ಕ್ರೀಡೆ

ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 31 ರನ್ ರೋಚಕ ಜಯ

ಅಡಿಲೇಡ್: ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ಗೆದ್ದು ಭಾರತ ತಂಡ ಸರಣಿಯಲ್ಲಿ ಶುಭಾರಂಭ ಮಾಡಿದೆ. ಈ ಮೂಲಕ ಮಹತ್ವದ ಆಸ್ಟ್ರೇಲಿಯಾ ಸರಣಿಯನ್ನು ಗೆಲ್ಲುವ ವಿಶ್ವಾಸ ಮೂಡಿಸಿದೆ. ಆಸ್ಟ್ರೇಲಿಯಾದಲ್ಲಿ ಮೊದಲ ಬಾರಿಗೆ ಭಾರತ ತಂಡ ಸರಣಿಯ ಮೊದಲ ಪಂದ್ಯ ಗೆದ್ದು ಇತಿಹಾಸ ನಿರ್ಮಿಸಿತು.

ಮೊದಲ ಟೆಸ್ಟ್ ಪಂದ್ಯದ ಅಂತಿಮ ದಿನವಾದ ಸೋಮವಾರ  291  ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 31  ರನ್ ಗಳ ಸೋಲನುಭವಿಸಿತು. ನಾಲ್ಕನೇ ದಿನದ ಅಂತ್ಯಕ್ಕೆ ನಾಲ್ಕು ವಿಕೆಟ್ ನಷ್ಟಕ್ಕೆ104 ರನ್ ಗಳಿಸಿದ್ದ ಆಸ್ಟ್ರೇಲಿಯಾ ಅಂತಿಮ ದಿನ ಪಂದ್ಯ ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿದರೂ ಭಾರತೀಯ ಬೌಲರ್ ಗಳ ಕರಾರುವಕ್ಕಾದ ದಾಳಿಗೆ ಶರಣಾಗಬೇಕಾಯಿತು.

31 ರನ್ ಮಾಡಿದ್ದ ಶಾನ್ ಮಾರ್ಷ್ ಮತ್ತು 14 ರನ್ ಮಾಡಿದ್ದ ಟ್ರಾವಿಸ್ ಹೆಡ್ ಅಂತಿಮ ದಿನದ ಬ್ಯಾಟಿಂಗ್ ಕಾಯ್ದುಕೊಂಡಿದ್ದರು. ಆದರೆ ತಂಡದ ಮೊತ್ತ 115 ತಲುಪುವಷ್ಟರಲ್ಲಿ ಟ್ರಾವಿಸ್ ಹೆಡ್ ಇಶಾಂತ್ ಶರ್ಮಾಗೆ ವಿಕೆಟ್ ಒಪ್ಪಿಸಿದರು. ಉತ್ತಮ ಬ್ಯಾಟಿಂಗ್ ಮಾಡಿದ ಶಾನ್ ಮಾರ್ಷ್ 60 ರನ್ ಗಳಿಸಿ ಆಸ್ಟ್ರೇಲಿಯಾ ಇನ್ನಿಂಗ್ಸ್ ನ ಏಕಮಾತ್ರ ಅರ್ಧಶತಕ ಬಾರಿಸಿದರು.

ಕೆಳ ಕ್ರಮಾಂಕದ ಬ್ಯಾಟ್ಸಮನ್ ಗಳೊಂದಿಗೆ ಉತ್ತಮ ಆಟವಾಡಿದ ನಾಯಕ ಟಿಮ್ ಪೈನ್ 41  ರನ್ ಗಳಿಸಿದರು. ಬಾಲಗೊಂಚಿಗಳಾದ ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್ ತಲಾ 28 ರನ್ ಗಳಿಸಿದರೆ, ಕೊನೆಯವರೆಗೆ ಭಾರತದ ಗೆಲುವಿಗೆ ಅಡ್ಡವಾಗಿ ನಿಂತ ನಥನ್ ಲಿಯೊನ್  38 ರನ್ ಗಳಿಸಿದರು.

ಭಾರತದ ಪರ ಬುಮ್ರಾಹ್  ಮೊಹಮ್ಮದ್ ಶಮಿ ಅಶ್ವಿನ್ ತಲಾ 3 ವಿಕೆಟ್  ಮತ್ತು ಇಶಾಂತ್ ಶರ್ಮ 1 ವಿಕೆಟ್ ಪಡೆದರು. ರಿಷಭ್ ಪಂತ್  ಈ ಪಂದ್ಯದಲ್ಲಿ ಒಟ್ಟು 11 ಕ್ಯಾಚ್ ಪಡೆದು ಹೊಸ ದಾಖಲೆ ಬರೆದರು.

