ರಾಜ್ಯ ಸುದ್ದಿ

ಬೆಳೆ ಸಾಗಣೆಗೆ ಟ್ಯಾಕ್ಸಿ ಮಾದರಿಯಲ್ಲಿ ರೈತರಿಗೆ ಟ್ರ್ಯಾಕ್ಟರ್‌ ಸೇವೆ: ಬಂಡೆಪ್ಪ ಕಾಶೆಂಪುರ

ಬೆಂಗಳೂರು: ರೈತರು ಬೆಳೆದ ಬೆಳೆಯನ್ನು ಹೊಲದಿಂದ ಮಾರುಕಟ್ಟೆಗೆ ಕೊಂಡೊಯ್ಯಲು ಓಲಾ ಕ್ಯಾಬ್‌ ಮಾದರಿಯ ಟ್ರ್ಯಾಕ್ಟರ್‌ ವ್ಯವಸ್ಥೆ ಮಾಡಲಾಗುವುದು ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ ಭರವಸೆ ನೀಡಿದ್ದಾರೆ. ವಿಕಾಸಸೌಧದಲ್ಲಿ ಸೋಮವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,”ಈ ಉದ್ದೇಶಕ್ಕೆ ಆ್ಯಪ್‌ ಅಭಿವೃದ್ಧಿ ಪಡಿಸಲಾಗುವುದು ಗೋಡೌನ್‌ಗಳಲ್ಲಿ ಟ್ರ್ಯಾಕ್ಟರ್‌ ಲಭ್ಯವಿರುತ್ತದೆ. ಇಂತಹ ಗೋಡೌನ್‌ ವ್ಯಾಪ್ತಿಯ ರೈತರು ತಾವು ಬೆಳೆದ ಬೆಳೆಯನ್ನು ಸಾಗಿಸಲು ಟ್ರ್ಯಾಕ್ಟರ್‌ ಬುಕ್‌ ಮಾಡಿಕೊಳ್ಳಬಹುದು” ಎಂದು ಹೇಳಿದರು. ಈ ಬಾರಿ ಬೆಂಬಲ ಬೆಲೆ ಘೋಷಿಸಲು ಕೇಂದ್ರ ಸರಕಾರದ ಆದೇಶಕ್ಕಾಗಿ ಕಾಯುವುದಿಲ್ಲ. ಏಪ್ರಿಲ್‌ ವೇಳೆಗೆ ರಾಜ್ಯವೇ ಬೆಂಬಲ ಬೆಲೆ ನಿಗದಿ ಮಾಡಲಿದೆ” ಎಂದು ಸಚಿವರು ಹೇಳಿದರು.

ಸಾಲ ಮನ್ನಾ ಆತಂಕ ಬೇಡ ರೈತರ ಸಾಲ ಮನ್ನಾ ಈ ವಿಚಾರದಲ್ಲಿ ಆತಂಕ ಬೇಡ. ಹಸಿರು ಪಟ್ಟಿಗೆ ಸೇರ್ಪಡೆಯಾಗಿರುವ ಅರ್ಹ ರೈತರೆಲ್ಲರಿಗೂ ಇದರ ಲಾಭ ದೊರಕಲಿದೆ. ಜೂನ್‌ ಅಂತ್ಯದ ವೇಳೆಗೆ ಈ ಪ್ರಕ್ರಿಯೆ ಬಹುತೇಕ ಪೂರ್ಣಗೊಳ್ಳಲಿದೆ,” ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ ಸ್ಪಷ್ಟಪಡಿಸಿದರು.

‘ಸಹಕಾರ ಸಂಘಗಳಲ್ಲಿ 22 ಲಕ್ಷ ರೈತರಿದ್ದು ಈ ಪೈಕಿ 18.71 ಲಕ್ಷ ಮಂದಿ ಸಾಲ ಮನ್ನಾ ಯೋಜನೆಯಡಿ ಬರುತ್ತಾರೆ. ಹಂತ ಹಂತವಾಗಿ ಮನ್ನಾ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ. ಹಣಕಾಸು ಇಲಾಖೆಯಿಂದ 2,600 ಕೋಟಿ ರೂ. ಅಪೆಕ್ಸ್‌ ಬ್ಯಾಂಕ್‌ಗೆ ಹೋಗಿದೆ. ಇದನ್ನು ಸಹಕಾರ ಸಂಘಗಳಿಗೆ ಶೀಘ್ರ ವರ್ಗಾಯಿಸಲಾಗುವುದು. ಇದುವರೆಗೆ 2 ಲಕ್ಷ ರೈತರ 868 ಕೋಟಿ ಮನ್ನಾ ಆಗಿದೆ” ಎಂದು ಸಚಿವರು ತಿಳಿಸಿದರು.

”ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಸಾಲ ಮಾಡಿಕೊಂಡವರ ಪೈಕಿ 5 ಲಕ್ಷ ರೈತರು ಹಸಿರು ಪಟ್ಟಿಯಲ್ಲಿದ್ದಾರೆ. ಇವರ ಸಾಲ ಮನ್ನಾ ಮಾಡಲು 1,300 ಕೋಟಿ ರೂ. ಅಗತ್ಯವಿದ್ದು ಒಂದೆರಡು ದಿನದಲ್ಲಿ ಈ ಸಂಬಂಧ ಅನುಮೋದನೆ ದೊರಕಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಡವರ ಬಂಧು : 10.35 ಕೋಟಿ ರೂ. ಬಿಡುಗಡೆ ಬಡವರ ಬಂಧು ಯೋಜನೆಯಡಿ 45 ಸಾವಿರ ಬೀದಿ ಬದಿ ವ್ಯಾಪಾರಿಗಳಿಗೆ ಸೌಲಭ್ಯ ನೀಡಲಾಗುವುದು. 18 ಸಾವಿರ ವ್ಯಾಪಾರಿಗಳಿಗೆ 10.35 ಕೋಟಿ ರೂ. ಒದಗಿಸಲಾಗಿದೆ. ಈ ಯೋಜನೆಗೆ ಒಟ್ಟಾರೆ 350 ಕೋಟಿ ರೂ. ಅಗತ್ಯವಿದೆ” ಎಂದು ಸಚಿವ ಬಂಡೆಪ್ಪ ಕಾಶೆಂಪುರ ತಿಳಿಸಿದರು.

About the author

ಕನ್ನಡ ಟುಡೆ

Leave a Comment