ರಾಷ್ಟ್ರ ಸುದ್ದಿ

ಭಯೋತ್ಪಾದನೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದು ಸರ್ಕಾರದ ಸಾಧನೆಯಲ್ಲವೇ: ಪ್ರಧಾನಿ ಮೋದಿ

ನವದೆಹಲಿ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್ ಪಿಎಫ್ ಯೋಧರ ಮೇಲೆ ನಡೆದ ಭಯೋತ್ಪಾದಕ ದಾಳಿಗೆ ಭಾರತ ನೀಡಿದ ಪ್ರತ್ಯುತ್ತರ ಕ್ರೆಡಿಟ್ ನ್ನು ಎನ್ ಡಿಎ ಸರ್ಕಾರ ತೆಗೆದುಕೊಳ್ಳುವುದು ತಪ್ಪಲ್ಲ ಎನ್ನುತ್ತಾರೆ ಪ್ರಧಾನಿ ನರೇಂದ್ರ ಮೋದಿ. ಆದರೆ ರಾಜಕೀಯ ಲಾಭಕ್ಕಾಗಿ ಬಿಜೆಪಿ ಸೇನಾಪಡೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂಬ ವಿರೋಧ ಪಕ್ಷಗಳ ಆರೋಪವನ್ನು ಅವರು ನಿರಾಕರಿಸುತ್ತಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಚುನಾವಣಾ ಪ್ರಚಾರದ ಮಧ್ಯೆ ನಿನ್ನೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಸಂದರ್ಶನ ನೀಡಿದ್ದರು. ತಮ್ಮನ್ನು ಟೀಕಿಸುವ ವಿರೋಧ ಪಕ್ಷದವರು ಮೌನವಾಗಿದ್ದರೆ ಪುಲ್ವಾಮಾ ದಾಳಿಗೆ ಸರ್ಕಾರ ಪ್ರತ್ಯುತ್ತರ ನೀಡುತ್ತಿರಲಿಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.

ವಿಂಗ್ ಕಮಾಂಡರ್ ಅಭಿನಂದನ್ ಭಾರತಕ್ಕೆ ವಾಪಸ್ಸಾಗಿರದಿದ್ದರೆ ವಿರೋಧ ಪಕ್ಷದವರು ಸುಮ್ಮನಿರುತ್ತಿದ್ದರೇ? ಪಾಕಿಸ್ತಾನದ ಭಯೋತ್ಪಾದಕರ ವಿರುದ್ಧ ಭಾರತೀಯ ಸೇನಾಪಡೆ ತೋರಿದ ಧೈರ್ಯ ಸಾಹಸ ಎಲ್ಲರಿಗೂ ಹೆಮ್ಮೆಯ ವಿಷಯವಲ್ಲವೇ? ಪಾಕಿಸ್ತಾನದೊಳಗೆ ನುಗ್ಗಿ ತಕ್ಕ ಉತ್ತರ ಕೊಟ್ಟಿದ್ದೇವೆ. ಕಾಂಗ್ರೆಸ್ ಸಹ ಸೇನಾಪಡೆಯ ಸಾಧನೆಯ ಕ್ರೆಡಿಟ್ ತೆಗೆದುಕೊಳ್ಳಬಹುದು, ಅವರನ್ನು ಯಾರು ಬೇಡವೆಂದರು ಎಂದು ಮೋದಿ ಪ್ರಶ್ನಿಸಿದ್ದಾರೆ. ಪುಲ್ವಾಮಾ ದಾಳಿಯ ನಂತರ ಚುನಾವಣಾ ಪ್ರಕ್ರಿಯೆವರೆಗಿನ ಬೆಳವಣಿಗೆಗಳ ಬಗ್ಗೆ ಹಲವು ಪ್ರಶ್ನೆಗಳಿಗೆ ಮೋದಿ ಉತ್ತರಿಸಿದರು. ಚುನಾವಣಾ ಪ್ರಚಾರಗಳಲ್ಲಿ ರಕ್ಷಣಾ ಪಡೆಯನ್ನು ಬಳಸಿಕೊಳ್ಳುತ್ತಿರುವುದನ್ನು ಅವರು ಒಪ್ಪಲಿಲ್ಲ.

