ರಾಜ್ಯ ಸುದ್ದಿ

ಬೆಳಗಾವಿ: ರಾಣಿ ಚೆನ್ನಮ್ಮ ವಿವಿಯಲ್ಲಿ ಜಾರಕಿಹೊಳಿ ಬೆಂಬಲಿಗರ ದಾದಾಗಿರಿ

ಬೆಳಗಾವಿ: ವಿಶ್ವ ವಿದ್ಯಾನಿಲಯದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಶಾಸಕ ಹಾಗೂ ಸಂಸದರನ್ನು  ಆಹ್ವಾನಿಸಿಲ್ಲ ಎಂದು ಆರೋಪಿಸಿ ಸತೀಶ ಜಾರಕಿಹೊಳಿ ಬೆಂಬಲಿಗರು ಎನ್ನಲಾದ ಕಾಂಗ್ರೆಸ್‌ ಕಾರ್ಯಕರ್ತರು ಸೋಮವಾರ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯಕ್ಕೆ ನುಗ್ಗಿ ದಾಂಧಲೆ ನಡೆಸಿದ್ದಲ್ಲದೇ, ಕುಲಪತಿ ಹಾಗೂ ಕುಲಸಚಿವರನ್ನು ಎಳೆದಾಡಿ ಹಲ್ಲೆಗೆ ಯತ್ನಿಸಿದ್ದಾರೆ.
ವಿಶ್ವವಿದ್ಯಾಲಯದ ಕುವೆಂಪು ಸಭಾಂಗಣದಲ್ಲಿ ಸೋಮವಾರ ಬೆಳಗ್ಗೆ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಕುಲಪತಿ ಶಿವಾನಂದ ಹೊಸಮನಿ, ಕುಲಸಚಿವ ಸಿದ್ದು ಅಲಗೂರ, ಹಣಕಾಸು ಅಧಿಕಾರಿ ಪರುಶರಾಮ ದುಡಗುಂಟಿ ಸೇರಿದಂತೆ ಹಲವರಿದ್ದರು. ಈ ವೇಳೆ 50ಕ್ಕೂ ಹೆಚ್ಚು ಕಾರ್ಯಕರ್ತರು ನೇರವಾಗಿ ಸಭಾಂಗಣಕ್ಕೆ ನುಗ್ಗಿದ್ದಾರೆ. ವಿವಿ ವಿರುದ್ಧ ಘೋಷಣೆ ಕೂಗುತ್ತ ಒಳ ಧಾವಿಸಿ ಕುಲಪತಿ ಅವರೊಂದಿಗೆ ವಾಗ್ವಾದ ನಡೆಸಿ ಅಂಗಿ ಹಿಡಿದು ಎಳೆದಾಡಿ, ಹಲ್ಲೆಗೆ ಯತ್ನಿಸಿದ್ದಾರೆ. ಕುಲಪತಿ ಮೇಲೆ ಹಲ್ಲೆ ಬಿಡಿಸಲು ಹೋದ ವಿದ್ಯಾರ್ಥಿಗಳ ಮೇಲೂ ಕಾಂಗ್ರೆಸ್‌ ಕಾರ್ಯಕರ್ತರು ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಜತೆಗೆ ಕಿಟಕಿ ಗಾಜು ಪುಡಿ ಪುಡಿ ಮಾಡಿದ್ದಾರೆ. ಟೇಬಲ್‌, ಕುರ್ಚಿಗಳನ್ನು ಮುರಿದಿದ್ದಾರೆ. ಮೊಬೈಲಿನಲ್ಲಿ ದೃಶ್ಯ ಸೆರೆಹಿಡಿಯುತ್ತಿದ್ದ ವಿದ್ಯಾರ್ಥಿಗಳನ್ನು  ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಈ ವೇಳೆ ವಿಸಿ ಶಿವಾನಂದ ಹೊಸಮನಿ ತಮ್ಮ ಕ್ಯಾಬಿನ್ ಗೆ ತೆರಳಿ ಬಾಗಿಲು ಬಂದ್ ಮಾಡಿ ಮೊಬೈಲ್ ಸ್ವಿಚ್ ಮಾಡಿದ್ದಾರೆ, ವಿಷಯ ತಿಳಿದು  ಡಿಸಿಪಿ ಸೀಮಾ ಲಾಟ್ಕರ್ ಸ್ಥಳಕ್ಕೆ ಆಗಮಸಿದ್ದಾರೆ, ಅಷ್ಟರಲ್ಲಾಗಲೇ ಗಲಭೆಕೋರರು ಅಲ್ಲಿಂದ ಕಾಲ್ಕಿತ್ತಿದ್ದರು. ಸೆ.27ರಂದು ವಿವಿ ಸಮೀಪದ ಲಘು ವಾಹನ ಕೆಳಸೇತುವೆ ಕಾಮಗಾರಿ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆಗ  ಕಾಂಗ್ರೆಸ್ ಸಂಸದ ಪ್ರಕಾಶ ಹುಕ್ಕೇರಿ ಹಾಗೂ ಶಾಸಕ ಸತೀಶ ಜಾರಕಿಹೊಳಿ ಅವರನ್ನು ಆಹ್ವಾನಿಸಿರಲಿಲ್ಲ. ಇಗೇ ಕಾರಣಕ್ಕೆ ದಾಂಧಲೆ ನಡೆಸಲಾಗಿದೆ ಎಂದು ಬೆಳಗಾವಿ ಪೊಲೀಸ್ ಆಯುಕ್ತ ಡಿಸಿ ರಾಜಪ್ಪ ಹೇಳಿದ್ದಾರೆ. ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂದು ಹರಿಹಾಯ್ದಿದ್ದಾರೆ. ಗಣ್ಯರನ್ನು ಆಹ್ವಾನಿಸುವ ಜವಾಬ್ದಾರಿ ರಸ್ತೆ ಪ್ರಾಧಿಕಾರಕ್ಕೆ ಬಿಟ್ಟಿದ್ದು. ಆ ಕಾರ್ಯಕ್ರಮಕ್ಕೂ ಹಾಗೂ ವಿವಿಗೂ ಸಂಬಂಧವಿಲ್ಲ, ಈ ಸಂಬಂಧ ಉಪ ಕುಲಪತಿ ದೂರು ದಾಖಲಿಸಿದರೇ ನಾವು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಆಯುಕ್ತರು ಹೇಳಿದ್ದಾರೆ,. ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಲು ಸ್ಥಳೀಯ ಕಾಂಗ್ರೆಸ್ ನಾಯಕರು ನಿರಾಕರಿಸಿದ್ದಾರೆ.
ಇನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಸಂಸದ ಸುರೇಶ್ ಅಂಗಡಿ, ಪ್ರಕರಣದಲ್ಲಿ ಭಾಗಿಯಾಗಿದವರನ್ನು ಬಂಧಿಸಲು ವಿಫಲವಾದರೇ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ನಿವಾಸದ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ, ರಾಷ್ಟ್ರೀಯ ಹೆದ್ದಾರಿಯಲ್ಲಿ ಅಂಡರ್ ಪಾಸ್ ಗೆ ಶಂಕು ಸ್ಥಾಪನೆಗೆ ಆಹ್ವಾನಿಸಲು ಸಂಸದ ಪ್ರಕಾಶ್ ಹುಕ್ಕೇರಿ ಹಾಗೂ ಶಾಸಕ ಸತೀಶ್ ಜಾರಕಿ ಹೊಳಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದೆ,  ಆದರೆ ಇಬ್ಬರು ನನ್ನ ಕರೆಗೆ ಸ್ಪಂದಿಸಲಿಲ್ಲ, ನಾನು ಕರೆ ಮಾಡಿರುವ ಕಾಲ್  ರೆಕಾರ್ಡ್ ನನ್ನ ಬಳಿಯಿದೆ ಎಂದು ಹೇಳಿದ್ದಾರೆ. ಸ್ಥಳೀಯ ನಾಯಕರನ್ನು ನಿರ್ಲಕ್ಷ್ಯ ಮಾಡುವ ಯಾವುದೇ ಉದ್ದೇಶವಿಲ್ಲ, ರಾಜ್ಯ ಸರ್ಕಾರ ಜನರಿಗೆ ರಕ್ಷಣೆ ನೀಡಲು ವಿಫಲವಾಗಿದೆ, ದಕ್ಷ ಉಪ ಕುಲಪತಿಗಳ ಮೇಲೆ ದಾಳಿ ನಡೆದಿರುವುದು ದುರಾದೃಷ್ಟಕರ ಸಂಗತಿ ಎಂದು ಸುರೇಶ್ ಅಂಗಡಿ ಬೇಸರ ವ್ಯಕ್ತ ಪಡಿಸಿದ್ದಾರೆ.

About the author

ಕನ್ನಡ ಟುಡೆ

Leave a Comment