ಸಿನಿ ಸಮಾಚಾರ

‘ಭರ್ಜರಿ’ ಬಿಡುಗಡೆ ದಿನಾಂಕ ಖಚಿತ, ಶಿಘ್ರದಲ್ಲೇ ಎರಡನೇ ಹಾಡು ಬಿಡುಗಡೆ

ಬೆಂಗಳೂರು: ಧ್ರುವ ಸರ್ಜಾ ಅಭಿಮಾನಿಗಳು ಹಲವು ತಿಂಗಳುಗಳಿಂದ ‘ಭರ್ಜರಿ’ ರಿಲೀಸ್ ಯಾವಾಗ? ಎಂದು ಕಾತುರದಿಂದ ಕಾಯುತಿದ್ದಾರೆ. ಕಡೆಗೂ ಚಿತ್ರತಂಡದಿಂದ ಉತ್ತರ ಸಿಕ್ಕಿದೆ. ಸೆನ್ಸಾರ್ ಮಂಡಳಿಯಿಂದ ಯು/ಎ ಪ್ರಮಾಣಪ್ರತ ದೊರೆತಿದ್ದು, ಸೆ. 15ರಂದು ‘ಭರ್ಜರಿ’ ರಾಜ್ಯಾದ್ಯಂತ ಪ್ರದರ್ಶನಗೊಳ್ಳಲಿದೆ.

ಎಲ್ಲ ಗೀತೆಗಳನ್ನು ಒಟ್ಟಿಗೆ ರಿಲೀಸ್ ಮಾಡುವ ಬದಲು, ಒಂದೊಂದೇ ಹಾಡನ್ನು ದಾಟಿಸುತ್ತಿದೆ ಚಿತ್ರತಂಡ. ಕೆಲವೇ ದಿನಗಳ ಹಿಂದೆ ಬಂದ ಶೀರ್ಷಿಕೆ ಗೀತೆ ಈಗಾಗಲೇ ತುಂಬಾ ಸದ್ದು ಮಾಡಿದೆ. ತಾಂತ್ರಿಕವಾಗಿ ‘ಇವನ್ ವಂಶ ಸರ್ಜಾರಿ, ಇವನ್ ಆಲ್ವೇಸ್ ಭರ್ಜರಿ..’ ಹಾಡು ಸುಮಾರು 20 ಲಕ್ಷ ಬಾರಿ ವೀಕ್ಷಣೆಗೆ ಒಳಪಟ್ಟಿದೆ. ಧ್ರುವ ಹಾಕಿರುವ ಸ್ಟೆಪ್ಸ್ ಕಂಡು ಅಭಿಮಾನಿಗಳೂ ಖುಷ್ ಆಗಿದ್ದಾರೆ. ಇದರ ಹವಾ ಜೋರಾಗಿರುವಾಗಲೇ ಮತ್ತೊಂದು ಹಾಡನ್ನು ರಿಲೀಸ್ ಮಾಡಲು ಸಜ್ಜಾಗಿದೆ ‘ಭರ್ಜರಿ’ ಬಳಗ.

ವಿ. ಹರಿಕೃಷ್ಣ ಸಂಗೀತ ಸಂಯೋಜಿಸಿರುವ 4 ಹಾಡುಗಳ ಪೈಕಿ ಮೂರಕ್ಕೆ ನಿರ್ದೇಶಕ ಚೇತನ್ ಕುಮಾರ್ ಅವರೇ ಸಾಹಿತ್ಯ ರಚಿಸಿದ್ದಾರೆ. ಮತ್ತೊಂದಕ್ಕೆ ಎ.ಪಿ. ಅರ್ಜುನ್ ಪದ ಪೋಣಿಸಿದ್ದು, ‘ಬಾರೋ ರಂಗ..’ ಎಂಬ ಆ ಗೀತೆಯಲ್ಲಿ ನಾಯಕನ ಜತೆ ಚಿತ್ರದ ಮೂವರೂ ನಾಯಕಿಯರು ಹೆಜ್ಜೆ ಹಾಕಿರುವುದು ವಿಶೇಷ. ಹರಿಪ್ರಿಯಾ, ರಚಿತಾ ರಾಮ್ ಮತ್ತು ವೈಶಾಲಿ ದೀಪಕ್ ಕಲರ್​ಫುಲ್ ಆಗಿ ಕಾಣಿಸಿಕೊಂಡಿದ್ದಾರಂತೆ.

‘ಮೊದಲ ಹಾಡಿಗೆ ಸಿಕ್ಕಷ್ಟೇ ಅದ್ಭುತ ಪ್ರತಿಕ್ರಿಯೆ ಎರಡನೇ ಹಾಡಿಗೂ ಸಿಗಲಿದೆ’ ಎಂದು ಆತ್ಮವಿಶ್ವಾಸದ ನುಡಿಗಳನ್ನಾಡುತ್ತಾರೆ ನಿರ್ದೇಶಕರು. ಚಿತ್ರದ ಬಿಡುಗಡೆಗೆ ಇನ್ನು ಕೆಲವೇ ದಿನಗಳಿರುವುದರಿಂದ ಒಂದೊಂದಾಗಿ ಎಲ್ಲ ಹಾಡುಗಳನ್ನೂ ಯೂ- ಟ್ಯೂಬ್​ನಲ್ಲಿ ಬಿಡುಗಡೆ ಮಾಡಲು ಪ್ಲ್ಯಾನ್ ರೂಪಿಸ ಲಾಗಿದೆ. ಟ್ರೇಲರ್ ಹೊರ ಬರುವುದು ಬಾಕಿ ಇದ್ದು, ಶೀಘ್ರದಲ್ಲಿ ಅದನ್ನೂ ಅಭಿಮಾನಿ ಗಳಿಗೆ ನೀಡಲು ಚಿತ್ರತಂಡ ಸಿದ್ಧತೆ ಮಾಡಿ ಕೊಳ್ಳುತ್ತಿದೆ.

About the author

ಕನ್ನಡ ಟುಡೆ

Leave a Comment