ದೇಶ ವಿದೇಶ

ಭಯೋತ್ಪಾದನೆ ವಿರುದ್ಧ ಸಮರದಲ್ಲಿ ಭಾರತಕ್ಕೆ ಎಲ್ಲ ಬಗೆಯ ಸಹಕಾರ: ಸೌದಿ ದೊರೆ

ಹೊಸದಿಲ್ಲಿ: ಭಯೋತ್ಪಾದನೆ ಎಂಬುದು ಭಾರತ ಮತ್ತು ಸೌದಿ ಅರೇಬಿಯಾವನ್ನು ಕಾಡುತ್ತಿರುವ ಸಮಾನ ಪಿಡುಗಾಗಿದ್ದು, ಅದರ ದಮನಕ್ಕೆ ಗುಪ್ತಚರ ಮಾಹಿತಿಗಳನ್ನು ಭಾರತದ ಜತೆ ಹಂಚಿಕೊಳ್ಳಲು ಸಿದ್ಧ ಎಂದು ಸೌದಿ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೊರೆ ಸಲ್ಮಾನ್, ಭಾರತದ ಜತೆ ಎಲ್ಲ ರೀತಿಯ ರಾಜಕೀಯ ಸಹಕಾರಕ್ಕೆ ಸೌದಿ ಸಿದ್ಧವಿದೆ ಎಂದು ಘೋಷಿಸಿದರು.

‘ತೀವ್ರಗಾಮಿತ್ವ ಹಾಗೂ ಭಯೋತ್ಪಾದನೆ ನಮ್ಮೆರಡೂ ದೇಶಗಳಿಗೆ ಸಮಾನ ಶತ್ರುಗಳಾಗಿದ್ದು, ಗುಪ್ತಚರ ಮಾಹಿತಿಗಳ ಹಂಚಿಕೆ ಸಹಿತ ಎಲ್ಲ ರೀತಿಯ ಸಹಕಾರಕ್ಕೆ ನಾವು ಸಿದ್ಧವೆಂದು ಭಾರತಕ್ಕೆ ಭರವಸೆ ನೀಡಬಯಸುತ್ತೇವೆ’ ಎಂದು ದೊರೆ ಸಲ್ಮಾನ್ ನುಡಿದರು. ಕಾಶ್ಮೀರದ ಪುಲ್ವಾಮಾದಲ್ಲಿ 40 ಮಂದಿ ಸಿಆರ್‌ಪಿಎಫ್‌ ಯೋಧರನ್ನು ಬಲಿ ತೆಗೆದುಕೊಂಡ ಭಯೋತ್ಪಾದಕ ದಾಳಿ ಬಳಿಕ ಸೌದಿ ದೊರೆ ಭಾರತಕ್ಕೆ ಭೇಟಿ ನೀಡಿದ್ದಾರೆ. ಪಾಕ್ ಮೂಲದ ಜೈಷೆ ಮೊಹಮ್ಮದ್ ಉಗ್ರ ಸಂಘಟನೆ ಈ ದಾಳಿಯ ಹೊಣೆ ಹೊತ್ತುಕೊಂಡಿತ್ತು. ಭಯೋತ್ಪಾದನೆ ವಿರುದ್ಧದ ಸಮರ, ನೌಕಾ ಮತ್ತು ಸೈಬರ್ ಭದ್ರತೆ ವಲಯಗಳಲ್ಲಿ ಸಹಕಾರದ ಬಲವರ್ಧನೆಗೆ ಭಾರತ ಮತ್ತು ಸೌದಿ ದೊರೆ ಒಪ್ಪಿಕೊಂಡಿವೆ ಎಂದು ಪ್ರಧಾನಿ ಮೋದಿ ತಿಳಿಸಿದರು. ಇದಕ್ಕೆ ಮೊದಲು ಸೌದಿ ದೊರೆಗೆ ರಾಷ್ಟ್ರಪತಿ ಭವನದಲ್ಲಿ ಅದ್ದೂರಿ ಸ್ವಾಗತ ನೀಡಲಾಗಿತ್ತು.

About the author

ಕನ್ನಡ ಟುಡೆ

Leave a Comment