ರಾಜ್ಯ ಸುದ್ದಿ

ಭಾರತದಲ್ಲಿ ರಕ್ಷಣಾ ಉತ್ಪಾದನೆಯನ್ನು ಹೆಚ್ಚಿಸಲು ಮೋದಿ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ; ನಿರ್ಮಲಾ ಸೀತಾರಾಮನ್

ಬೆಂಗಳೂರು: ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಿಂದ ಭಾರತ ಜಾಗತಿಕ ಭೂಪಟದಲ್ಲಿ ಸ್ಥಾನ ಪಡೆಯಲಿದೆ. ಭಾರತದ ರಕ್ಷಣಾ ಮತ್ತು ವೈಮಾನಿಕ ಶಕ್ತಿ, ಸಾಮರ್ಥ್ಯಗಳನ್ನು ಮುಂದಿನ ವರ್ಷಗಳಲ್ಲಿ ಜಗತ್ತಿಗೇ ಸಾರಲಿದೆ ಎಂದು ರಕ್ಷಣಾ ಮಂತ್ರಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಅವರು ಇಂದು ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಏರೋ ಇಂಡಿಯಾ 2019 ವೈಮಾನಿಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು. ಮೇಕ್ ಇನ್ ಇಂಡಿಯಾ ಅಭಿಯಾನದಡಿ ಉತ್ಪಾದನಾ ವಲಯಗಳನ್ನು ಹೆಚ್ಚಿಸಲು ಸಹಾಯ ಮಾಡಲು ಭಾರತೀಯ ಉದ್ಯಮಿಗಳಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕರೆ ನೀಡುತ್ತಿದ್ದು ಹೆಚ್ಚೆಚ್ಚು ಉದ್ಯಮಿಗಳು ತೊಡಗಿಸಿಕೊಳ್ಳಬೇಕು ಎಂದರು.
ವೈಮಾನಿಕ ಕ್ಷೇತ್ರದಲ್ಲಿ ಭಾರತದಲ್ಲಿ ಬೆಂಗಳೂರು ನಗರ ತನ್ನದೇ ಆದ ಕೊಡುಗೆ ನೀಡುತ್ತಿದೆ. ನಾವು ಕಾಫಿ ಟೇಬಲ್ ಪುಸ್ತಕವೊಂದನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ಯುವ ಸ್ಟಾರ್ಟ್ ಅಪ್ ಗಳ ಸಾಧನೆಗಳನ್ನು ವಿವರಿಸಲಾಗಿದೆ. ವಿಮಾನಯಾನ ಕ್ಷೇತ್ರದಲ್ಲಿ ಸ್ಟಾರ್ಟ್ ಅಪ್ ಗಳು ಬಹಳ ದೊಡ್ಡ ಬದಲಾವಣೆ ತರುತ್ತಿವೆ ಎಂದರು.
ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಕೇಂದ್ರ ಸರ್ಕಾರ 1.27 ಲಕ್ಷದಷ್ಟು ಮೌಲ್ಯದ ರಕ್ಷಣಾ ಉಪಕರಣಗಳ ಸಂಗ್ರಹಕ್ಕೆ 150 ಒಪ್ಪಂದಗಳಿಗೆ ಸಹಿ ಹಾಕಿದೆ. ದೇಶದಲ್ಲಿ ರಕ್ಷಣಾ ವಲಯಕ್ಕೆ ಸಂಬಂಧಿಸಿದ ಉತ್ಪಾದನೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಪರವಾನಗಿ ಹೊಂದಿರುವ ರಕ್ಷಣಾ ಸಾಮಗ್ರಿಗಳ ಉತ್ಪಾದನೆ ಮಾಡುವ ಕಂಪೆನಿಗಳ ಸಂಖ್ಯೆ ಹೆಚ್ಚಾಗಿದೆ. ಒಟ್ಟು 424 ಕಂಪೆನಿಗಳು ಭಾಗಿಯಾಗಿವೆ ಎಂದರು.
ಹಲವು ರಕ್ಷಣಾ ಉಪಕರಣಗಳ ಉತ್ಪಾದನೆಗೆ ಮೂಲ ಉಪಕರಣ ಉತ್ಪಾದನೆ ಒಪ್ಪಂದಗಳಿಗೆ ಭಾರತೀಯ ಕಂಪೆನಿಗಳಿಗೆ ಮತ್ತು ತಯಾರಕರಿಗೆ ಸಂಗ್ರಹಣೆ ಆದೇಶವನ್ನು ಕೊಡುವ ಬಗ್ಗೆ ರಕ್ಷಣಾ ಇಲಾಖೆ ಭರವಸೆ ನೀಡುತ್ತದೆ ಎಂದರು.
ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವ ಸುರೇಶ್ ಪ್ರಭು ಮಾತನಾಡಿ, ಮುಂದಿನ 10-15 ವರ್ಷಗಳಲ್ಲಿ ದೇಶದಲ್ಲಿ 100ಕ್ಕೂ ಅಧಿಕ ವಿಮಾನ ನಿಲ್ದಾಣಗಳನ್ನು ಸ್ಥಾಪಿಸಲು ಯೋಜನೆ ನಡೆಯುತ್ತಿದೆ. ಯೋಜನೆಯ ಮೊತ್ತ ಸುಮಾರು 65 ಶತಕೋಟಿಗಳಷ್ಟು ಎಂದರು.
ವಿಷನ್ 2040 ಬಗ್ಗೆ ಕಾರ್ಯತಂತ್ರ ರೂಪಿಸಲಾಗುತ್ತಿದ್ದು, ಆ ಹೊತ್ತಿಗೆ ವಿಶ್ವದಲ್ಲಿ ಭಾರತ ವೈಮಾನಿಕ ಕ್ಷೇತ್ರದಲ್ಲಿ ಮೊದಲ ಅಥವಾ ಎರಡನೇ ಸ್ಥಾನದಲ್ಲಿರಬೇಕು ಎಂಬುದು ಇದರ ಗುರಿಯಾಗಿದೆ. ಈ ಗುರಿಯನ್ನು ತಲುಪಲು ಭಾರತ ಎರಡರಿಂದ ಮೂರು ಸಾವಿರ ಹೆಚ್ಚು ವಿಮಾನಗಳನ್ನು ಖರೀದಿಸಬೇಕಿದೆ ಎಂದರು. ಭಾರತಕ್ಕೆ ಅಗತ್ಯವಿರುವ ವಿಮಾನಗಳ ಉತ್ಪಾದನೆ ಕುರಿತು ಭಾರತ ನೀಲನಕ್ಷೆ ತಯಾರಿಸಲಿದೆ ಎಂದು ಸುರೇಶ್ ಪ್ರಭು ಹೇಳಿದರು.
ಹೂಡಿಕೆದಾರರು ವೈಮಾನಿಕ ಹಾಗೂ ಇತರ ವಲಯಗಳಲ್ಲಿ ಹೂಡಿಕೆ ಮಾಡುವಂತೆ ಕರೆ ನೀಡಿದ ರಕ್ಷಣಾ ಸಚಿವೆ ಇದರಿಂದ ಭಾರತದಲ್ಲಿ ಉತ್ಪಾದನೆಗೆ ಸಹಾಯವಾಗುತ್ತದೆ ಎಂದರು.

About the author

ಕನ್ನಡ ಟುಡೆ

Leave a Comment