ರಾಜ್ಯ ಸುದ್ದಿ

ಬೆಳ್ಳಂದೂರು ಕೆರೆ: ರಾಜ್ಯಕ್ಕೆ ಎನ್’ಜಿಟಿ ತರಾಟೆ, ರೂ.75 ಕೋಟಿ ದಂಡ

ಬೆಂಗಳೂರು: ಬೆಳ್ಳಂದೂರು ಕೆರೆ ಉಳಿಸುವಂತೆ ಹತ್ತಾರು ಪ್ರತಿಭಟನೆಗಳು ನಡೆದಿದ್ದು, ಹಲವು ಬಾರಿ ಎನ್‌ಜಿಟಿಯೇ ಕೆರೆ ಸಂರಕ್ಷಣೆಗೆ ಕ್ರಮ ಕೈಗೊಳ್ಳು ವಂತೆ ಸೂಚಿಸಿತ್ತು. ಅದಾಗಿಯೂ ಉದಾಸೀನತೆ ತೋರಿದ ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದ ಎನ್‌ಜಿಟಿ, ಭಾರೀ ದಂಡ ವಿಧಿಸುವ ಮೂಲಕ ಬಿಸಿ ಮುಟ್ಟಿಸಿದೆ.

ಬೆಳ್ಳಂದೂರು ಕೆರೆಯ ಸಂರಕ್ಷಣೆಗೆ ಶೀಘ್ರ ಕ್ರಮಗಳನ್ನು ಕೈಗೊಳ್ಳುವಂತೆ ಎನ್‌ಜಿಟಿ ಆದೇಶ ಹೊರಡಿಸಿ ವರ್ಷ ಕಳೆದರೂ ಸಮರ್ಪಕವಾಗಿ ಯಾವುದೇ ಪರಿಹಾರ ಕ್ರಮಗಳನ್ನು ಸರ್ಕಾರ ಕೈಗೊಂಡಿಲ್ಲ. ಕೆರೆಯಲ್ಲಿನ ಕೆಲ ಭಾಗಗಳಲ್ಲಿ ಜೋಂಡು ತೆರವುಗೊಳಿಸಿದ್ದೇ ಸ್ಥಳೀಯ ಸಂಸ್ಥೆಗಳ ಸಾಧನೆಯಾಗಿದ್ದು, ಉಳಿದಂತೆ ಯಾವುದೇ ರೀತಿಯ ಪರಿಣಾಮಕಾರಿ ಕ್ರಮಗಳನ್ನು ಈವರೆಗೆ ಕೈಗೊಂಡಿಲ್ಲ.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕೆರೆಯ ದಡ ಕೈಗಾರಿಕೆಗಳು ಹಾಗೂ ವಸತಿ ಸಂಕೀರ್ಣಗಳಿಗೆ ಸಂಸ್ಕರಿಸಿದ ನಂತರ ತ್ಯಾಜ್ಯ ನೀರು ಹರಿಸು ವಂತೆ ನೋಟಿಸ್‌ ನೀಡಿದ್ದು, ಇದರಿಂದ ಮಾಲಿನ್ಯ ಕಡಿಮೆಯಾಗಲಿದೆ ಎಂದು ತಿಳಿಸಿತ್ತು. ಆದರೆ, ಕೆರೆಯಲ್ಲಿನ ನೊರೆಯ ಸಮಸ್ಯೆಗೆ ಈವರೆಗೆ ಪರಿಹಾರ ಸಿಕ್ಕಿಲ್ಲ. ಇನ್ನು ಕೆರೆಯಲ್ಲಿ ಆಮ್ಲಜನಕದ ಪ್ರಮಾಣ ಹೆಚ್ಚಿಸಲು ಏರಿಯೇಟರ್ ಅಳವಡಿಸುವ ಯೋಜನೆ ಕಾಗದಕ್ಕೆ ಸೀಮಿತವಾಗಿದ್ದು, ಕನಿಷ್ಠ ಪಕ್ಷ ಟೆಂಡರ್‌ ಕರೆಯಲು ಬಿಡಿಎ ಈವರೆಗೆ ಮುಂದಾಗಿಲ್ಲ.

ಬೆಳ್ಳಂದೂರು ಕೆರೆ ಒತ್ತುವರಿ ಪ್ರಕರಣಗಳನ್ನು ಗುರುತಿಸಿ ತೆರವುಗೊಳಿಸುವಂತೆಯೂ ಎನ್‌ಜಿಟಿ ಸೂಚಿಸಿದೆ. ಆದರೆ, ಈವರೆಗೆ ಜಿಲ್ಲಾಡಳಿತ ತೆರವು ತೆರವುಗೊಳಿಸಲು ಆಸಕ್ತಿ ತೋರಿಲ್ಲ. ಇನ್ನು ಸಮಸ್ಯೆ ಹೆಚ್ಚಾಗಿ ಸ್ಥಳೀಯರು ಪ್ರತಿಭಟನೆ ನಡೆಸಿದಾಗ ನಗರಾಭಿವೃದ್ಧಿ ಸಚಿವರು ಸಚಿವರು ಸ್ಥಳಕ್ಕೆ ಭೇಟಿ ಭರವಸೆ ನೀಡಿದರೆ, ಹೊರತು ಈವರೆಗೆ ಅಧಿಕಾರಿಗಳಿಗೆ ಖಡಕ್‌ ಆದೇಶ ನೀಡಿಲ್ಲ ಎಂಬ ಆರೋಪಗಳಿವೆ.

