ರಾಜ್ಯ ಸುದ್ದಿ

ಬ್ಯಾಂಕ್​ ನೋಟಿಸ್​ ನೀಡಿದ್ರೆ ಡಬ್ಬಕ್ಕೆ ಎಸೆಯಿರಿ: ಸಚಿವ ಎಚ್​.ಡಿ.ರೇವಣ್ಣ

ಹಾಸನ: ಬ್ಯಾಂಕ್​ ನೋಟಿಸ್​ ನೀಡಿದರೆ ಡಬ್ಬಕ್ಕೆ ಎಸೆಯಿರಿ. ಈಗಾಗಲೇ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ನೋಟಿಸ್​ ನೀಡದಂತೆ ಹೇಳಿದ್ದರೂ ಮತ್ತೆ ಅದೇ ಕೆಲಸ ಮಾಡಿ ರೈತರಿಗೆ ಬೆದರಿಕೆ ಹಾಕುತ್ತಿದ್ದಾರೆ. ನೋಟಿಸ್​​ ನೀಡಿದ ಅಧಿಕಾರಿಯನ್ನು ಜೈಲಿಗೆ ಕಳುಹಿಸಬೇಕಾಗುತ್ತದೆ ಎಂದು ಸಚಿವ ರೇವಣ್ಣ ಅವರು ಖಡಕ್​ ಎಚ್ಚರಿಕೆಯನ್ನು ರವಾನಿಸಿದ್ದಾರೆ.

ಸಾಲಮನ್ನಾ ಆದೇಶ ನೀಡಿದ್ದರೂ ಬ್ಯಾಂಕ್​ಗಳಿಂದ ರೈತರಿಗೆ ನೋಟಿಸ್​ ನೀಡುತ್ತಿರುವ ವಿಚಾರವಾಗಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ನೋಟಿಸ್​ ನೀಡದಂತೆ ಬ್ಯಾಂಕ್​ ಅಧಿಕಾರಿಗಳ ಮೇಲೆ ನಿಗಾ ಇಡಲು ಜಿಲ್ಲಾಧಿಕಾರಿ ಹಾಗೂ ಪೊಲೀಸ್​ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದರು.

ಏನ್ರೀ ಪ್ರೀತಂ ಗೌಡ್ರೆ… ಸೆ.23ರಂದು ಹಾಸನದಲ್ಲಿ ನಡೆದಿದ್ದ ಸಿಎಂ ಕಾರ್ಯಕ್ರಮಕ್ಕೆ ಶಾಸಕ ಪ್ರೀತಂ ಗೌಡ ಗೈರು ವಿಚಾರವಾಗಿ ಏನ್ರೀ ಪ್ರೀತಂಗೌಡ್ರೆ, ಕಾರ್ಯಕ್ರಮಕ್ಕೆ ಯಾಕೆ ಬರಲಿಲ್ಲ?. ಆಹ್ವಾನ ಪತ್ರಿಕೆ ಕೊಟ್ಟು, ಫೋನ್ ಮಾಡಿ ಕರೆದಿದ್ದೇವೆ. ನೀವೆಲ್ಲಾ ನಮಗೆಲ್ಲಿ ಸಿಗ್ತೀರಾ ಎಂದು ರೇವಣ್ಣ ಅವರು ಡಿಸಿ ರೋಹಿಣಿ ಎದುರೇ ಕಿಚಾಯಿಸಿದರು. ಇಲ್ಲ ಸಾರ್, ನೀವು ನಮಗೆ ಆಹ್ವಾನ ನೀಡಿಲ್ಲ. ಗುದ್ದಲಿ ಪೂಜೆಗೆ ಹೋಗಿದ್ದೆ ಎಂದು ಪ್ರೀತಂ ಸಮಜಾಯಿಷಿ ನೀಡಿದರು.

ಸಚಿವ ಸಂಪುಟ ವಿಚಾರ ಸಿಎಂ ನೋಡಿಕೊಳ್ಳುತ್ತಾರೆ: ಸಚಿವ ಸಂಪುಟ ಖಾತೆ ಅದಲು-ಬದಲು ವಿಚಾರ ನನಗೆ ಗೊತ್ತಿಲ್ಲ. ಅದನ್ನು ಮುಖ್ಯಮಂತ್ರಿ ಅವರು ನೋಡಿಕೊಳ್ಳುತ್ತಾರೆ ಎಂದ ರೇವಣ್ಣ, ಹಾಸನದಲ್ಲಿ ಜೆಡಿಎಸ್ ವಿರುದ್ಧ ಕಾಂಗ್ರೆಸ್ ನಾಯಕರು ನಿರಂತರ ದೂರು ನೀಡಿರುವ ವಿಚಾರವಾಗಿ ಅದರ ಬಗ್ಗೆ ನನಗೆ ತಿಳಿದಿಲ್ಲ. ದಿನೇಶ್ ಗುಂಡುರಾವ್ ಪ್ರತಿಕ್ರಿಯೆ ನೀಡಲಿ ಎಂದು ಹೇಳಿದರು. 

About the author

ಕನ್ನಡ ಟುಡೆ

Leave a Comment