ಭಾರತ ಮೊದಲ ಇನ್ನಿಂಗ್ಸ್ ನಲ್ಲಿ ಚೇತೇಶ್ವರ ಪೂಜಾರ ಶತಕದ ನೆರವಿನಿಂದ 250  ರನ್ ಗಳಿಸಿದ್ದರೆ , ಆಸ್ಟ್ರೇಲಿಯಾ 235 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಟ್ರಾವಿಸ್ ಹೆಡ್ 72 ರನ್ ಗಳಿಸದ್ದರೆ, ಭಾರತದ ಪರ ಬುಮ್ರಾಹ್ ಮತ್ತು ಅಶ್ವಿನ್ ತಲಾ 3  ವಿಕೆಟ್ ಪಡೆದಿದ್ದರು. 15 ರನ್ ಗಳ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆದ ಭಾರತ ದ್ವಿತೀಯ ಇನ್ನಿಂಗ್ಸ್ ನಲ್ಲಿ307 ರನ್ ಗಳಿಸಿತ್ತು. ಪೂಜಾರ 71, ರಹಾನೆ 70 ರನ್, ಕನ್ನಡಿಗ ರಾಹುಲ್ 44  ರನ್ ಗಳಿಸಿದ್ದರು.

ಪಂದ್ಯದ ಎರಡೂ ಇನ್ನಿಂಗ್ಸ್ ನಲ್ಲಿ ಅದ್ಭುತ ಬ್ಯಾಟಿಂಗ್ ನಡೆಸಿದ ಚೇತೇಶ್ವರ ಪೂಜಾರ ಪಂದ್ಯ ಪುರುಷ ಪ್ರಶಸ್ತಿಗೆ ಭಾಜರಾದರು.

ಎಕ್ಸ್ಟ್ರಾಟ್ರಾ  ಇನ್ನಿಂಗ್ಸ್ 
ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್, ದ. ಆಫ್ರಿಕಾದಲ್ಲಿ ಟೆಸ್ಟ್ ಪಂದ್ಯ ಗೆದ್ದ ಮೊದಲ ಭಾರತೀಯ ನಾಯಕ. ರಾಹುಲ್ ದ್ರಾವಿಡ್, ಮಹೇಂದ್ರ ಸಿಂಗ್ ಧೋನಿ ನಾಯಕರಾಗಿ ಇದುವರೆಗೆ ಆಸ್ಟ್ರೇಲಿಯಾದಲ್ಲಿ ಪಂದ್ಯ ಗೆದ್ದಿಲ್ಲ.
* ವಿರಾಟ್ ಕೊಹ್ಲಿ ಟೆಸ್ಟ್ ನಲ್ಲಿ ಇದುವರೆಗೂ ಟಾಸ್ ಗೆದ್ದು ಪಂದ್ಯ ಸೋತಿಲ್ಲ. ಕೊಹ್ಲಿ 20  ಪಂದ್ಯಗಳಲ್ಲಿ ಟಾಸ್ ಗೆದಿದ್ದು 17 ಪಂದ್ಯದಲ್ಲಿ ಭಾರತ ಗೆಲುವು ಕಂಡರೆ, 3 ಪಂದ್ಯ ಡ್ರಾ ಆಗಿತ್ತು.
ಈ ಪಂದ್ಯದಲ್ಲಿ ಒಟ್ಟು 34 ವಿಕೆಟ್ ಗಳು  ಕ್ಯಾಚ್ ಮೂಲಕ ಉರುಳಿದವು. 2018ರ  ಕೇಪ್ ಟೌನ್ ಪಂದ್ಯದಲ್ಲಿ ದ . ಆಫ್ರಿಕಾ- ಆಸ್ಟ್ರೇಲಿಯಾ 35  ವಿಕೆಟ್ ಗಳು ಕ್ಯಾಚ್ ಮೂಲಕ ಉರುಳಿದ್ದವು.
* ರಿಷಬ್ ಪಂಥ್ ಈ ಪಂದ್ಯದಲ್ಲಿ ಒಟ್ಟು 11 ವಿಕೆಟ್ ಉರುಳಲು ಕಾರಣರಾದರು. ಇದು ಭಾರತೀಯ ದಾಖಲೆಯಾಗಿದೆ. ಈ ಹಿಂದಿನ ದಾಖಲೆ ವೃದ್ಧಿಮಾನ್ ಸಾಹ ಹೆಸರಲ್ಲಿತ್ತು. (10)

About the author

ಕನ್ನಡ ಟುಡೆ

Leave a Comment