ಅನುದಾನದ ಕೊರತೆ ನೆಪ: ಎನ್‌ಜಿಟಿ ಆದೇಶದಂತೆ ಕೆರೆಯ ಅಭಿವೃದ್ಧಿ ಕಾರ್ಯ ಕ್ರಮಗಳನ್ನು ಆರಂಭಿಸಿ ಬಿಡಿಎ ಒಂದೆರಡು ತಿಂಗಳು ಕೆರೆಯಲ್ಲಿನ ಜೋಂಡು ತೆರವು ಕಾರ್ಯವನ್ನು ನಡೆಸಿತ್ತು. ಆ ಬಳಿಕ ಕೆರೆಗೆ ತಂತಿಬೇಲಿ ಅಳವಡಿಕೆ ಕಾರ್ಯ ಹಾಗೂ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡುವುದಾಗಿ ತಿಳಿಸಿದ್ದರು. ಆ ಬಳಿಕ ಅನುದಾನದ ಕೊರ ತೆಯ ನೆಪವೊಡ್ಡಿ ಸಂಪೂರ್ಣ ಅಭಿವೃದ್ಧಿ ಕಾಮಗಾರಿಗಳನ್ನು ಸ್ಥಗಿತಗೊಳಿಸಿದ್ದರು.

ಅವೈಜ್ಞಾನಿಕ ಜೋಂಡು ವಿಲೇವಾರಿ: ಬಿಡಿಎ ವತಿಯಿಂದ ಕೆರೆಯಲ್ಲಿನ ಸಾವಿರಾರು ಟನ್‌ ಜೋಂಡು ತೆರವುಗೊಳಿಸಲಾಗಿದೆ. ಆದರೆ, ತೆರವುಗೊಳಿಸಿ ಜೋಂಡನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಬಿಡಿಎ ಮುಂದಾಗಿಲ್ಲ. ಬದಲಾಗಿ ಒಂದು ಸ್ಥಳದಲ್ಲಿ ರಾಶಿ ಹಾಕಿರುವುದರಿಂದ ಮತ್ತೆ ಸಾಂಕ್ರಾಮಿಕ ರೋಗಗಳು ಹರಡುವಂತಹ ಆತಂಕವೂ ಶುರುವಾಗಿತ್ತು.

ಸುಪ್ರೀಂಗೆ ಮೇಲ್ಮನವಿ ಸಲ್ಲಿಕೆ
ಬೆಳ್ಳಂದೂರು ಕೆರೆ ಅಭಿವೃದ್ಧಿ ವಿಚಾರದಲ್ಲಿ ಎನ್‌ಜಿಟಿ ಬಿಬಿಎಂಪಿಗೆ ಹೆಚ್ಚಿನ ಜವಾಬ್ದಾರಿ ನೀಡಿರಲಿಲ್ಲ. ಕೇವಲ ಬೆಳ್ಳಂದೂರು ಕೆರೆಯಲ್ಲಿ ತ್ಯಾಜ್ಯ ವಿಲೇವಾರಿಯಾಗದಂತೆ ಎಚ್ಚರ ವಹಿಸುವಂತೆ ತಿಳಿಸಿತ್ತು. ಅದರಂತೆ ಬಿಬಿಎಂಪಿ ವತಿಯಿಂದ ಮೂರು ಪಾಳಿಗಳಲ್ಲಿ ಮಾರ್ಷಲ್‌ಗ‌ಳು ಕಾರ್ಯ ನಿರ್ವಹಿಸುತ್ತಿದ್ದು, ಕಳೆದೊಂದು ವರ್ಷದಲ್ಲಿ ಯಾವುದೇ ರೀತಿಯ ತ್ಯಾಜ್ಯ ವಿಲೇವಾರಿ ಪ್ರಕರಣ ವರದಿಯಾಗಿಲ್ಲ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್‌ ತಿಳಿಸಿದರು. ಪಾಲಿಕೆಗೆ ನೀಡಲಾದ ಜವಾಬ್ದಾರಿಯಲ್ಲಿ ಸಮರ್ಪಕವಾಗಿ ನಿರ್ವಹಿಸಲಾಗಿದ್ದರೂ, ಪಾಲಿಕೆಗೆ 25 ಕೋಟಿ ರೂ. ದಂಡ ವಿಧಿಸಿರುವುದು ಸರಿಯಲ್ಲ. ಎನ್‌ಜಿಟಿ ವಿಧಿಸಿರುವ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

 

About the author

ಕನ್ನಡ ಟುಡೆ

Leave a Comment