ರಾಜಕೀಯ

ಭಾರತದ ರಾಜಕೀಯದಲ್ಲಿ ಬಿಜೆಪಿ ಮುಳುಗುತ್ತಿರುವ ಹಡಗು: ಮಾಜಿ ಸಿಎಂ ಸಿದ್ದರಾಮಯ್ಯ ಲೇವಡಿ

ಬಾಗಲಕೋಟೆ: ಭಾರತದ ರಾಜಕೀಯದಲ್ಲಿ ಕೋಮುವಾದಿ ಪಕ್ಷ ಬಿಜೆಪಿ ಮುಳುಗುತ್ತಿರುವ ಹಡಗಿನಂತೆ ಆಗಿದೆ, ಬಿಜೆಪಿ ಜನರ ವಿಶ್ವಸಾರ್ಹತೆ ಕಳೆದುಕೊಳ್ಳುತ್ತಿದೆ, ಹೀಗಿರುವಾಗ ಮುಳುಗುವ ಹಡಗಿನಲ್ಲಿ ಯಾರಾದ್ರೂ ಕುಳಿತುಕೊಳ್ಳಲು ಬಯಸುತ್ತಾರಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಬಾಗಲಕೋಟೆಯಲ್ಲಿ ಶಾಸಕ ಆನಂದ ನ್ಯಾಮಗೌಡ ಆಯೋಜಿಸಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಸಂಪುಟ ವಿಸ್ತರಣೆ ಬಳಿಕ ಬಿಜೆಪಿ ಆಪರೇಷನ್ ಕಮಲ ಪ್ಲಾನ್ ಮಾಡುತ್ತಿದೆ ಎಂಬ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಯಾರೂ ರಾಜೀನಾಮೆ ಕೊಡಲ್ಲ, ಅತೃಪ್ತಿ ಯಾರಲ್ಲೂ ಇಲ್ಲ. ರಮೇಶ್ ಜಾರಕಿಹೊಳಿ ಕಾಂಗ್ರೆಸ್‍ಮ್ಯಾನ್. ಅವರು ಯಾವುದೇ ಕಾರಣಕ್ಕೂ ಪಕ್ಷ ಬಿಟ್ಟು ಹೋಗುವುದಿಲ್ಲ ಎಂಬ ವಿಶ್ವಾಸ ನನಗಿದೆ. ಮುಂದಿನ ಸಂಪುಟ ವಿಸ್ತರಣೆ ವೇಳೆಯಲ್ಲಿ ಈ ಬಾರಿ ಸಚಿವ ಸ್ಥಾನ ವಂಚಿತರಿಗೆ ಅವಕಾಶ ನೀಡಲಾಗವುದು ಎಂದು ಭರವಸೆ ನೀಡಿದರು. ಸಂಪುಟ ವಿಸ್ತರಣೆ ವೇಳೆ ಅವಕಾಶದಿಂದ ವಂಚಿತರಾದವರು ಅಸಮಾಧಾನಗೊಳ್ಳುವುದು ಸಹಜ, ಎಲ್ಲರಿಗೂ ಸಂಪುಟದಲ್ಲಿ ಮಂತ್ರಿಯಾಗಬೇಕೆಂಬ ಹಂಬಲವಿರುತ್ತದೆ. ಆದರೆ ಸಮ್ಮಿಶ್ರ ಸರ್ಕಾರದಲ್ಲಿ  ಅದು ಸಾಧ್ಯವಿಲ್ಲ, ಅಸಮಾಧಾನಗೊಂಡವರ ಜೊತೆ ನಾನು ಮಾತನಾಡುತ್ತೇನೆ ಎಂದು ಹೇಳಿದ್ದಾರೆ.
ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಅವರ ಅಸಮಾಧಾನದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ರಾಮಲಿಂಗಾ ರೆಡ್ಡಿ ಅವರು ಹಿರಿಯರು. ಅವರಿಗೆ ಸಹಜವಾಗಿ ಸಚಿವ ಸ್ಥಾನ ಸಿಗದೇ ಇರುವುದು ಅಸಮಾಧಾನ ಇದೆ. ಈ ಬಗ್ಗೆ ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತದೆ. ಆದರೆ ರಾಮಲಿಂಗಾ ರೆಡ್ಡಿ ಅವರಿಗೆ ಸಚಿವ ಸ್ಥಾನ ಸಿಗದಂತೆ ಯಾರು ಷಡ್ಯಂತ್ರ ಮಾಡಿಲ್ಲ, ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದರು. ಜಮಖಂಡಿ ಮತದಾರ ನೀಡಿದ ಫಲಿತಾಂಶ ಇಡೀ ದೇಶಕ್ಕೆ ಉತ್ತಮ ಸಂದೇಶ ನೀಡಿದೆ. ಹೀಗಾಗಿ ಕಾಂಗ್ರೆಸ್‌ ದೇಶದ ಹೃದಯ ಭಾಗ ಗೆಲ್ಲಲು ಸಾಧ್ಯವಾಯಿತು. ಬಿಜೆಪಿಯವರು ರಾಹುಲ್‌ ಗಾಂಧಿ ವಿರುದ್ಧ ಹಗುರವಾಗಿ ಮಾತನಾಡಿ, ತೇಜೋವಧೆ ಮಾಡುತ್ತಿದ್ದಾರೆ. ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ದೇಶದ ಅರ್ಥ ವ್ಯವಸ್ಥೆ ಹಾಳಾಗಿದೆ ಎಂದು ಉಪಮುಖ್ಯಮಂತ್ರಿ ಜಿ ಪರಮೇಶ್ವರ್ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.

About the author

ಕನ್ನಡ ಟುಡೆ

Leave a Comment