ದೇಶ ವಿದೇಶ

ಬೆಳಗ್ಗೆ ಫುಟ್​ಪಾತ್ ವ್ಯಾಪಾರಿ, ರಾತ್ರಿ ಮನೆಗಳ್ಳ!

ಬೆಂಗಳೂರು: ಕೆ.ಆರ್. ಮಾರುಕಟ್ಟೆಯ ಫುಟ್​ಪಾತ್​ನಲ್ಲಿ ಬೆಳಗಿನ ವೇಳೆ ಮೀನು ಮಾರಾಟ ಮಾಡುತ್ತಿದ್ದು, ರಾತ್ರಿ ಕನ್ನ ಕಳವು ಮಾಡುತ್ತಿದ್ದವನನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಇರ್ಫಾನ್ ಪಾಷಾ ಅಲಿಯಾಸ್ ಕಾಲು (26) ಬಂಧಿತ. ಈತನಿಂದ 30 ಲಕ್ಷ ರೂ. ಮೌಲ್ಯದ 1 ಕೆಜಿ ಚಿನ್ನಾಭರಣ ಮತ್ತು ಅರ್ಧ ಕೆಜಿ ಬೆಳ್ಳಿ ವಸ್ತುಗಳು ಹಾಗೂ ಮೊಬೈಲ್​ಫೋನ್​ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬ್ಯಾಟರಾಯನಪುರ ವ್ಯಾಪ್ತಿಯ 10 ಮನೆ ಕಳವು, 1 ಹಗಲು ಕನ್ನ ಕಳವು, 1 ರಾತ್ರಿ ಕನ್ನ ಕಳವು ಹಾಗೂ 1 ಸರಗಳ್ಳತನ ಹಾಗೂ ರಾಜರಾಜೇಶ್ವರಿ ನಗರ, ಚಂದ್ರಲೇಔಟ್, ಚಾಮರಾಜಪೇಟೆ, ಜಗಜೀವನ್​ರಾಮ್ಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಮನೆಗಳ್ಳತನ ಹಾಗೂ ಸುಲಿಗೆ ಸೇರಿ 17 ಪ್ರಕರಣಗಳು ಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಬನ್ನೇರುಘಟ್ಟ ರಸ್ತೆ ಕೋಳಿ ಫಾರಂ ಗೇಟ್ ಬಿಲ್ವಾರದಹಳ್ಳಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಇರ್ಫಾನ್, ಬೆಳಗ್ಗೆ ವೇಳೆ ಕೆ.ಆರ್. ಮಾರುಕಟ್ಟೆಯಲ್ಲಿ ಮೀನು ವ್ಯಾಪಾರ ಮಾಡುತ್ತಿದ್ದ. ಬಿಡುವಿದ್ದಾಗ ಮನೆಗಳ್ಳತನ, ಸರಗಳ್ಳತನ ಹಾಗೂ ರಾತ್ರಿ ವೇಳೆ ಕನ್ನ ಕಳವು ಮಾಡುತ್ತಿದ್ದ. ರಾಮಮೂರ್ತಿನಗರ, ಕೆಂಗೇರಿ, ಕೆ.ಜಿ ನಗರ, ಬೊಮ್ಮನಹಳ್ಳಿ ಸೇರಿದಂತೆ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ನಡೆದ ಅಪರಾಧ ಪ್ರಕರಣಗಳಲ್ಲಿ ಬಂಧಿತನಾಗಿ ಜೈಲಿಗೆ ಹೋಗಿ ಬಂದಿದ್ದ. ಈತನ ನಡವಳಿಕೆಯಿಂದ ಬೇಸತ್ತು ಪತ್ನಿ ಕೆಲ ವರ್ಷಗಳ ಹಿಂದೆಯೇ ಈತನನ್ನು ತೊರೆದಿದ್ದಳು ಎಂದು ಪೊಲೀಸರು ಹೇಳಿದ್ದಾರೆ.

