ರಾಜ್ಯ ಸುದ್ದಿ

ಭಾರತ್ ಬಂದ್: ಕೆಎಸ್ಆರ್ ಟಿಸಿ ಸ್ತಬ್ಧ, ಬಿಎಂಟಿಸಿ ಸಂಚಾರ ವಿರಳ ಆಟೋ ದರ ದುಪ್ಪಟ್ಟು

ಬೆಂಗಳೂರು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಎರಡು ದಿನಗಳಾ ಕಾಲ ಭಾರತ್ ಬಂದ್’ಗೆ ಕರೆ ನೀಡಿದ್ದು, ಬಂದ್ ಕರೆಗೆ ವ್ಯಾಪಕ ಬೆಂಬಲ ವ್ಯಕ್ತವಾಗುವ ನಿರೀಕ್ಷೆಗಳು ಮೂಡತೊಡಗಿವೆ.
ಕಾರ್ಮಿಕರ ಭಾರತ್ ಬಂದ್ ಕರೆಗೆ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಪಕ್ಷಗಳು ಬೆಂಬಲ ವ್ಯಕ್ತಪಡಿಸಿದ್ದು, ಈಗಾಗಲೇ ಹಲವೆಡೆ ಬಂದ್ ಆಚರಿಸಲಾಗುತ್ತಿದೆ. ಹಲವೆಡೆ ಬಿಎಂಟಿಸಿ ಬಸ್ ಗಳ ಮೇಲೆ ಕಲ್ಲು ತೂರಾಟ ನಡೆದಿರುವುದಾಗಿ ವರದಿಗಳು ತಿಳಿಸಿವೆ. ರಾಜ್ಯದಾದ್ಯಂತ ಕೆಎಸ್ಆರ್’ಟಿಸಿ ಬಸ್ ಸೇವೆಗಳು ಸ್ಥಗಿತಗೊಂಡಿದ್ದು, ಅಲ್ಲಲ್ಲಿ ಬಿಎಂಟಿಸಿ ಬಸ್ ಗಳ ಸಂಚಾರ ನಡೆಸುತ್ತಿವೆ. ಇನ್ನು ಆಟೋ, ಬ್ಯಾಂಕ್, ಅಂಗನವಾಡಿ, ಬಿಸಿಯೂಟ ಸೇವೆಗಳು ಬಹುತೇಕ ವ್ಯತ್ಯಯವಾಗುವ ಸಾಧ್ಯತೆಗಳಿವೆ.
ಕ್ಯಾಬ್ ಸೇವೆಗಳು ಸ್ಥಗಿತಗೊಂಡಿದ್ದು, ಕೆಲ ಆಟೋ ಚಾಲಕರು ಸಾರ್ವಜನಿಕರಿಂದ ದುಪ್ಪಟ್ಟು ಹಣ ಪಡೆಯುತ್ತಿರುವುದಾಗಿ ವರದಿಗಳು ತಿಳಿಸಿವೆ. ಆ್ಯಂಬುಲೆನ್ಸ್, ಆಸ್ಪತ್ರೆ, ಹಾಲು, ಪತ್ರಿಕೆ, ಹೋಟೆಲ್, ತರಕಾರಿ ಸೇರಿದಂತೆ ಅಗತ್ಯ ಹಾಗೂ ತುರ್ತು ಸೇವೆಗಳು ಎಂದಿನಂತೆ ಮುಂದುವರೆದಿವೆ. ಸಾಕಷ್ಟು ಜಿಲ್ಲಾಡಳಿತಗಳು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದು, ಬಹುತೇಕ ಖಾಸಗಿ ಶಾಲಾ-ಕಾಲೇಜುಗಳು ಕೂಡ ಎರಡು ದಿನಗಳ ಕಾಲ ರಜೆ ಘೋಷಣೆ ಮಾಡಿವೆ. ಬಂದ್ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ನಿಗದಿಯಾಗಿದ್ದ ರಾಜ್ಯದ ಹಲವು ವಿಶ್ವವಿದ್ಯಾಲಯಗಳ ಪರೀಕ್ಷೆಗಳನ್ನು ಮುಂದೂಡಲಾಗಿದೆ.

About the author

ಕನ್ನಡ ಟುಡೆ

Leave a Comment