ರಾಷ್ಟ್ರ ಸುದ್ದಿ

ಭಾರತದೊಂದಿಗಿನ ಸಂಬಂಧ ಸುಧಾರಣೆಗೆ ಮೊದಲು ನೀವು ಜಾತ್ಯಾತೀತರಾಗಿ: ಪಾಕ್ ಗೆ ಸೇನಾ ಮುಖ್ಯಸ್ಥ

ಪುಣೆ: ಭಾರತದೊಂದಿಗೆ ಶಾಂತಿ ಮಾತುಕತೆಗೆ ಆಗ್ರಹಿಸುತ್ತಿರುವ ಪಾಕಿಸ್ತಾನ ಮೊದಲು ಜಾತ್ಯಾತೀತವಾಗಬೇಕು ಎಂದು ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಹೇಳಿದ್ದಾರೆ. ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ಹೇಳಿಕೆಗೆ ಪುಣೆಯಲ್ಲಿ ನಡೆದ ಸೇನಾ ಕಾರ್ಯಕ್ರಮದಲ್ಲಿ ಪ್ರತಿಕ್ರಿಯಿಸಿರುವ ಬಿಪಿನ್ ರಾವತ್ ಅವರು, ಶಾಂತಿ ಮಾತುಕತೆಗೆ ಭಾರತ ಎಂದಿಗೂ ಅಡ್ಡಿ ಪಡಿಸಿಲ್ಲ. ಆದರೆ ಪಾಕಿಸ್ತಾನ ಒಂದು ಕೈಯಲ್ಲಿ ಉಗ್ರರ ಉತ್ತೇಜನ ಮಾಡಿ ಮತ್ತೊಂದು ಕೈಯಲ್ಲಿ ಭಾರತದೊಂದಿಗೆ ಶಾಂತಿ ಮಾತುಕತೆ ಆಹ್ವಾನ ನೀಡಿದರೆ ಅದನ್ನು ಒಪ್ಪಲು ಸಾಧ್ಯವಿಲ್ಲ. ಭಾರತದೊಂದಿಗಿನ ಸಂಬಂಧ ಸುಧಾರಣೆಗೆ ಮೊದಲು ಜಾತ್ಯಾತೀರಾಗಿ ಎಂದು ಹೇಳಿದ್ದಾರೆ.
ಶಾಂತಿ ಮಾತುಕತೆಗೆ ಬಯಸುತ್ತಿರುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಮೊದಲು ತಮ್ಮ ಆಂತರಿಕ ಪರಿಸ್ಥಿತಿಗಳನ್ನು ಗಮನಿಸಲಿ. ಪಾಕಿಸ್ತಾನ ತನ್ನನ್ನು ತಾನೇ ಇಸ್ಲಾಂ ರಾಷ್ಟ್ರವಾಗಿ ಬಿಂಬಿಸುತ್ತಿದೆ. ಆದರೆ ಭಾರತದೊಂದಿಗೆ ಸಂಬಂಧ ಸುಧಾರಣೆಯಾಗಬೇಕು ಎಂದರೆ ಅದು ಜಾತ್ಯಾತೀತ ರಾಷ್ಟ್ರವಾಗಿ ಬಗದಲಾಗಬೇಕು. ಮೊದಲು ತನ್ನ ನೆಲದ ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಆಗ ತಾನೇ ತಾನಾಗಿ ಗಡಿಯಲ್ಲಿ ಶಾಂತಿ ನೆಲೆಸಿ ಭಾರತ-ಪಾಕ್ ನಡುವಿನ ಸಂಬಂಧ ಸುಧಾರಣೆಯಾಗುತ್ತದೆ ಎಂದು ಹೇಳಿದ್ದಾರೆ.
ಇದೇ ವೇಳೆ ಭಾರತೀಯ ಸೇನೆಯಲ್ಲಿ ಮಹಿಳಾ ಸೈನಿಕರ ಸಂಖ್ಯೆ ಹೆಚ್ಚುತ್ತಿದೆ ಎಂದು ಮಾಹಿತಿ ನೀಡಿದ ರಾವತ್ ಅವರು, ಪುರುಷರಿಗೆ ಸರಿಸಮಾನವಾಗಿ ಮಹಿಳೆಯರು ಕಾರ್ಯ ನಿರ್ವಹಿಸುತ್ತಿರುವುದು ಗರ್ವದ ಸಂಗತಿ ಎಂದು ಹೇಳಿದರು. ಅಂತೆಯೇ ಮುಂದಿನ ದಿನಗಳಲ್ಲಿ ಯುದ್ಧ ಭೂಮಿಯೂ ಸೇರಿದಂತೆ ಸೇನೆಯ ಪ್ರಮುಖ ವಿಭಾಗಗಳಿಗೆ ಮಹಿಳಾ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗುತ್ತದೆ ಎಂದು ಹೇಳಿದರು.

About the author

ಕನ್ನಡ ಟುಡೆ

Leave a Comment