ರಾಜ್ಯ ಸುದ್ದಿ

ಭತ್ತದ ಪೈರಿನಲ್ಲಿ ಅಭಿಮಾನ ಮೆರೆದ ಅಂಬಿ ಅಭಿಮಾನಿಗಳು: ಟ್ವೀಟರ್ ನಲ್ಲಿ ಸುಮಲತಾ ಪೋಸ್ಟ್

ಮಂಡ್ಯ: ರೆಬೆಲ್ ಸ್ಟಾರ್  ಅಂಬರೀಷ್  ಭೌತಿಕವಾಗಿ ನಮ್ಮನ್ನು ಅಗಲಿರಬಹುದು, ಆದರೆ, ಅವರು ಕನ್ನಡಿಗರ ಮನೆ, ಮನಗಳಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ. ಅದರಲ್ಲೂ ಸಕ್ಕರೆ ನಾಡಿನ ಅಚ್ಚು ಮೆಚ್ಚಿನ ಅಣ್ಣನಾಗಿ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿದ್ದಾರೆ. ಅಂಬರೀಷ್  ಅಭಿಮಾನಿಗಳು  ವಿಶಿಷ್ಠ ರೀತಿಯಲ್ಲಿ ತಮ್ಮ ಅಭಿಮಾನ ಮೆರೆಯುತ್ತಿದ್ದು, ಭತ್ತದ ಪೈರಿನಲ್ಲೂ ಮತ್ತೆ ಹುಟ್ಟಿ ಬಾ ಅಂಬರೀಷ್  ಅಣ್ಣ ಎಂದು ಸಾರಿ ಹೇಳುತ್ತಿದೆ. ತಾಲೂಕಿನ ಮೊತ್ತಹಳ್ಳಿ ಗ್ರಾಮದ ಎಂ.ಪಿ. ಹರ್ಷಿತ್, ರಾಜು ಕಾಳಪ್ಪ, ಎಂ. ಜೆ. ದಿಲೀಪ್ ಕುಮಾರ್ ಸಹೋದರರು ತಮ್ಮ ಗದ್ದೆಯಲ್ಲಿ ಭತ್ತದ ಬಿತ್ತನೆ ಬೀಜ ಬಿತ್ತುವ ಮೂಲಕವೇ  ಅಂಬರೀಷ್ ಮೇಲಿನ ಅಭಿಮಾನ ಮೆರೆದಿದ್ದಾರೆ. ಇವರು ಅಂಬರೀಷ್ ಪುಣ್ಯತಿಥಿಯ ದಿನ ಕೇಶಮುಂಡನ ಮಾಡಿಸಿಕೊಂಡು ಶ್ರದ್ದಾಂಜಲಿ ಸಲ್ಲಿಸಿದ್ದರು.

ಬೇಸಿಗೆ ಬೆಳೆಗೆ ಕಳೆದ 15 ದಿನಗಳ ಹಿಂದೆ  ಗದ್ದೆಯಲ್ಲಿ ಭತ್ತದ ಹೊಟ್ಟಲು ಹಾಕಿದ್ದಾರೆ. ಗದ್ದೆಯ ನಡುವೆ ಹೃದಯಾಕಾರದಲ್ಲಿ ಮತ್ತೆ ಹುಟ್ಟಿ ಬಾ ಅಂಬರೀಷ್ ಅಣ್ಣಾ ಎಂದು ಬರೆದು ಬಿತ್ತನೆ ಬೀಜ ಬಿತ್ತಿದ್ದಾರೆ. ಈಗ ಪೈರು ಮೇಲಕ್ಕೆ ಬೆಳೆದು ಬಂದಿದ್ದು, ಅಂಬರೀಷ್  ಮೇಲಿನ ಅಭಿಮಾನವನ್ನು ಸಾಕ್ಷಿಕರಿಸುತ್ತಿದೆ. ಭತ್ತದ ಪೈರಿನಲ್ಲಿ ಮೂಡಿರುವ ಅಂಬರೀಷ್ ಅಭಿಮಾನದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅಂಬರೀಷ್ ಪತ್ನಿ ಸುಮಲತಾ ಟ್ವೀಟರ್ ನಲ್ಲಿ ಈ ಚಿತ್ರಗಳನ್ನು ಪ್ರಕಟಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ಶಾಶ್ವತ ಪ್ರೇಮ,  ಅಭಿಮಾನ ತೋರಿಸಲು ಎಂತಹ ಸುಂದರ ಅಭಿವ್ಯಕ್ತಿ, ಮನಸ್ಸು ತುಂಬಿ ಬಂದಿದೆ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.

About the author

ಕನ್ನಡ ಟುಡೆ

Leave a Comment