಜಪ್ಪ ಆದೇಶದಂತೆ ಉಪ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಹಾಗೂ ಸಿಬ್ಬಂದಿ ಪ್ರತಿಭಟನಾಕಾರರನ್ನು ಬಂಧಿಸಿ, ಹಿರೇಬಾಗೇವಾಡಿ ಠಾಣೆಗೆ ಕರೆದೊಯ್ದರು.

ನಾಲ್ಕು ಜನ ಬಂದು ಸುವರ್ಣಸೌಧಕ್ಕೆ ನುಗ್ಗುತ್ತಾರೆ ಎಂದರೆ ನೀವೇನು ಕೆಲಸ ಮಾಡುತ್ತೀದ್ದೀರಾ ಎಂದು ಭದ್ರತಾ ಸಿಬ್ಬಂದಿ ಹಾಗೂ ಅಧಿಕಾರಿಗಳ ವಿರುದ್ಧ ಕಮಿಷನರ್ ಡಿ.ಸಿ.ರಾಜಪ್ಪ ಹರಿಹಾಯ್ದರು.

ಆಸ್ಪತ್ರೆಗೆ ರೈತ ಮುಖಂಡ: ಸುವರ್ಣ ಸೌಧದ ಗೇಟಿನಲ್ಲಿ ನಡೆಯುತ್ತಿದ್ದ ಪ್ರತಿಭಟನೆ ನಿಯಂತ್ರಿಸಲು ಹೋರಾಟಗಾರರನ್ನು ಬಂಧಿಸುವ ವೇಳೆ ಪೊಲೀಸ್ ಅಧಿಕಾರಿಗಳು ರೈತ ಮುಖಂಡ ಅಶೋಕ ಯಮಕನಮರಡಿ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ಗಾಯಾಳುವನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು.

ಖಾನಾಪುರ ಬಂದ್​ಗೆ ಕರೆ: ರೈತ ಅಶೋಕ ಯಮಕನಮರಡಿ ಅವರ ಮೇಲೆ ಪೊಲೀಸರ ಹಲ್ಲೆ ಮತ್ತು ಸಿಎಂ ಕುಮಾರಸ್ವಾಮಿ ಅವರಿಂದ ತೋಲಗಿ ಗ್ರಾಮದ ರೈತ ಮಹಿಳೆ ಜಯಶ್ರೀ ಗುರಣ್ಣವರ ಅವರ ಅವಹೇಳನ ಖಂಡಿಸಿ ಸೋಮವಾರ ಖಾನಾಪುರ ತಾಲೂಕು ಬಂದ್​ಗೆ ಕರೆ ನೀಡಲಾಗಿದೆ ಎಂದು ಕೃಷಿಕ ಸಮಾಜದ ತಾಲೂಕು ಘಟಕದ ಅಧ್ಯಕ್ಷ ಗುರುಲಿಂಗಯ್ಯ ಪೂಜಾರ ತಿಳಿಸಿದ್ದಾರೆ.

About the author

ಕನ್ನಡ ಟುಡೆ

Leave a Comment