ಕೈದಿಗಳಿಗೆ ಮಾದಕವಸ್ತು ಪೂರೈಸುತ್ತಿದ್ದವರ ಸೆರೆ

ಬೆಂಗಳೂರು: ಕಾರಾಗೃಹದಲ್ಲಿರುವ ಕೈದಿಗಳಿಗೆ ಮಾದಕವಸ್ತು ಸರಬರಾಜು ಮಾಡುತ್ತಿದ್ದ ವ್ಯವಸ್ಥಿತ ಜಾಲವನ್ನು ಪತ್ತೆ ಮಾಡಿರುವ ಸಿಸಿಬಿ ಪೊಲೀಸರು ನಾಲ್ವರು ಬಾಲಕರು ಸೇರಿ ಏಳು ಮಂದಿಯನ್ನು ಬಂಧಿಸಿದ್ದಾರೆ.

ಕಾಮಾಕ್ಷಿಪಾಳ್ಯದ ದಿಲೀಪ್ (24), ಮಾಗಡಿ ರಸ್ತೆಯ ಸತೀಶ್ (22) ಮತ್ತು ಮಣಿಕಂಠ (20) ಬಂಧಿತರು. ಉಳಿದ ನಾಲ್ವರು ಬಾಲಕರಾಗಿದ್ದು, ಕಾನೂನು ಸಂಘರ್ಷಕ್ಕೆ ಒಳಗಾದವರು. ಇವರನ್ನು ಬಾಲಕರ ವೀಕ್ಷಣಾಲಯಕ್ಕೆ ಕಳುಹಿಸಲಾಗಿದೆ. ಸತೀಶ್ ಮತ್ತು ಮಣಿಕಂಠ ರೌಡಿಶೀಟರ್​ಗಳಾಗಿದ್ದು, ಕೊಲೆ ಯತ್ನ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಇವರಿಂದ 400 ಗ್ರಾಂ ಗಾಂಜಾ ಪ್ಯಾಕೆಟ್, ಮತ್ತು ಬರಿಸುವ ಮಾತ್ರೆಗಳು ಮತ್ತು ಇಂಜೆಕ್ಷನ್ ಜತೆಗೆ ಸಿರಿಂಜ್​ಗಳು, 2 ದ್ವಿಚಕ್ರ ವಾಹನಗಳು ಮತ್ತು 7 ಮೊಬೈಲ್​ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೈಲಲ್ಲಿರುವ ಕೈದಿಗಳನ್ನು ಭೇಟಿ ಮಾಡುವ ಮತ್ತು ಅವರಿಗೆ ಊಟ ಹಾಗೂ ಔಷಧ ಕೊಡುವ ನೆಪದಲ್ಲಿ ಎಂಟ್ರಿ ಹಾಕುತ್ತಿದ್ದರು. ಗಾಂಜಾ ವಾಸನೆ ಪತ್ತೆಯಾಗದಿರಲಿ ಎಂದು ಸೊಪ್ಪನ್ನು ಬಿರಿಯಾನಿ, ಕಬಾಬ್​ಗಳಲ್ಲಿ ಬಚ್ಚಿಡುತ್ತಿದ್ದರು. ಯಾವ್ಯಾವುದೋ ಕಾಯಿಲೆಗಳ ಹೆಸರು ಹೇಳಿ, ಔಷಧ ಕೊಡುವ ನೆಪದಲ್ಲಿ ಮತ್ತು ಬರಿಸುವ ಮಾತ್ರೆಗಳು, ಇಂಜಕ್ಷನ್ ವಯಲ್​ಗಳು ಹಾಗೂ ಮಾದಕದ್ರವ್ಯ ತುಂಬಿದ ಸಿರಿಂಜ್​ಗಳನ್ನು ಕೊಂಡೊಯ್ಯುತ್ತಿದ್ದರು ಎಂದು ವಿವರಿಸಿದ್ದಾರೆ.

About the author

ಕನ್ನಡ ಟುಡೆ

Leave a Comment