ಒಂದು ಅಣೆಕಟ್ಟು ಕಟ್ಟಿದರೆ, ಅದನ್ನು ಆಡಳಿತಾರೂಢ ಸರ್ಕಾರ ಸಾಧನೆಯಲ್ಲಿ ಪಟ್ಟಿ ಮಾಡುವುದಿಲ್ಲವೇ, ಅದೇ ರೀತಿ ಪಾಕಿಸ್ತಾನಕ್ಕೆ ಕುಮ್ಮಕ್ಕು ನೀಡುವ ಭಯೋತ್ಪಾದನೆಗೆ ತಕ್ಕ ಉತ್ತರ ನೀಡಿದರೆ ಆಡಳಿತಾರೂಢ ಸರ್ಕಾರ ಅದನ್ನು ಸಾಧನೆ ಎಂದು ಅಂದುಕೊಳ್ಳುವುದಿಲ್ಲವೇ, ಇಲ್ಲಿ ದ್ವಂದ ನಿಲುವಿನ ಬಗ್ಗೆ ನನಗೆ ಬೇಸರವಾಗುತ್ತಿದೆ ಎಂದರು. ಅಂದು 26/11ರ ಸಮಯದಲ್ಲಿ ಮುಂಬೈ ಮೇಲೆ ಭಯೋತ್ಪಾದಕ ದಾಳಿಯಾಗಿದ್ದ ಸಂದರ್ಭದಲ್ಲಿ ಕೂಡ ದೇಶದಲ್ಲಿ ಚುನಾವಣೆ ನಡೆದಿತ್ತು. ಅಂದು ಸರ್ಕಾರವನ್ನು ಕೆಲವರು ಟೀಕಿಸುತ್ತಾಗ ತಟಸ್ಥ ನಿಲುವು ಹೊಂದಿದ್ದವರು ಭಾರತೀಯರೆಲ್ಲರೂ ಒಗ್ಗಟ್ಟಾಗಿ ನಿಲ್ಲಬೇಕು, ಇದು ಯುದ್ಧ ಮಾಡುವ ಸಮಯ ಎಂದು ಹೇಳಿದ್ದರು. ಆದರೆ ಇಂದು ಭಿನ್ನ ನಿಲುವು ಹೊಂದಿದ್ದಾರೆ. ಯಾಕೀ ಬದಲಾವಣೆ? ಭಾರತ ಈ ದಾಳಿಯಲ್ಲಿ ಗೆದ್ದಿದೆ ಎಂದೇ ಎಂದು ಕೇಳುತ್ತಾರೆ ಮೋದಿ.

ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ ಎನ್ನುವುದನ್ನು ಮೋದಿಯವರು ಒಪ್ಪುತ್ತಿಲ್ಲ. ಅಂದು ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಿಯಾಗಿದ್ದಾಗಲೂ ಇದೇ ರೀತಿಯ ಸುಳ್ಳು ಆರೋಪಗಳನ್ನು ಹಬ್ಬಿಸಿದ್ದರು ಎಂದ ಮೋದಿ ರಾಷ್ಟ್ರೀಯತೆ ವಿಷಯವನ್ನು ಮುಖ್ಯ ಚುನಾವಣಾ ಧ್ಯೇಯವನ್ನಾಗಿ ನಾವು ಹೊಂದಿಲ್ಲ ಎಂದು ಸ್ಪಷ್ಟಪಡಿಸಿದರು. ದೇಶದ ನಾಗರಿಕರಿಗೆ ಭಯೋತ್ಪಾದನೆ ವಿರುದ್ಧ ಸಿಟ್ಟು ಹೆಚ್ಚಾಗಿದೆ. ನೂರಾರು ವರ್ಷಗಳಿಂದ ಜನರು ಈ ಸಮಸ್ಯೆಯಿಂದ ನರಳುತ್ತಿದ್ದಾರೆ. ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ದೇಶದ ಭದ್ರತಾ ಕ್ರಮಗಳಿಗೆ ಕೋಟ್ಯಂತರ ರೂಪಾಯಿಗಳನ್ನು ನಾವು ಖರ್ಚು ಮಾಡಿದ್ದೇವೆ, ಇಂದು ಭಯೋತ್ಪಾದನೆ ವಿರುದ್ಧ ಸರ್ಕಾರ ಏನಾದರೊಂದು ಮಾಡುತ್ತದೆ ಎಂಬ ವಿಶ್ವಾಸ ಎನ್ ಡಿಎ ಸರ್ಕಾರ ಬಂದ ಮೇಲೆ ಜನರಲ್ಲಿ ಮೂಡಿದೆ ಎಂದರು.

ತಾವು ಚುನಾವಣಾ ರ್ಯಾಲಿಗೆ ಹೋದ ಕಡೆಗಳಲ್ಲೆಲ್ಲಾ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ಕಳೆದ ಬಾರಿ ಬಿಜೆಪಿ ಸೋಲು ಕಂಡಿದ್ದ ರಾಜಸ್ತಾನ, ಛತ್ತೀಸ್ ಗಢ ಮತ್ತು ಮಧ್ಯ ಪ್ರದೇಶಗಳಲ್ಲಿ ಕೂಡ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡುತ್ತದೆ, ಕಾಂಗ್ರೆಸ್ ತಾನು ಜನತೆಗೆ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಮೋದಿ ಹೇಳುತ್ತಾರೆ.

2019ರ ಲೋಕಸಭೆ ಚುನಾವಣೆ ಮೋದಿ, ಕಾಂಗ್ರೆಸ್ ಮತ್ತು ಬೇರೆ ಸ್ಥಳೀಯ ಪಕ್ಷಗಳ ಮಧ್ಯೆಯೇ, ಮೋದಿ ವರ್ಸಸ್ ಕಾಂಗ್ರೆಸ್ ಮಧ್ಯೆಯೇ ಎಂದು ಕೇಳಿದಾಗ ಅವರು, ತಮ್ಮ ಸಾಧನೆಗಳ ಬಗ್ಗೆ ದೇಶದ ಜನರು ಮಾತನಾಡುತ್ತಿದ್ದಾರೆ. ಆದರೆ ವಿರೋಧ ಪಕ್ಷಗಳಿಗೆ ಮೋದಿ ಹಠಾವೋ ಅನ್ನುವುದು ಬಿಟ್ಟರೆ ಬೇರೆ ವಿಷಯಗಳಿಲ್ಲ. ಈ ದೇಶದ ಜನರು ಮತ್ತು ಅವರ ಆಶೋತ್ತರಗಳು ಚುನಾವಣೆಯ ಮುಖ್ಯ ವಿಷಯಗಳಾಗಿವೆ. ರಾಜಕೀಯ ಪಂಡಿತರು ಲೆಕ್ಕಾಚಾರ ಮಾಡುವುದಕ್ಕಿಂತ ವಿಭಿನ್ನವಾಗಿ ದಕ್ಷಿಣ ಭಾರತದ ರಾಜಕೀಯ ಚಿತ್ರಣ ಬದಲಾಗಿದೆ ಎಂದರು. ಬಿಜೆಪಿಯಲ್ಲಿ ಎಲ್ಲಾ ಸಚಿವರು, ಸಂಸದರು ಮತ್ತು ಶಾಸಕರು ಟೀಂ ಇಂಡಿಯಾ ಹೆಸರಿನಲ್ಲಿ ಕೆಲಸ ಮಾಡುತ್ತಿದ್ದು ಇಂದು ಎಲ್ಲರೂ ಒಟ್ಟಾಗಿ ಜನರ ಬಳಿಗೆ ಮತ ಕೇಳಿಕೊಂಡು ಹೋಗುತ್ತಿದ್ದೇವೆ ಎಂದರು.

About the author

ಕನ್ನಡ ಟುಡೆ

Leave a Comment